ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ

ಪ್ರವಾಸಿ ತಾಣ ಎತ್ತಿನಭುಜಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ

ಚಿಕ್ಕಮಗಳೂರು: ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಿದರೂ ಚಿಕ್ಕಮಗಳೂರು ಜಿಲ್ಲೆಯ ಘಟ್ಟ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಪ್ರವಾಸಿ ತಾಣಗಳಲ್ಲಿ ಬೆಟ್ಟಗುಡ್ಡಗಳು ಕುಸಿಯೋದು, ಮರಗಳು ಮುರಿದು ಬೀಳೋದು ಇನ್ನೂ ನಿಂತಿಲ್ಲ. ಹಾಗಾಗಿ, ಮುಂಜಾಗ್ರತ ಕ್ರಮವಾಗಿ ಜಿಲ್ಲಾಡಳಿತ ಪ್ರವಾಸಿ ಹಿತದೃಷ್ಠಿಯಿಂದ ಮೂಡಿಗೆರೆ ತಾಲೂಕಿನ ಸುಪ್ರಸಿದ್ಧ ಪ್ರವಾಸಿ ತಾಣ ಎತ್ತಿನಭುಜ ತಾಣಕ್ಕೆ ಪ್ರವಾಸಿಗರಿಗೆ ತಾತ್ಕಾಲಿಕ ನಿರ್ಬಂಧ ಹೇರಿದೆ.

ಇದನ್ನೂ ಓದಿ: ಪಶ್ಚಿಮಘಟ್ಟಗಳ ಸೌಂದರ್ಯ ಇನ್ನು ಬೆಂಗಳೂರಿನಲ್ಲೂ ಲಭ್ಯ! – ಸಸ್ಯಕಾಶಿಯಲ್ಲಿ  ನಿರ್ಮಾಣಗೊಳ್ಳಲಿದೆ ಮಿನಿ ಪಶ್ಚಿಮ ಘಟ್ಟ?

ಚಿಕ್ಕಮಗಳೂರು ಜಿಲ್ಲಾಧಿಕಾರಿಗಳು ಮತ್ತು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಈ ಆದೇಶ ಹೊರಡಿಸಿದ್ದಾರೆ. ಮೂಡಿಗೆರೆ ವಲಯ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಅತಿಯಾಗಿ ಮಳೆಯಾಗುತ್ತಿರುವುದರಿಂದ, ಅಲ್ಲಲ್ಲಿ ಗುಡ್ಡಕುಸಿತ ಸಂಭವಿಸುತ್ತಿರುವುದರಿಂದ, ರಸ್ತೆಬದಿಯ ವಿದ್ಯುತ್ ಕಂಬಗಳು, ಮರಗಳು ಬಿದ್ದು ರಸ್ತೆ ಸಂಚಾರಕ್ಕೆ ಅಡಚಣೆ ಉಂಟಾಗುವ ಸಾಧ್ಯತೆಯಿದೆ. ಹಾಗೆಯೇ ಫೋಟೋ ತೆಗೆಯುವ ಸಂದರ್ಭದಲ್ಲಿ ಅಪಾಯಗಳು ಸಂಭವಿಸುವ ಸಾಧ್ಯತೆಯಿರುವುದರಿಂದ ಅಪಾಯ ಸಂಭವಿಸಿದಾಗ ಸಂದರ್ಭದಲ್ಲಿ ತುರ್ತಾಗಿ ಘಟನಾ ಸ್ಥಳಕ್ಕೆ ತೆರಳಲು ಕಷ್ಟಸಾಧ್ಯವಾಗಿರುತ್ತದೆ. ಈ ಹಿನ್ನೆಲೆ ಎತ್ತಿನಭುಜಕ್ಕೆ ಪ್ರವಾಸಿಗರಿಂದ ತಾತ್ಕಾಲಿಕ ನಿರ್ಬಂಧ ಹೇರಲಾಗಿದೆ. .

ಎತ್ತಿನ ಭುಜವು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಿಂದ ಸುಮಾರು 25 ಕಿಲೋ ಮೀಟರ್‌ ದೂರದಲ್ಲಿರುವ ಪಶ್ಚಿಮ ಘಟ್ಟಗಳ ಪರ್ವತದ ಶಿಖರವಾಗಿದೆ. ಇದು 4,265 ಅಡಿ ಎತ್ತರವನ್ನು ಹೊಂದಿದೆ. ಇದು ಕರ್ನಾಟಕದ ಜನಪ್ರಿಯವಾದ ಚಾರಣ ಸ್ಥಳವಾಗಿದೆ. ಏಕೆಂದರೆ ಕೊನೆಯ ಎರಡು ಕಿಲೋಮೀಟರ್‌ಗಳನ್ನು ಪ್ರವಾಸಿಗರು ಟ್ರಕ್ಕಿಂಗ್‌ ಮೂಲಕ ಶಿಖರದ ಸಮೀಪವಿರುವ ಬಿಂದುವನ್ನು ತಲುಪಬಹುದಾಗಿದೆ. ಪಾಕೃತಿಕ ಸೌಂದರ್ಯದಿಂದ ಸಮೃದ್ಧವಾಗಿರುವ ಕಾಫಿನಾಡಿನ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದು, ದಿನದಿಂದ ದಿನಕ್ಕೆ ಸಂಖ್ಯೆ ಹೆಚ್ಚುತ್ತಲೇ ಇದೆ.

suddiyaana