ಹರಿಯಾಣದಲ್ಲಿ ಮುಂದುವರಿದ ಕೋಮು ಗಲಭೆ – ಸಾವಿನ ಸಂಖ್ಯೆ 6 ಕ್ಕೆ ಏರಿಕೆ, 116 ಮಂದಿ ಅರೆಸ್ಟ್‌

ಹರಿಯಾಣದಲ್ಲಿ ಮುಂದುವರಿದ ಕೋಮು ಗಲಭೆ – ಸಾವಿನ ಸಂಖ್ಯೆ 6 ಕ್ಕೆ ಏರಿಕೆ, 116 ಮಂದಿ ಅರೆಸ್ಟ್‌

ಚಂಡೀಗಢ: ಕೋಮು ಸಂಘರ್ಷಕ್ಕೆ ಹರಿಯಾಣ  ತತ್ತರಿಸಿದೆ. ಎರಡು ಗುಂಪುಗಳ ಘರ್ಷಣೆಯಿಂದಾಗಿ ನೂಹ್ ಮತ್ತು ಗುರುಗ್ರಾಮ್ ಜಿಲ್ಲೆಗಳು ಹೊತ್ತಿ ಉರಿಯುತ್ತಿವೆ. ಕರ್ಫ್ಯೂ ಲೆಕ್ಕಿಸದೇ ಜನ ಬೀದಿಗಿಳಿದು ಹಿಂಸಾಚಾರದಲ್ಲಿ ತೊಡಗಿದ್ದಾರೆ. ಆಸ್ತಿ-ಪಾಸ್ತಿಗಳಿಗೆ ಹಾನಿ ಮಾಡ್ತಿದ್ದಾರೆ. ಮಂಗಳವಾರ 200 ಮಂದಿಯನ್ನೊಳಗೊಂಡ ಶಸ್ತ್ರಸಜ್ಜಿತ ಗುಂಪೊಂದು ಏಕಾಏಕಿ ದಾಳಿ ನಡೆಸಿದ್ದು, ಬಹಳಷ್ಟು ಹಾನಿಯುಂಟು ಮಾಡಿದೆ. ಈ ಸಂಘರ್ಷದಲ್ಲಿ ಸಾವನ್ನಪ್ಪಿರುವವರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ.

ವಿಶ್ವ ಹಿಂದೂ ಪರಿಷತ್‌ ಮೆರವಣೆಗೆ ವೇಳೆ ಅನ್ಯಕೋಮಿನ ಗುಂಪೊಂದು ದಾಳಿ ನಡೆಸಿದೆ. ಬಳಿಕ ಎರಡು ಗುಂಪುಗಳ ಮಧ್ಯೆ ಘರ್ಷಣೆ ಉಂಟಾಗಿದ್ದು, ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಮಂಗಳವಾರ ತಡರಾತ್ರಿವರೆಗೂ ಪೊಲೀಸರು 116 ಮಂದಿಯನ್ನು ಬಂಧಿಸಿದ್ದಾರೆ. ಇಲ್ಲಿವರೆಗೂ ಸುಮಾರು 54 ಎಫ್‌ಐಆರ್‌ಗಳು ದಾಖಲಾಗಿವೆ. ಕೋಮು ಘರ್ಷಣೆಯಲ್ಲಿ ಒಟ್ಟು 6 ಮಂದಿ ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಸ್ಟುಡಿಯೋದಲ್ಲಿ ಖ್ಯಾತ ಕಲಾ ನಿರ್ದೇಶಕ ಆತ್ಮಹತ್ಯೆ – ಬರ್ತಡೇಗೂ ಮುನ್ನವೇ ಸೂಸೈಡ್

ಗುರುಗ್ರಾಮ್‌ನಲ್ಲಿ ಹಿಂಸಾಚಾರ ಹೆಚ್ಚಾಗಿದ್ದು, ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಗುರುಗ್ರಾಮ ಸೇರಿದಂತೆ ಸುತ್ತಮುತ್ತ ಭಾಗದಲ್ಲಿ 144 ಸೆಕ್ಷನ್‌ ಜಾರಿಗೊಳಿಸಲಾಗಿದೆ. ಬುಧವಾರ ಕೂಡ ಇಂಟರ್‌ನೆಟ್‌ ಸೌಲಭ್ಯ ಕಡಿತ ಮಾಡಲಾಗಿದೆ. ಪೊಲೀಸ್‌ ಮತ್ತು ಕೇಂದ್ರ ಭದ್ರತಾ ಪಡೆಯಿಂದ ಪರೇಡ್‌ ನಡೆಸಲಾಗಿದೆ.

ನುಹ್ ಘರ್ಷಣೆಯನ್ನು ವಿರೋಧಿಸಿ ದೆಹಲಿಯ ನಿರ್ಮಾಣ್ ವಿಹಾರ್ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಲು ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಮತ್ತು ಬಜರಂಗದಳ ಯೋಜಿಸಿರುವ ಕಾರಣ ರಾಷ್ಟ್ರ ರಾಜಧಾನಿಯಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ. ಮೇವಾತ್ ಪ್ರದೇಶದಲ್ಲಿ ನಡೆಯುತ್ತಿರುವ ಘರ್ಷಣೆಗಳ ವಿರುದ್ಧ ವಿಎಚ್‌ಪಿ ಇಂದು ಪ್ರತಿಭಟನೆಗೆ ಕರೆ ನೀಡಿದೆ. ವಿಎಚ್‌ಪಿ ಮತ್ತು ಬಜರಂಗದಳ ಬುಧವಾರ ಸಂಜೆ 4 ಗಂಟೆಗೆ ಮನೇಸರ್‌ನ ಭೀಸಂ ದಾಸ್ ಮಂದಿರದಲ್ಲಿ ಮಹಾಪಂಚಾಯತ್‌ಗೆ ಕರೆ ನೀಡಿದೆ.

ಮಂಗಳವಾರ ರಾತ್ರಿ ಗುರುಗ್ರಾಮ್‌ನಲ್ಲಿ ನಡೆದ ಹಿಂಸಾಚಾರದಿಂದಾಗಿ ದೆಹಲಿ ಅಲರ್ಟ್ ಆಗಿದೆ. ಸಾಮಾಜಿಕ ಮಾಧ್ಯಮದಲ್ಲಿನ ವರದಿಗಳಿಗೆ ಕಿವಿಗೊಡಬೇಡಿ, ತುರ್ತು ಸಂದರ್ಭದಲ್ಲಿ 112 ಕ್ಕೆ ಕರೆ ಮಾಡಿ ಎಂದು ಗುರುಗ್ರಾಮ್ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

suddiyaana