ಹರಿಯಾಣದಲ್ಲಿ ನಿಲ್ಲದ ಹಿಂಸಾಚಾರ – ಮತ್ತೊಂದು ಮಸೀದಿಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು
ಗುರುಗ್ರಾಮ: ಹರಿಯಾಣದಲ್ಲಿ ಕೋಮು ಸಂಘರ್ಷ ಭುಗಿಲೆದ್ದಿದೆ. ಎರಡು ಗುಂಪುಗಳ ಘರ್ಷಣೆಯಿಂದಾಗಿ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಲೆಕ್ಕಿಸದೇ ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡ್ತಿದ್ದಾರೆ. ಇದೀಗ ಮತ್ತೊಂದು ಮಸೀದಿಗೆ ಬೆಂಕಿ ಹಚ್ಚಿರುವ ಘಟನೆ ವರದಿಯಾಗಿದೆ.
ನುಹ್ ಪಟ್ಟಣದಲ್ಲಿ ಎರಡು ಗುಂಪುಗಳ ಮಧ್ಯೆ ಸಂಘರ್ಷ ಮುಂದುವರಿದಿದೆ. ಬುಧವಾರ ರಾತ್ರಿ 11.30ರ ಸುಮಾರಿಗೆ ಎರಡು ಮಸೀದಿಗಳಲ್ಲಿ ಬೆಂಕಿ ಹಚ್ಚಲಾಗಿದೆ ಎಂದು ಹೇಳಲಾಗುತ್ತಿದೆ. ಇರದಿಂದಾಗಿ ಎರಡು ಮಸೀದಿಗಳಿಗೆ ಹಾನಿಗಳಾಗಿವೆ ಎಂದು ಹೇಳಲಾಗುತ್ತಿದೆ. ಒಂದು ಮಸೀದಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಆದರೆ, ಮತ್ತೊಂದು ಮಸೀದಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಹರಿಯಾಣದಲ್ಲಿ ಕೋಮು ಗಲಭೆ – ನುಹ್, ಗುರುಗ್ರಾಮ್ನಲ್ಲಿ ಇಂಟರ್ನೆಟ್ ನಿಷೇಧ
ಮಸೀದಿಗೆ ಬೆಂಕಿ ಹಚ್ಚಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಭೇಟಿ ನೀಡಿ, ಪರಿಸ್ಥಿತಿ ನಿಯಂತ್ರಣಕ್ಕೆ ತರಲಾಗಿದೆ. ಆರೋಪಿಗಳಿಗೆ ಸಮೀಪದ ಪ್ರದೇಶಗಳಲ್ಲಿರುವ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧೀಕ್ಷಕ (ನೂಹ್), ವರುಣ್ ಸಿಂಗ್ಲಾ ಅವರು ಹೇಳಿದ್ದಾರೆ.
ಈ ನಡುವೆ ನುಹ್ ನಲ್ಲಿ ಪರಿಸ್ಥಿತ ಸುಧಾರಿಸುತ್ತಿರುವ ಹಿನ್ನೆಲೆಯಲ್ಲಿ ಕರ್ಫ್ಯೂ ಸಡಿಲಿಸಲಾಗಿದ್ದು, ಜನರು ದೈನಂದಿನ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಅವಕಾಶ ನೀಡಲಾಗಿದೆ ಎಂದು ನುಹ್ ಉಪ ಆಯುಕ್ತ ಪ್ರಶಾಂತ್ ಪನ್ವಾರ್ ಅವರು ಹೇಳಿದ್ದಾರೆ.
ವಿಶ್ವ ಹಿಂದೂ ಪರಿಷತ್ತಿನ ಮೆರವಣಿಗೆಯನ್ನು ತಡೆಯಲು ಗುಂಪೊಂದು ಯತ್ನಿಸಿದ ನಂತರ ಸೋಮವಾರ ನುಹ್ನಲ್ಲಿ ಕೋಮು ಹಿಂಸಾಚಾರದ ಭುಗಿಲೆದ್ದಿತ್ತು. ನುಹ್ನಲ್ಲಿ ಪ್ರಾರಂಭವಾದ ಕೋಮು ಹಿಂಸಾಚಾರವು ಗುರುಗ್ರಾಮವನ್ನು ತಲುಪಿತು. ಈ ಹಿನ್ನೆಲೆಯಲ್ಲಿ ನುಹ್ ಮತ್ತು ಪಲ್ವಾಲ್ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿತ್ತು. ಹಿಂಸಾಚಾರದಲ್ಲಿ ಇದೂವರೆಗೆ ಆರು ಮಂದಿ ಸಾವನ್ನಪ್ಪಿದ್ದಾರೆ, 116 ಜನರನ್ನು ಬಂಧಿಸಲಾಗಿದೆ ಎಂದು ಹರ್ಯಾಣ ಸರ್ಕಾರ ಮಾಹಿತಿ ನೀಡಿದೆ.