ಒಬ್ಬ ತಪ್ಪು ಮಾಡಿದ್ರೆ ಮೂರು ತಲೆಮಾರಿನವರಿಗೆ ಶಿಕ್ಷೆ – ಉತ್ತರ ಕೊರಿಯಾದಲ್ಲಿವೆ ವಿಚಿತ್ರ ಕಾನೂನುಗಳು

ಒಬ್ಬ ತಪ್ಪು ಮಾಡಿದ್ರೆ ಮೂರು ತಲೆಮಾರಿನವರಿಗೆ ಶಿಕ್ಷೆ – ಉತ್ತರ ಕೊರಿಯಾದಲ್ಲಿವೆ ವಿಚಿತ್ರ ಕಾನೂನುಗಳು

ಉತ್ತರ ಕೊರಿಯಾ. ಪೂರ್ವ ಏಷ್ಯಾದಲ್ಲಿ ನೆಲೆಗೊಂಡಿರುವ ದೇಶ. ವಿಶ್ವದಲ್ಲೇ ಅತ್ಯಂತ ದಮನಕಾರಿ ದೇಶ ಎಂಬ ಕುಖ್ಯಾತಿ ಹೊಂದಿದೆ. ಯಾಕೆಂದರೆ ಸರ್ವೋಚ್ಚ ನಾಯಕ ಕಿಮ್ ಜಾಂಗ್ ಉನ್ ಆಳ್ವಿಕೆ ನಡೆಸುತ್ತಿರುವ ಈ ದೇಶದಲ್ಲಿ ನಿರಂಕುಶ ರಾಷ್ಟ್ರ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುತ್ತಾ, ನಾಗರಿಕರ ಮೇಲೆ ವಿಚಿತ್ರ ಕಾನೂನುಗಳನ್ನು ಹೇರುತ್ತಿದೆ. ಉತ್ತರ ಕೊರಿಯಾದಲ್ಲಿ ಜನಜೀವನ ಎಷ್ಟೊಂದು ಕಷ್ಟಕರವಾಗಿದೆ ಎಂದರೆ ಅಲ್ಲಿ ಮಾಹಿತಿ, ಚಲನೆ, ವಾಕ್ ಸ್ವಾತಂತ್ರಕ್ಕೂ ನಿರ್ಬಂಧ ಇದೆ. ಅಲ್ಲಿನ ಸರ್ಕಾರ ಆರ್ಥಿಕತೆ, ಮಾಧ್ಯಮ, ರಾಜಕೀಯ ವ್ಯವಸ್ಥೆ ಸೇರಿದಂತೆ ಸಮಾಜದ ಪ್ರತಿಯೊಂದು ಕ್ಷೇತ್ರವನ್ನು ಅತ್ಯಂತ ಕ್ರೂರ ಹಾಗೂ ಕಟ್ಟುನಿಟ್ಟಿನಿಂದ ನಿಯಂತ್ರಿಸುತ್ತಿದೆ.

ಇದನ್ನೂ ಓದಿ : ದೇವರೇ.. ನಾನು ಪ್ರಪಂಚದಲ್ಲೇ ಸರ್ವಾಂಗ ಸುಂದರನಾಗಬೇಕು..! – ದೇವಿ ಮುಂದೆ ಭಕ್ತನ ಹೀಗೊಂದು ಬೇಡಿಕೆ

ಉತ್ತರ ಕೊರಿಯಾ ತುಂಬಾ ದೊಡ್ಡ ದೇಶವೂ ಅಲ್ಲ. ಸುಮಾರು 2.6 ಕೋಟಿ ಜನಸಂಖ್ಯೆಯಿರುವ ಈ ಪುಟ್ಟ  ರಾಷ್ಟ್ರದಲ್ಲಿ ಪ್ರಪಂಚದಲ್ಲೇ ಬೇರೆಲ್ಲೂ ಇಲ್ಲದಂತಹ ಹಲವು ವಿಚಿತ್ರ ಕಾನೂನುಗಳಿವೆ. ಮಾನವ ಹಕ್ಕುಗಳನ್ನು ನಿರ್ನಾಮ ಮಾಡಿರೋ ದೇಶದ ಜನತೆ ಬಗ್ಗೆ ಅಂತಾರಾಷ್ಟ್ರೀಯ ಸಮುದಾಯ ಹಿಂದಿನಿಂದಲೂ ಕಳವಳ ವ್ಯಕ್ತಪಡಿಸಿದೆ. ಉತ್ತರ ಕೊರಿಯಾದಲ್ಲಿ ಜಾರಿಯಲ್ಲಿರೋ ನೀವು ಕಂಡು ಕೇಳರಿಯದ ಕೆಲ ವಿಚಿತ್ರ ಕಾನೂನುಗಳಿವೆ. ಅವುಗಳ ಪಟ್ಟಿ ಈ ಕೆಳಗಿನಂತಿದೆ.

ವಿದೇಶಿ ಹಾಡು, ಚಲನಚಿತ್ರಗಳಿಗಿಲ್ಲ ಅನುಮತಿ

ಈಗಂತೂ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತವೆ. ಆದ್ರೆ ಉತ್ತರ ಕೊರಿಯಾದಲ್ಲಿ ವಿದೇಶಿ ಹಾಡು ಕೇಳುವುದು ಅಥವಾ ವಿದೇಶಿ ಚಲನಚಿತ್ರಗಳನ್ನು ವೀಕ್ಷಿಸುವುದು ಕಾನೂನು ಬಾಹಿರವಾಗಿದೆ. ಇವೆರಡನ್ನೂ ಅಲ್ಲಿ ಅಪರಾಧ ಚಟುವಟಿಕೆ ಎಂದು ಪರಿಗಣಿಸಲಾಗುತ್ತದೆ. ಮುಖ್ಯವಾಗಿ ತನ್ನ ಶತ್ರು ರಾಷ್ಟ್ರಗಳಾದ ಅಮೆರಿಕ ಹಾಗೂ ದಕ್ಷಿಣ ಕೊರಿಯಾದ ಯಾವುದೇ ಹಾಡು ಅಥವಾ ಸಿನಿಮಾಗಳನ್ನು ವೀಕ್ಷಿಸಿದ್ದು ಗೊತ್ತಾದಲ್ಲಿ ಆ ವ್ಯಕ್ತಿಗೆ ಮರಣದಂಡನೆ ವಿಧಿಸಲಾಗುತ್ತದೆ. ಜೊತೆಗೆ ಪೋರ್ನ್ ವೀಕ್ಷಿಸುವುದು ಕೂಡಾ ಅಲ್ಲಿ ಮರಣದಂಡನೆಗೆ ಕಾರಣವಾಗಬಹುದು.

ಚಾನಲ್ ಗಳ ಪ್ರಸಾರಕ್ಕೂ ನಿರ್ಬಂಧ

ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಅಂಗ ಅಂತಾ ಪರಿಗಣಿಸಲಾಗಿದೆ. ಆದರೆ ಉತ್ತರ ಕೊರಿಯಾದಲ್ಲಿ ಈ ಪರಿಸ್ಥಿತಿ ಇಲ್ಲ. 2015ರಲ್ಲಿ ಕಿಮ್ ಜಾಂಗ್ ಉನ್ ತನ್ನ ದೇಶದಲ್ಲಿ ಕಾನೂನುಬಾಹಿರಗೊಳಿಸಿದ ಎಲ್ಲಾ ಕ್ಯಾಸೆಟ್ ಟೇಪ್‍ಗಳು ಹಾಗೂ ಸಿಡಿಗಳನ್ನು ನಾಶಮಾಡಲು ಆದೇಶಿಸಿದ್ದ. ಸದ್ಯ ಉತ್ತರ ಕೊರಿಯಾದಲ್ಲಿ ಕೇವಲ 3 ಚಾನಲ್‍ಗಳಿಗಷ್ಟೇ ಅನುಮತಿಯಿದೆ. ಅದರಲ್ಲಿ ಪ್ರಸಾರ ಮಾಡುವ ವಿಷಯಗಳನ್ನು ಸರ್ಕಾರವೇ ನಿಯಂತ್ರಿಸುತ್ತದೆ. ಹಾಗೂ ಅಲ್ಲಿ ಯಾವುದೇ ಸರ್ಕಾರ ವಿರೋಧಿ ವಿಷಯಗಳನ್ನು ಪ್ರಸಾರ ಮಾಡುವಂತಿಲ್ಲ. ತನ್ನ ಸರ್ವಾಧಿಕಾರಿ ಅತ್ಯಂತ ಶ್ರೇಷ್ಠ ಎಂಬುದನ್ನಷ್ಟೇ ಅಲ್ಲಿ ಪ್ರದರ್ಶಿಸಲು ಅನುಮತಿಯಿದೆ.

ಅಂತಾರಾಷ್ಟ್ರೀಯ ಕರೆಗಳು ಅಪರಾಧ

ಇದು ವಿಚಿತ್ರ ಅನ್ನಿಸಿದರೂ ಸತ್ಯ. ಅಂತಾರಾಷ್ಟ್ರೀಯ ಕರೆಗಳನ್ನು ಮಾಡುವುದನ್ನು ಉತ್ತರ ಕೊರಿಯಾದಲ್ಲಿ ಅಪರಾಧವೆಂದು ಪರಿಗಣಿಸಲಾಗುತ್ತದೆ. ಸ್ಥಳೀಯ ನಾಗರಿಕರು ಮಾತ್ರವಲ್ಲ, ದೇಶದಲ್ಲಿರುವ ವಿದೇಶಿಗರು ಕೂಡಾ ಅಂತಾರಾಷ್ಟ್ರೀಯ ಕರೆ ಮಾಡಲು ಸಾಧ್ಯವಿಲ್ಲ. ಅಲ್ಲಿನ ಎಲ್ಲಾ ಸ್ಥಳೀಯ ಸಿಮ್ ಕಾರ್ಡ್‍ಗಳು ರಾಷ್ಟ್ರದೊಳಗೆ ಮಾತ್ರವೇ ಕರೆ ಮಾಡಲು ಅನುಮತಿಸುತ್ತದೆ. 2007ರಲ್ಲಿ ಕಾರ್ಖಾನೆಯೊಂದರ ನೆಲಮಾಳಿಗೆಯಲ್ಲಿ ಅಕ್ರಮವಾಗಿ ಸ್ಥಾಪಿಸಿದ 13 ಫೋನ್‍ಗಳಲ್ಲಿ ಅಂತಾರಾಷ್ಟ್ರೀಯ ಕರೆಗಳನ್ನು ಮಾಡಿದ ಆರೋಪದ ಮೇಲೆ ಕಾರ್ಖಾನೆಯ ಮಾಲೀಕನನ್ನು ಒಂದೂವರೆ ಲಕ್ಷ ಜನರ ಸಮ್ಮುಖದಲ್ಲಿ ಕ್ರೂರವಾಗಿ ಹತ್ಯೆ ಮಾಡಲಾಗಿತ್ತು.

ನೀಲಿ ಬಣ್ಣದ ಜೀನ್ಸ್ ಬ್ಯಾನ್

ಈಗಂತೂ ಎಲ್ಲಾ ದೇಶಗಳಲ್ಲೂ ಜೀನ್ಸ್ ಪ್ಯಾಂಟ್ ಧರಿಸುತ್ತಾರೆ. ಆದರೆ ಉತ್ತರ ಕೊರಿಯಾದಲ್ಲಿ ಜನರು ಜೀನ್ಸ್ ಧರಿಸುವುದನ್ನು ಕಾಣೋದೇ ವಿರಳ. ಏಕೆಂದರೆ ಅಲ್ಲಿ ನೀಲಿ ಬಣ್ಣದ ಜೀನ್ಸ್ ಅನ್ನು ನಿಷೇಧಿಸಲಾಗಿದೆ. ನೀಲಿ ಬಣ್ಣದ ಜೀನ್ಸ್ ತನ್ನ ದೇಶದ ಶತ್ರು ಅಮೆರಿಕದ ಪ್ರತೀಕ ಎಂದು ಭಾವಿಸಲಾಗುತ್ತದೆ. ಅಲ್ಲಿ ಕಪ್ಪು ಬಣ್ಣದ ಜೀನ್ಸ್ ಅನ್ನು ಧರಿಸಲು ಮಾತ್ರವೇ ಅವಕಾಶವಿದೆ. ಆದರೆ ಅದು ತನ್ನ ಬಣ್ಣ ಮಾಸದಂತೆ ನಿಭಾಯಿಸಲು ಸಾಧ್ಯವಿರುವವರು ಮಾತ್ರವೇ ಧರಿಸಬಹುದು.

ಮೀಟಿಂಗ್ ವೇಳೆ ನಿದ್ರೆ ಮಾಡೋದು ಅಪರಾಧ

ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ನೊಂದಿಗಿನ ಸಭೆಯಲ್ಲಿ ನಿದ್ರೆ ಮಾಡೋದು ಅಥವಾ ತೂಕಡಿಸೋದು ಅಲ್ಲಿ ದೊಡ್ಡ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇದು ಮರಣದಂಡನೆಗೆ ಕಾರಣವಾಗಬಹುದಾದ ಅಪರಾಧವಾಗಿದೆ. 2015ರಲ್ಲಿ ಉತ್ತರ ಕೊರಿಯಾದ ರಕ್ಷಣಾ ಸಚಿವ ಹ್ಯೋನ್ ಯೋಂಗ್ ಚೋಲ್ ಸರ್ವಾಧಿಕಾರಿ ಕಿಮ್ ಜಾಂಗ್ ಉನ್‍ನೊಂದಿಗಿನ ಸಭೆ ವೇಳೆ ಪ್ರಜ್ಞಾಹೀನರಾದ ಕಾರಣಕ್ಕೆ ಅವರನ್ನು 100 ಜನರ ಸಮ್ಮುಖದಲ್ಲಿ ಭೀಕರವಾಗಿ ಕೊಲ್ಲಲಾಗಿತ್ತು.

ಇಂಟೆರ್ನೆಟ್ ನಿರ್ಬಂಧ

ಉತ್ತರ ಕೊರಿಯಾದಲ್ಲಿ ‘ಕ್ವಾಂಗ್‍ಮಿಯಂಗ್’ ಹೆಸರಿನ ಏಕೈಕ ಇಂಟರ್ನೆಟ್ ಚಾಲಿತ ಪೋರ್ಟಲ್ ಇದೆ. ಇಲ್ಲಿ ಎಲ್ಲಾ ವಿದೇಶಿ ವೆಬ್‍ಸೈಟ್‍ಗಳನ್ನು ನಿರ್ಬಂಧಿಸಲಾಗಿದ್ದು, ಕೇವಲ 28 ವೆಬ್‍ಸೈಟ್‍ಗಳನ್ನು ಸರ್ಕಾರದ ಮೇಲ್ವಿಚಾರಣೆಯಲ್ಲಿ ಪ್ರವೇಶಿಸಬಹುದು. ಆದರೂ ಇದರ ಬಳಕೆ ದೇಶದ ಪ್ರತಿಯೊಬ್ಬ ಪ್ರಜೆಗೆ ಸಾಧ್ಯವಿಲ್ಲ. ರಾಜಕೀಯ ನಾಯಕರು ಮತ್ತು ಅವರ ಕುಟುಂಬಗಳು, ಗಣ್ಯ ಶಾಲೆಗಳಿಗೆ ಹಾಜರಾಗುವ ವಿದ್ಯಾರ್ಥಿಗಳು ಮತ್ತು ಮಿಲಿಟರಿಯ ಸೈಬರ್ ವಾರ್ಫೇರ್ ವಿಭಾಗ ಮಾತ್ರವೇ ಇಂಟರ್ನೆಟ್ ಬಳಕೆಗೆ ಅನುಮತಿಯಿದೆ. ಸಾಮಾನ್ಯ ಜನರು ತಮ್ಮ ಮೊಬೈಲ್‍ಗಳ ಮೂಲಕವೂ ಇಂಟರ್ನೆಟ್ ಪ್ರವೇಶಿಸಲು ಸಾಧ್ಯವಿಲ್ಲ.

ಬೈಬಲ್ ಬ್ಯಾನ್

ಉತ್ತರ ಕೊರಿಯಾದಲ್ಲಿ ಬೈಬಲ್ ಅನ್ನು ನಿಷೇಧಿಸಲಾಗಿದೆ. ಅಲ್ಲಿ ಬೈಬಲ್ ಅನ್ನು ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರತಿನಿಧಿಯಾಗಿ ನೋಡಲಾಗುತ್ತದೆ. ಮಾತ್ರವಲ್ಲದೇ ಅದು ಜನರನ್ನು ಪರಿವರ್ತಿಸುತ್ತದೆ ಎಂಬ ಕಾರಣಕ್ಕೆ ದೇಶಾದ್ಯಂತ ಬೈಬಲ್ ಇಟ್ಟುಕೊಳ್ಳುವುದನ್ನೇ ಬ್ಯಾನ್ ಮಾಡಲಾಗಿದೆ. ಈ ಹಿಂದೆ ಉತ್ತರ ಕೊರಿಯಾದಲ್ಲಿ ಬೈಬಲ್ ಅನ್ನು ಹಂಚುತ್ತಿದ್ದ ಕ್ರೈಸ್ತ ಮಹಿಳೆಯನ್ನು ಕೊಲ್ಲಲಾಗಿತ್ತು. 2014ರಲ್ಲಿ ಅಮೆರಿಕದ ಪ್ರವಾಸಿಯೊಬ್ಬರು ಬೈಬಲ್ ಅನ್ನು ಸಾರ್ವಜನಿಕ ಪ್ರದೇಶದಲ್ಲಿ ಬಿಟ್ಟು ಹೋಗಿದ್ದಕ್ಕೆ 5 ತಿಂಗಳ ಕಾಲ ಜೈಲಿನಲ್ಲಿ ಇಡಲಾಗಿತ್ತು.

ಇಷ್ಟ ಬಂದಂತೆ ಹೇರ್ ಕಟ್ ಮಾಡಿಸುವಂತಿಲ್ಲ

ಉತ್ತರ ಕೊರಿಯಾದಲ್ಲಿ ಎಲ್ಲಾ ಪುರುಷರು ಹಾಗೂ ಮಹಿಳೆಯರು ಸರ್ಕಾರ ಅಧಿಕೃತಗೊಳಿಸಿರುವ 26 ರೀತಿಯ ಕೇಶವಿನ್ಯಾಸಗಳನ್ನಷ್ಟೇ ಮಾಡಿಕೊಳ್ಳಬಹುದು. ಈ 26 ರೀತಿಯ ಕೇಶವಿನ್ಯಾಸಗಳನ್ನು ಹೊರತುಪಡಿಸಿ ಉಳಿದೆಲ್ಲಾ ಕೇಶವಿನ್ಯಾಸಗಳನ್ನು ನಿಷೇಧಿಸಲಾಗಿದೆ. ಕೆಲ ವರ್ಷಗಳ ಹಿಂದೆ ಜನಪ್ರಿಯವಾಗಿದ್ದ ಸ್ಪೈಕ್ಸ್ ಹೇರ್ ಸ್ಟೈಲ್ ಅನ್ನು ಉತ್ತರ ಕೊರಿಯಾದಲ್ಲಿ ಪ್ರತಿಭಟನೆ ಎಂದು ಪರಿಗಣಿಸಲಾಗುತ್ತದೆ. ಹೀಗಾಗಿ ಅದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ದೇಶದಲ್ಲಿ ಅನುಮೋದಿಸಿರುವ 26 ಕೇಶವಿನ್ಯಾಸಗಳ ನಿಯಮವನ್ನು ಕಿಮ್ ಜಾಂಗ್ ಉನ್ 2012ರಲ್ಲಿ ಪರಿಚಯಿಸಿದ್ದ. ಆದರೆ ಆತ ತನ್ನ ಹೇರ್ ಸ್ಟೈಲ್ ಅನ್ನು ವಿಶಿಷ್ಟವಾಗಿರಿಸಿಕೊಳ್ಳುವ ಸಲುವಾಗಿ 26 ಕೇಶವಿನ್ಯಾಸಗಳ ಪಟ್ಟಿಯಲ್ಲಿ ಅದನ್ನು ಸೇರಿಸಿಲ್ಲ. ಎಂದರೆ ಉತ್ತರ ಕೊರಿಯಾದ ಯಾವೊಬ್ಬ ಪ್ರಜೆಯೂ ಕಿಮ್ ಜಾಂಗ್ ಉನ್‍ನಂತೆ ಹೇರ್ ಸ್ಟೈಲ್ ಮಾಡುವಂತಿಲ್ಲ.

ಸರ್ವಾಧಿಕಾರಿ ಕುಟುಂಬಕ್ಕೆ ಅವಮಾನ ಮಾಡಿದ್ರೆ ಕಠಿಣ ಶಿಕ್ಷೆ

ಕಿಮ್ ಜಾಂಗ್ ಉನ್ ಆಳ್ವಿಕೆಯ ಅಡಿಯಲ್ಲಿ ಪ್ರತಿ ಉತ್ತರ ಕೊರಿಯನ್ನರು ಆತನಿಗೆ ಹಾಗೂ ಆತನ ಕುಟುಂಬ ಮತ್ತು ಸರ್ಕಾರಕ್ಕೆ ನಿಷ್ಠೆ ಮತ್ತು ವಿಧೇಯತೆಯನ್ನು ತೋರಬೇಕು. ಇದನ್ನು ಉಲ್ಲಂಘಿಸಿ ಯಾವುದೇ ರೀತಿಯಲ್ಲಿ ಅವಮಾನ ಮಾಡಿದರೂ ಆ ಅಪರಾಧಿಯನ್ನು ಕಠಿಣವಾಗಿ ಶಿಕ್ಷಿಸಲಾಗುತ್ತದೆ.

ದೇಶ ತೊರೆಯಲು ಅವಕಾಶವಿಲ್ಲ

ಉತ್ತರ ಕೊರಿಯಾದಲ್ಲಿ ಕಠಿಣ ನಿಯಮಗಳಿವೆ ಹೀಗಾಗಿ ದೇಶವನ್ನ ತೊರೆಯುತ್ತೇವೆ ಎಂದರೆ ಅದಕ್ಕೂ ಅವಕಾಶವಿಲ್ಲ.  ಉತ್ತರ ಕೊರಿಯಾದ ನಾಗರಿಕರಿಗೆ ದೇಶವನ್ನು ತೊರೆಯಲು ಅನುಮತಿಸಲಾಗುವುದಿಲ್ಲ. ಅಧಿಕೃತ ದಾಖಲೆಗಳಿಲ್ಲದೆ ಯಾರಾದರೂ ಗಡಿ ದಾಟಲು ಪ್ರಯತ್ನಿಸಿದರೆ ಅವರನ್ನು ಗಡಿ ಕಾವಲುಗಾರರು ಗುಂಡಿಕ್ಕಿ ಕೊಲ್ಲುತ್ತಾರೆ. ಯಾರಾದರೂ ದೇಶದಿಂದ ಪಲಾಯನ ಮಾಡಲು ಪ್ರಯತ್ನಿಸಿದರೆ ಅವರಿಗೆ ಮರಣ ದಂಡನೆಯೇ ಮೊದಲ ಶಿಕ್ಷೆಯಾಗುತ್ತದೆ.

ಉತ್ತರ ಕೊರಿಯಾದಲ್ಲಿದೆ ತನ್ನದೇ ಕ್ಯಾಲೆಂಡರ್‌

ಇಡೀ ಪ್ರಪಂಚದಲ್ಲಿ ಈಗ 2023ನೇ ಇಸವಿಯಲ್ಲಿದ್ದರೆ, ಉತ್ತರ ಕೊರಿಯಾದಲ್ಲಿ ಮಾತ್ರ ಪ್ರಸ್ತುತ 112ನೇ ಇಸವಿಯಲ್ಲಿದೆ. ಹೌದು, ಉತ್ತರ ಕೊರಿಯಾದಲ್ಲಿ ವಿಭಿನ್ನವಾದ ಕ್ಯಾಲೆಂಡರ್ ಚಾಲ್ತಿಯಲ್ಲಿದೆ. ‘ಜೂಚೆ’ ಹೆಸರಿನ ಈ ಕ್ಯಾಲೆಂಡರ್ ದೇಶದ ಕ್ರಾಂತಿಕಾರಿ ನಾಯಕ ಕಿಮ್ II ಸುಂಗ್‍ನ ಜನ್ಮದಿನವಾಗಿರುವ 1912ರ ಏಪ್ರಿಲ್ 15ರಿಂದ ಪ್ರಾರಂಭವಾಗುತ್ತದೆ.

ಜೈಲು ಶಿಕ್ಷೆ

ಉತ್ತರ ಕೊರಿಯಾದಲ್ಲಿ ಪ್ರಸ್ತುತ ಸುಮಾರು 2 ಲಕ್ಷ ನಾಗರಿಕರು ಜೈಲಿನಲ್ಲಿದ್ದಾರೆ ಎನ್ನಲಾಗಿದೆ. ಒಬ್ಬ ವ್ಯಕ್ತಿ ಯಾವುದೇ ಅಪರಾಧವನ್ನು ಎಸಗಿದರೆ ಆತನಿಗೆ ಮಾತ್ರವಲ್ಲದೇ ಆತನ 3 ತಲೆಮಾರು ವರೆಗೆ ಶಿಕ್ಷೆ ವಿಧಿಸಲಾಗುತ್ತದೆ. ಉದಾಹರಣೆಗೆ ಒಬ್ಬ ವ್ಯಕ್ತಿ ಅಪರಾಧಿಯಾದರೆ, ಆತನೊಂದಿಗೆ ಆತನ ತಂದೆ, ತಾಯಿ, ಅಜ್ಜ, ಅಜ್ಜಿಯೂ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ. ಒಂದು ವೇಳೆ ಒಬ್ಬ ಕೈದಿ ಜೈಲಿನಿಂದ ತಪ್ಪಿಸಿಕೊಂಡ ಎಂದಾದರೆ ಆತನ ಇಡೀ ಕುಟುಂಬವನ್ನು ಕೊಲ್ಲಲಾಗುತ್ತದೆ.

ಆತ್ಮಹತ್ಯೆ ಅಲ್ಲಿ ಅಪರಾಧ

ಉತ್ತರ ಕೊರಿಯಾದ ಯಾವ ವ್ಯಕ್ತಿಯೂ ಆತ್ಮಹತ್ಯೆ ಮಾಡಿಕೊಳ್ಳುವುದು ಅಪರಾಧವಾಗಿದೆ. ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆತನಿಗೆ ಶಿಕ್ಷೆ ಹೇಗೆ ಎಂಬ ಗೊಂದಲ ಮೂಡಬಹುದು. ಅಲ್ಲಿ ಆತ್ಮಹತ್ಯೆ ಮಾಡಿಕೊಂಡವನ ಕುಟುಂಬಕ್ಕೆ ಜೈಲು ಶಿಕ್ಷೆ ವಿಧಿಸಲಾಗುತ್ತದೆ.

ವಿದ್ಯುತ್ ಕಡಿತ

ಉತ್ತರ ಕೊರಿಯಾದಲ್ಲಿ ಇಂಧನ ಕೊರತೆಯ ಹಿನ್ನೆಲೆ ಪ್ರತಿ ರಾತ್ರಿಯೂ ಕತ್ತಲೆಯಲ್ಲೇ ಕಳೆಯಬೇಕಾಗಿದೆ. ಏಕೆಂದರೆ ಇಡೀ ದೇಶದಲ್ಲಿ ರಾತ್ರಿಯಿಡೀ ವಿದ್ಯುತ್ ಕಡಿತವಾಗುತ್ತದೆ. ವಿದ್ಯುತ್ ಅನ್ನು ಹೆಚ್ಚು ಬಳಸುವ ಮೈಕ್ರೋವೇವ್ ಅನ್ನು ಬಳಸುವುದು ಅಲ್ಲಿ ಕಾನೂನು ಬಾಹಿರವಾಗಿದೆ. ಇದನ್ನು ಬಳಸಲು ಅಲ್ಲಿ ಅನುಮತಿಯನ್ನೂ ಪಡೆಯಬೇಕು.

ಕಡ್ಡಾಯ ಮಿಲಿಟರಿ ಸೇವೆ

ಉತ್ತರ ಕೊರಿಯಾದಲ್ಲಿ ಪ್ರತಿ ನಾಗರಿಕನಿಗೂ ಮಿಲಿಟರಿ ಸೇವೆ ಕಡ್ಡಾಯವಾಗಿದೆ. ಪುರುಷರು 10 ವರ್ಷ ಹಾಗೂ ಮಹಿಳೆಯರು 7 ವರ್ಷ ಕಡ್ಡಾಯವಾಗಿ ಮಿಲಿಟರಿ ಸೇವೆಯನ್ನು ಸಲ್ಲಿಸಬೇಕಾಗಿದೆ.

suddiyaana