ಅನಂತ್‌ನಾಗ್‌ ಸಿನಿ ಪಯಣಕ್ಕೆ 50 ವರ್ಷ – ಶುಭ ಹಾರೈಸಿದ ಸ್ಯಾಂಡಲ್‌ವುಡ್

ಅನಂತ್‌ನಾಗ್‌ ಸಿನಿ ಪಯಣಕ್ಕೆ 50 ವರ್ಷ – ಶುಭ ಹಾರೈಸಿದ ಸ್ಯಾಂಡಲ್‌ವುಡ್

ಸ್ಯಾಂಡಲ್‌ವುಡ್‌ನ ಸಂಪತ್ತು.. ಬೆಳ್ಳಿತೆರೆಯ ಅಪರೂಪದ ತಾರೆ ಅನಂತ್‌ನಾಗ್ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟು ಆಗಸ್ಟ್ 3ಕ್ಕೆ 50 ವರ್ಷ ಪೂರೈಸಿದೆ. ಚೆಂದದ ರೂಪ, ಯಾವಾಗಲೂ ಹೊಳೆಯುವ ಕಣ್ಣುಗಳು, ಯಾವ ಪಾತ್ರಕ್ಕೂ ಸೈ, ನಿಜವಾಗಲೂ ಅನಂತ್‌ನಾಗ್ ಕನ್ನಡ ಚಿತ್ರರಂಗದ ಆಸ್ತಿಯೇ. ಈ 50 ವರ್ಷಗಳ ಸಿನಿ ಪಯಣದಲ್ಲಿ ಅವರು ನಟಿಸದ ಪಾತ್ರಗಳೇ ಇಲ್ಲವೇನೋ ಎನ್ನಬಹುದು. ನಾಯಕ, ಖಳನಾಯಕ, ಹಾಸ್ಯನಟ, ರಸಿಕ ನಟ.. ಹೀಗೆ ಎಲ್ಲಾ ಪಾತ್ರಗಳಲ್ಲೂ ಅನಂತ್‌ನಾಗ್ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ  ತೆಲುಗು, ತಮಿಳು, ಹಿಂದಿ, ಮಲಯಾಳಂ ಚಿತ್ರಗಳಲ್ಲಿಯೂ ಇವರು ನಟಿಸಿದ್ದಾರೆ.

ಇದನ್ನೂ ಓದಿ:  ‘ಲೀಡರ್ ರಾಮಯ್ಯ’ ಸಿನಿಮಾದ ಮೊದಲ ಪಾರ್ಟ್‌ನಲ್ಲಿ ನಿರೂಪ್ ಭಂಡಾರಿ ಹೀರೋ..!

ಅನಂತ್‌ನಾಗ್ ತಮ್ಮ ಐದು ದಶಕಗಳ ಸಿನಿಮಾ ಪಯಣದಲ್ಲಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. 1973ರಲ್ಲಿ ತೆರೆಕಂಡ ಸಂಕಲ್ಪ ಚಿತ್ರದ ಮೂಲಕ ಅನಂತ್ ನಾಗ್ ಬಣ್ಣದ ಲೋಕಕ್ಕೆ ಕಾಲಿಟ್ಟರು. ಇದೀಗ 50ನೇ ವರ್ಷಾಚರಣೆಯ ಸಂಭ್ರಮದಲ್ಲಿದ್ದಾರೆ. ರಂಗಭೂಮಿಯ ಹಿನ್ನೆಲೆಯಿಂದ ಬಂದ ಅನಂತ್‌ನಾಗ್, ಕನ್ನಡ, ಕೊಂಕಣಿ, ಹಿಂದಿ ನಾಟಕಗಳಲ್ಲಿ ನಟಿಸಿದ್ದಾರೆ. ಐದು ವರ್ಷ ರಂಗಭೂಮಿಯಲ್ಲಿ ಕೆಲಸ ಮಾಡಿರುವ ಇವರು, ಅಮೋಲ್ ಪಾಲೇಕರ್, ಗಿರೀಶ್ ಕಾರ್ನಾಡ್, ಸತ್ಯದೇವ್ ದುಬೇ ಮುಂತಾದ ಹಲವು ನಿರ್ದೇಶಕರ ನಾಟಕಗಳಲ್ಲಿ ನಟಿಸಿದ್ದಾರೆ.  ನಾನು ತುಂಬಾ ನಾಚಿಕೆ ಸ್ವಭಾವದ ಹುಡುಗನಾಗಿದ್ದೆ. ಮುಂಬಯಿ ನೋಡಿ ನಾನು ಬೆರಗಾಗಿದ್ದೆ. ಅಲ್ಲಿಯೇ ಇದ್ದು, ನಾಟಕದಲ್ಲಿ ನಟಿಸಿ ನಂತರ ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದೆ ಎಂದು ಈ ಹಿಂದೆ ಸಂದರ್ಶನವೊಂದರಲ್ಲಿ ಅನಂತ್ ಕುಮಾರ್ ಹೇಳಿಕೊಂಡಿದ್ದರು.

ಇದೀಗ ಅನಂತ್‌ನಾಗ್ ಸಿನಿಮಾ ಜೀವನದಲ್ಲಿ 50 ವರ್ಷಗಳು ಪೂರೈಸಿದ್ದರಿಂದ ಸ್ಯಾಂಡಲ್‌ವುಡ್ ಕಲಾವಿದರು ಶುಭ ಹಾರೈಸಿದ್ದಾರೆ. ಸೆಂಚುರಿ ಸ್ಟಾರ್ ಶಿವರಾಜ್‌ ಕುಮಾರ್, ರಿಯಲ್ ಸ್ಟಾರ್ ಉಪೇಂದ್ರ, ಪ್ಯಾನ್ ಇಂಡಿಯಾ ಸ್ಟಾರ್  ರಿಷಬ್ ಶೆಟ್ಟಿ ಸೇರಿದಂತೆ ಅನೇಕರು ಅನಂತ್‌ನಾಗ್ ಅವರಿಗೆ ವಿಶೇಷವಾಗಿ ಶುಭಾಶಯ ತಿಳಿಸಿದ್ದಾರೆ. ಅನಂತ್ ನಾಗ್ ಜೊತೆ ಇರುವ ಫೋಟೋ ಹಂಚಿಕೊಂಡಿರುವ ಶಿವರಾಜ್‌ಕುಮಾರ್, ‘ಚಿತ್ರರಂಗದಲ್ಲಿ 50 ವರ್ಷ ಯಶಸ್ವಿಯಾಗಿ ಪೂರೈಸಿದ ಅನಂತ್ ನಾಗ್ ಸರ್ ಅವರಿಗೆ ಹೃತ್ಪೂರ್ವಕ ಅಭಿನಂದನೆ. ನಿಮ್ಮ ಪ್ರತಿಭೆ ವರ್ಚಸ್ಸು ತಲೆಮಾರುಗಳವರೆಗೆ ಪ್ರೇರಣೆ’ ಎಂದು ಬರೆದುಕೊಂಡಿದ್ದಾರೆ.

‘ಕನ್ನಡ ಚಿತ್ರರಂಗದ ಮೇರು ನಟ, ನಮ್ಮೆಲ್ಲರ ಪ್ರೀತಿಯ ಅನಂತ್ ನಾಗ್ ಸರ್ ಚಿತ್ರರಂಗದಲ್ಲಿ 50 ವಸಂತಗಳನ್ನು ಪೂರೈಸಿದ್ದಾರೆ. ನಮ್ಮ ಸ.ಹಿ.ಪ್ರಾ.ಶಾಲೆ ಕಾಸರಗೋಡು ಚಿತ್ರದ ಅನಂತಪದ್ಮನಾಭರಿಗೆ ಅನಂತ ಶುಭಾಶಯಗಳು. ನಿಮ್ಮ ಪಯಣ ಸ್ಫೂರ್ತಿದಾಯಕ’ ಎಂದು ರಿಷಬ್ ಶೆಟ್ಟಿ ಬರೆದುಕೊಂಡಿದ್ದಾರೆ.

ರಿಯಲ್ ಸ್ಟಾರ್ ಉಪೇಂದ್ರ ಅವರು ಒಂದು ವಿಶೇಷ ಫೋಟೋ ಹಂಚಿಕೊಳ್ಳುವ ಮೂಲಕ ನೀವು ನಮಗೆ ಸ್ಪೂರ್ತಿ ಎಂದು ಬರೆದುಕೊಂಡಿದ್ದಾರೆ.

suddiyaana