ಚಂದ್ರನ ಸನಿಹಕ್ಕೆ ಇಸ್ರೋ ನೌಕೆ – ಸೆರೆಯಾಯ್ತು ಸುಂದರ ದೃಶ್ಯ

ಚಂದ್ರನ ಸನಿಹಕ್ಕೆ ಇಸ್ರೋ ನೌಕೆ – ಸೆರೆಯಾಯ್ತು ಸುಂದರ ದೃಶ್ಯ

ನವದೆಹಲಿ: ಇಸ್ರೋನ ಮಹತ್ವಾಕಾಂಕ್ಷೆಯ ಯೋಜನೆಯಾಗಿರುವ ಚಂದ್ರಯಾನ-3ಗೆ ಮತ್ತೊಂದು ಹಂತದಲ್ಲೂ ಯಶಸ್ಸು ಸಿಕ್ಕಿದೆ. ಚಂದ್ರಯಾನ-3 ಮಿಷನ್‍ನ ಬಾಹ್ಯಾಕಾಶ ನೌಕೆ ಚಂದ್ರನ ಕಕ್ಷೆಯನ್ನು ಪ್ರವೇಶಿಸುತ್ತಿದ್ದಂತೆಯೇ ಚಂದ್ರನ ಕೆಲ ಫೋಟೊ ಹಾಗೂ ವಿಡಿಯೋಗಳನ್ನು ಸೆರೆ ಹಿಡಿದಿದೆ. ಇದರ ವೀಡಿಯೊ ಕ್ಲಿಪ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಎಕ್ಸ್ ಅಥವಾ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.

ಚಂದ್ರನ ಮೊದಲ ಫೋಟೋ ಹಾಗೂ ವಿಡಿಯೋಗಳನ್ನು ಇಸ್ರೋ  ಹಂಚಿಕೊಂಡಿದ್ದು ಅವು ಅದ್ಭುತವಾಗಿ ಕಾಣುತ್ತಿವೆ! ಆಗಸ್ಟ್ 3, 5 ರಂದು ಚಂದ್ರನ ಕಕ್ಷೆ ಸೇರ್ಪಡೆ (ಎಲ್ಒಐ) ಸಮಯದಲ್ಲಿ #Chandrayaan2023 ಬಾಹ್ಯಾಕಾಶ ನೌಕೆ ಚಂದ್ರನನ್ನು ವೀಕ್ಷಿಸಿದೆ  ಎಂದು ಇಸ್ರೋ ಎಕ್ಸ್‍ನಲ್ಲಿ ಬರೆದಿದೆ. ಚಂದ್ರನ ಮೇಲ್ಮೈಯಲ್ಲಿ  ಲ್ಯಾಂಡರ್‌ ಇಳಿಯಲು ಕೆಲವೇ ದಿನಗಳು ಬಾಕಿ ಉಳಿದಿವೆ. ಇದೀಗ ಚಂದ್ರಯಾನ-3 ನೌಕೆ ಅದರ ಕಡೆಗೆ ಸಮೀಪಿಸುತ್ತಿದ್ದಂತೆ ಚಂದ್ರನ ಕುಳಿಗಳ ಸಂಕೀರ್ಣ ವಿವರಗಳ ಒಂದು ತುಣುಕನ್ನು ನೌಕೆ ಕಳಿಸಿದೆ.

ಇದನ್ನೂ ಓದಿ: ಚಂದ್ರನಿಗೆ ಇನ್ನಷ್ಟು ಹತ್ತಿರ ಸಮೀಪಿಸಿದ ಚಂದ್ರಯಾನ – 3 ಗಗನನೌಕೆ – 2.6 ಲಕ್ಷ ಕಿ.ಮೀ. ಕ್ರಮಿಸಿದ ಲ್ಯಾಂಡರ್​

ಚಂದ್ರಯಾನ -3 ಭಾರತದ ಮೂರನೇ ಮಾನವರಹಿತ ಚಂದ್ರಯಾನ ಮಿಷನ್ ಆಗಿದ್ದು, ಸುಮಾರು 3 ಲಕ್ಷದ 84 ಸಾವಿರ ಕಿ.ಮೀ. ದೂರವನ್ನುಕ್ರಮಿಸಿದ ನಂತರ ಶನಿವಾರ ಚಂದ್ರನ ಕಕ್ಷೆಯನ್ನು ಯಶಸ್ವಿಯಾಗಿ ಪ್ರವೇಶಿಸಿದೆ. ‘ನಾನು ಚಂದ್ರನ ಗುರುತ್ವಾಕರ್ಷಣೆಯನ್ನು ಅನುಭವಿಸುತ್ತಿದ್ದೇನೆ’ ಎಂಬುದು ಚಂದ್ರಯಾನ -3 ಅನ್ನು ಚಂದ್ರನ ಹತ್ತಿರಕ್ಕೆ ತಂದ ಪ್ರಮುಖ ಮೈಲಿಗಲ್ಲನ್ನು ಸಾಧಿಸಿದ ನಂತರ ಇಸ್ರೋಗೆ ನೀಡಿದ ಸಂದೇಶವಾಗಿತ್ತು. ಜುಲೈ 14 ರಂದು ಉಡಾವಣೆಯಾದ ಮೂರು ವಾರಗಳಲ್ಲಿ ಭೂಮಿಯ ಗುರುತ್ವಾಕರ್ಷಣೆಯ ವಿರುದ್ಧ ಹೋಗಿ ಚಂದ್ರನನ್ನು ತಲುಪುವ ಪ್ರಯತ್ನದಲ್ಲಿ ನೌಕೆ ಐದುಕ್ಕೂ ಹೆಚ್ಚು ಬಾರಿ ಇಂಜಿನ್‍ ಅನ್ನು ಚಾಲನೆಗಳನ್ನು ಮಾಡಿದೆ. ಚಂದ್ರಯಾನ-3 ನೌಕೆ ಇಂದು ರಾತ್ರಿ 11 ಗಂಟೆಗೆ ಮತ್ತೊಂದು ಮನ್ಯೂವರ್‍ ಮಾಡಲಿದ್ದು ನಂತರ, ರೋವರ್ ಪ್ರಜ್ಞಾನ್ ಅನ್ನು ಹೊತ್ತ ಲ್ಯಾಂಡಿಂಗ್ ಮಾಡ್ಯೂಲ್ ವಿಕ್ರಮ್ ತನ್ನ ಪ್ರೊಪಲ್ಷನ್ ಮಾಡ್ಯೂಲ್ನಿಂದ ಬೇರ್ಪಡಲಿದೆ. ಅದಕ್ಕೂ ಮೊದಲು ಇನ್ನೂ ಮೂರು ಮನ್ಯೂವರ್‌ಗಳು ಉಳಿದಿವೆ.

suddiyaana