ವಿಜ್ಞಾನಿಗಳ ಒಂದೇ ಒಂದು ತಪ್ಪು ಕಮಾಂಡ್ ನಿಂದಾಗಿ ವೊಯೇಜರ್ ಜೊತೆ ನಾಸಾದ ಸಂಪರ್ಕ ಕಟ್!
ವಿಜ್ಞಾನಿಗಳು ಬಾಹ್ಯಾಕಾಶದ ರಹಸ್ಯ ಅರಿಯಲು ಹೊಸ ಹೊಸ ಸಂಶೋಧನೆಗಳನ್ನು ಮಾಡುತ್ತಾ ಇರುತ್ತಾರೆ. ಈ ವೇಳೆ ಕೆಲವೊಂದು ಸಣ್ಣ ಪುಟ್ಟ ತಪ್ಪುಗಳು ಆಗುವುದು ಸಹಜ. ಕೆಲವೊಂದು ಬಾರಿ ಸಣ್ಣ ಪುಟ್ಟ ತಪ್ಪುಗಳಿಂದಲೇ ದೊಡ್ಡ ಅನಾಹುತಗಳಿಗೆ ಕಾರಣವಾಗುವುದನ್ನು ನಾವು ನೋಡಿರುತ್ತೇವೆ. ಇದೀಗ ಬಾಹ್ಯಾಕಾಶದ ರಹಸ್ಯ ತಿಳಿಯಲು ಅಮೆರಿಕದ ಬಾಹ್ಯಾಕಾಶ ಸಂಸ್ಥೆಯಾದ ನಾಸಾದ ವಿಜ್ಞಾನಿಗಳು ಕಮಾಂಡ್ ಕೊಡುವಾಗ ಸಣ್ಣ ತಪ್ಪೊಂದನ್ನು ಮಾಡಿದ್ದಾರೆ. ಇದರಿಂದಾಗಿ ವೊಯೇಜರ್ 2 ವ್ಯೋಮನೌಕೆಯ ಜೊತೆಗೆ ನಾಸಾ ಸಂಪರ್ಕ ತಾತ್ಕಾಲಿಕವಾಗಿ ಕಟ್ ಆಗಿರುವ ವಿಷಯ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಇನ್ನುಮುಂದೆ ನಕಲಿ ಔಷಧಿಗಳ ಆಟ ನಡೆಯಲ್ಲ – ಔಷಧಿಗಳ ಮೇಲೆ QR ಕೋಡ್ ಕಡ್ಡಾಯ!
2018ರಲ್ಲಿ ವೊಯೇಜರ್ 2 ವ್ಯೋಮನೌಕೆಯನ್ನು ನಾಸಾ ಬಾಹ್ಯಾಕಾಶಕ್ಕೆ ಹಾರಿಸಿತ್ತು. ಕಳೆದ ಜು.21ರಂದು ವ್ಯೋಮನೌಕೆಯ ಆ್ಯಂಟೆನಾವನ್ನು ತಿರುಗಿಸುವ ವೇಳೆ ನಾಸಾ ವಿಜ್ಞಾನಿಗಳು ಕಳುಹಿಸಿದ ಕಮ್ಯಾಂಡ್ ತಪ್ಪಾಗಿದೆ. ಇದರಿಂದಾಗಿ ಬರೋಬ್ಬರಿ 1230 ಕೋಟಿ ಮೈಲು ದೂರದ ಬಾಹ್ಯಾಕಾಶದಲ್ಲಿ ಭೂಮಿಯ ಕಡೆಗೆ ಮುಖ ಮಾಡಿದ್ದ ವೊಯೇಜರ್ನ ಆ್ಯಂಟೆನಾ ಶೇ.2ರಷ್ಟು ಬೇರೆ ಕಡೆಗೆ ತಿರುಗಿಕೊಂಡಿದೆ. ಹೀಗಾಗಿ ಅದರ ಜೊತೆಗಿನ ಸಂಪರ್ಕವನ್ನು ಭೂಮಿಯ ಮೇಲಿರುವ ನಾಸಾದ ಡೀಪ್ ಸ್ಪೇಸ್ ನೆಟ್ವರ್ಕ್ (ಡಿಎಸ್ಎನ್) ಕೇಂದ್ರವು ಕಳೆದುಕೊಂಡಿತ್ತು. ಬಳಿಕ ಅಲ್ಲಿಂದ ಯಾವುದೇ ಸಂದೇಶಗಳೂ ಡಿಎಸ್ಎನ್ಗೆ ರವಾನೆಯಾಗಿಲ್ಲ. ಆದರೆ ಇದೇ ನೌಕೆಯ ಸಂದೇಶಗಳನ್ನು ಸ್ವೀಕರಿಸಲು ಆಸ್ಪ್ರೇಲಿಯಾದ ರಾಜಧಾನಿ ಕ್ಯಾನ್ಬೆರಾದಲ್ಲಿ ಕೇಂದ್ರವಿದ್ದು, ಈ ಕೇಂದ್ರ ಯಾವುದೇ ಅಡೆತಡೆ ಇಲ್ಲದೆ ಸಂದೇಶ ಸ್ವೀಕರಿಸುತ್ತಿರುವ ಕಾರಣ ದೊಡ್ಡ ಅನಾಹುತವೊಂದು ತಪ್ಪಿದೆ.
ಒಂದು ವೇಳೆ ನಾಸಾದ ಕೇಂದ್ರ ಕ್ಯಾನ್ಬೆರಾದಲ್ಲಿ ಇರದೇ ಹೋಗಿದ್ದರೆ, ವೊಯೇಜರ್ನ ಸಂದೇಶ ಪಡೆಯಲು ನಾಸಾ ಮುಂದಿನ ಅಕ್ಟೋಬರ್ವರೆಗೂ ಕಾಯಬೇಕಿತ್ತು. ಆಕ್ಟೋಬರ್ ವೇಳೆಗೆ ಈ ನೌಕೆಯು ತಂತಾನೆ ತನ್ನ ಆ್ಯಂಟೆನಾದ ದೃಷ್ಟಿಯನ್ನು ಭೂಮಿಯ ಕಡೆಗೆ ಸರಿಪಡಿಸುವ ತಂತ್ರಜ್ಞಾನವನ್ನು ಹೊಂದಿದ್ದು, ಮುಂದಿನ ಇಂಥ ಪ್ರಕ್ರಿಯೆ ಅ.15ರಂದು ನಡೆಯಲಿದೆ. ಅದಾದ ನಂತರ ಮತ್ತೆ ಡಿಎಸ್ಎನ್ ಕೇಂದ್ರಕ್ಕೆ ಮತ್ತೆ ಎಂದಿನಂತೆ ಸಂದೇಶ ರವಾನೆಯಾಗಲಿದೆ. ವೋಯೇಜರ್ 2 ನೌಕೆ ರವಾನಿಸಿದ ಸಂದೇಶವು ಭೂಮಿಯನ್ನು ತಲುಪಲು 18 ಗಂಟೆ ಬೇಕಾಗುತ್ತದೆ. 1977ರಲ್ಲಿ ವೋಯೇಜರ್ 1 ನೌಕೆಯನ್ನು ಉಡ್ಡಯನ ಮಾಡಲಾಗಿತ್ತು. ಎರಡನೇ ನೌಕೆ 2018ರಲ್ಲಿ ಉಡ್ಡಯನಗೊಂಡಿತ್ತು.