ರಿಲೇ ಓಡಿದ ಕೆಲವೇ ಕ್ಷಣಗಳಲ್ಲಿ ನಡೆದುಹೋಯ್ತು ದುರಂತ – ಹತ್ತನೇ ತರಗತಿ ವಿದ್ಯಾರ್ಥಿಯ ದಾರುಣ ಸಾವು
ಓಟ ಅಂದರೆ ಆ ಬಾಲಕನಿಗೆ ತುಂಬಾ ಇಷ್ಟ. ಹೀಗಾಗಿ ಓಟದಲ್ಲಿ ಯಾವಾಗಲೂ ಮುಂದೆಯೇ ಇರುತ್ತಿದ್ದ. ಈ ಬಾರಿಯೂ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಆ ಬಾಲಕ ಎಲ್ಲರ ಗಮನಸೆಳೆದಿದ್ದ. ಗ್ರಾಮೀಣ ಪ್ರತಿಭೆಗೆ ಎಲ್ಲರೂ ಚಪ್ಪಾಳೆ ಮೂಲಕ ಪ್ರೋತ್ಸಾಹ ನೀಡಿದ್ದರು. ನಂತರ ನಡೆದ ರಿಲೇ ಸ್ಪರ್ಧೆಯಲ್ಲೂ ತಾನೂ ಮುಂದೆ ಇದ್ದರೂ ಎರಡನೇ ಸ್ಥಾನಕ್ಕೆ ತೃಪ್ತಿಪಡಬೇಕಾಯ್ತು. ಇದಾಗಿ ಕೆಲವೇ ಕ್ಷಣಗಳಷ್ಟೇ.. ಓಟವೇ ಜೀವಾಳವಾಗಿದ್ದ ಬಾಲಕನಿಗೆ ಇದೇ ಓಟವೇ ಪ್ರಾಣಕ್ಕೆ ಕಂಟಕವಾಗಿ ಪರಿಣಮಿಸಿತ್ತು.
ಇದನ್ನೂ ಓದಿ: ಕಲುಷಿತ ನೀರು ಸೇವನೆ ಪ್ರಕರಣ – ಸಾವಿನ ಸಂಖ್ಯೆ 6ಕ್ಕೆ ಏರಿಕೆ, 16 ಮಂದಿ ಸ್ಥಿತಿ ಚಿಂತಾಜನಕ
ತುಮಕೂರು ತಾಲೂಕಿನ ಚಿಕ್ಕತೋಟುಕೆರೆಯಲ್ಲಿ 10ನೇ ವಿದ್ಯಾರ್ಥಿಯೊಬ್ಬ ದಾರುಣವಾಗಿ ಸಾವನ್ನಪ್ಪಿದ್ದಾನೆ. ಬೆಳಧಾರ ಗ್ರಾಮೀಣ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿ ಭೀಮಾಶಂಕರ್ ಮೃತಪಟ್ಟ ದುರ್ದೈವಿ ಬಾಲಕ. ಭೀಮಾಶಂಕರ್ 12 ಸದಸ್ಯರ ರಿಲೇ ತಂಡದ ಸದಸ್ಯನಾಗಿದ್ದ. ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ರಿಲೇ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನದಲ್ಲಿ ಗೆದ್ದಿದ್ದ. ಇದಾದ ಮೇಲೆ ನಡೆದಿದ್ದು ಘೋರ ದುರಂತ. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜು ವಿವರಿಸಿದ್ದಾರೆ. ಗುರುವಾರ ಸಂಜೆ 5.45 ಕ್ಕೆ ಮುಕ್ತಾಯಗೊಂಡ ರಿಲೇಯಲ್ಲಿ ನಮ್ಮ ತಂಡವು ಎರಡನೇ ಸ್ಥಾನವನ್ನು ಗಳಿಸಿದೆ. ಆರಂಭದಲ್ಲಿ ಭೀಮಾಶಂಕರ್ ತಮ್ಮ ತಂಡಕ್ಕೆ ಮುನ್ನಡೆ ಒದಗಿಸಿದ್ದ. ಆದರೆ ನಂತರ ಬಂದವರಿಗೆ ಮುನ್ನಡೆ ಮುಂದುವರಿಸಲು ಸಾಧ್ಯವಾಗಲಿಲ್ಲ. ಹೀಗಾಗಿ ಮೊದಲ ಸ್ಥಾನ ಪಡೆಯಲು ಸಾಧ್ಯವಾಗದೇ ಇರುವುದು ಕೂಡಾ ಭೀಮಾಶಂಕರ್ ಮನಸಿಗೆ ನೋವಾಗಿತ್ತು. ಓಟದ ನಂತರ, ಶಿಕ್ಷಕರು ವಾಪಸ್ ಗ್ರಾಮಕ್ಕೆ ಮರಳಲು ವಾಹನವನ್ನು ಹತ್ತುವಂತೆ ವಿದ್ಯಾರ್ಥಿಗಳಿಗೆ ಸೂಚಿಸಿದರು. ಆದರೆ ಸಂಜೆ 6 ಗಂಟೆ ಸುಮಾರಿಗೆ ಭೀಮಾಶಂಕರ್ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಶ್ರೀದೇವಿ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಮತ್ತು ರಿಸರ್ಚ್ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಭೀಮಾಶಂಕರ್ ಮೃತಪಟ್ಟಿರುವುದಾಗಿ ಘೋಷಿಸಿದರು. ಹೃದಯ ಸ್ತಂಭನದಿಂದ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾಗಿ ನಾಗರಾಜು ಹೇಳಿದರು. ಭೀಮಾಶಂಕರ್ ಅವರ ತಂದೆ ಬಸವರಾಜು ಯಾದಗಿರಿ ಜಿಲ್ಲೆಯ ಸುರಪುರ ತಾಲ್ಲೂಕಿನ ನಾಗನೂರು ಗ್ರಾಮದವರಾಗಿದ್ದು, ಕೆಂಚಯ್ಯನಪಾಳ್ಯದ ಇಟ್ಟಿಗೆ ಗೂಡುಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಘಟನೆ ಸಂಬಂಧ ಭೀಮಾಶಂಕರ್ ತಂದೆ ಕೋರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ನಂತರ ಬಾಲಕನ ಶವವನ್ನು ಪೋಷಕರಿಗೆ ಹಸ್ತಾಂತರಿಸಲಾಯಿತು.