ಈಗ ಸ್ಯಾಂಪಲ್ಗೆ ಕೈ ಬೆರಳು ತಿಂದಿದ್ದೀನಿ – ನಂತರ ನಿನ್ನೇ ಕೊಂದು ತಿನ್ನುವೆ ಎಂದ ಭಂಡ ಗಂಡ
ಗಂಡ ಹೆಂಡತಿ ಸಂಸಾರ ಜೀವನ ಎಂದ ಮೇಲೆ ಪ್ರೀತಿಯೂ ಇರುತ್ತದೆ. ಜಗಳವೂ ಇರುತ್ತದೆ. ಮನುಷ್ಯ ಅಂದ ಮೇಲೆ ಇದೆಲ್ಲಾ ಸಹಜ. ಆದರೆ, ಜಗಳ ಮಾಡಿದಾಗಲೆಲ್ಲಾ ದ್ವೇಷ ಮಾಡುತ್ತಾ ಹೋದರೆ ಜೀವನ ನಡೆಸಲು ಸಾಧ್ಯವೇ. ಆದರೆ, ಇಲ್ಲೊಬ್ಬ ಪತಿ ಮಹಾಶಯ ಹೆಂಡತಿ ಜೊತೆ ಜಗಳ ಮಾಡುತ್ತಾ ನಂತರ ಮಾಡಿದ್ದು ಮಾತ್ರ ನಿಜಕ್ಕೂ ಘೋರ. ಈ ಕಾಲದಲ್ಲೂ ಇಂಥಾ ಮನುಷ್ಯರು ಇರುತ್ತಾರಾ ಅಂತಾ ಕೇಳೋದೇ ಬೇಡ. ಈ ಮನುಷ್ಯ ನಿಜಕ್ಕೂ ಮನುಷ್ಯನೇ ಹೌದಾ ಎಂದು ಅಚ್ಚರಿಯಾಗುತ್ತದೆ.
ಇದನ್ನೂ ಓದಿ: ಪ್ರೀತಿಯನ್ನೇ ಕೊಂದಳಾ ಕೊಲೆಗಾತಿ – ದುಡ್ಡಿಗಾಗಿ ಗಂಡನ ಪ್ರಾಣವನ್ನೇ ಬಲಿಕೊಟ್ಟ ಮಾಯಗಾತಿ..!
ಬೆಂಗಳೂರಿನ ಕೋಣನಕುಂಟೆ ಠಾಣಾ ವ್ಯಾಪ್ತಿಯಲ್ಲಿ ಒಂದು ವಿಚಿತ್ರ ಹಾಗೂ ಆತಂಕಕಾರಿ ಪ್ರಕರಣ ನಡೆದಿದೆ. 40 ವರ್ಷದ ಮಹಿಳೆ ಪುಷ್ಪಾ 23 ವರ್ಷಗಳ ಹಿಂದೆ ವಿಜಯ್ ಕುಮಾರ್ ಎಂಬಾತನನ್ನು ಮದುವೆಯಾಗಿದ್ದರು. ಮದುವೆಯಾದ ಕೆಲ ವರ್ಷಗಳಿಂದ ವಿಜಯ್ ಕುಮಾರ್ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ವಿವಾಹದ ಬಳಿಕ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ. ದಂಪತಿಗೆ ಒಬ್ಬ ಮಗನೂ ಇದ್ದಾನೆ. ಪತಿಯ ಕಿರುಕುಳದಿಂದ ಬೇಸತ್ತ ಪತ್ನಿ ಬೇರೆಡೆ ಮನೆ ಮಾಡಿ ಪತಿಯಿಂದ ದೂರವಿದ್ದರು. ಆದರೆ, ಜುಲೈ 28ರಂದು ವಿಜಯ್ಕುಮಾರ್ ಪತ್ನಿ ಇದ್ದ ಮನೆಗೆ ತೆರಳಿ ಮತ್ತೆ ಜಗಳ ಮಾಡಿದ್ದಾನೆ. ಈ ವೇಳೆ ಪಾಪಿ ಪತಿರಾಯ ಪತ್ನಿಯ ಬೆರಳನ್ನು ಕಚ್ಚಿ ತಿಂದಿದ್ದಾನೆ. ಈಗ ಬರೀ ಬೆರಳು ಕಚ್ಚಿ ತಿಂದಿದ್ದೀನಿ. ಇನ್ನು ಮುಂದೆ ನಿನ್ನನ್ನು ಕೂಡಾ ಕೊಂದು ಇದೇ ರೀತಿ ತಿನ್ನುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಪತ್ನಿ ಆರೋಪಿಸಿದ್ದಾಳೆ. ಈ ಕುರಿತು ಕೋಣನಕುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.