ವಿಂಡೀಸ್ ಕಳಪೆ ಆತಿಥ್ಯದ ಬಗ್ಗೆ ಹಾರ್ದಿಕ್ ಪಾಂಡ್ಯ ಅಸಮಾಧಾನ – ಐಷಾರಾಮಿ ಬೇಡ, ಕನಿಷ್ಠ ಸೌಕರ್ಯವಾದರೂ ಕಲ್ಪಿಸಿ ಎಂದು ಗುಡುಗು
ಕೆರಿಬಿಯನ್ನರ ನಾಡಲ್ಲಿ ಟೀಂ ಇಂಡಿಯಾ ಮೂರು ಪಂದ್ಯಗಳ ಏಕದಿನ ಸರಣಿಯನ್ನು ಗೆದ್ದು ಬೀಗಿದೆ. 2006 ರಿಂದ ವೆಸ್ಟ್ ಇಂಡೀಸ್ ವಿರುದ್ಧ ತನ್ನ ಗೆಲುವಿನ ನಾಗಲೋಟವನ್ನು ಮುಂದುವರೆಸಿರುವ ಭಾರತ ಸತತ 13 ನೇ ಸರಣಿಯನ್ನು ತನ್ನದಾಗಿಸಿಕೊಂಡಿದೆ. ಸರಣಿ ಗೆದ್ದ ಖುಷಿಯಲ್ಲಿದ್ದರೂ ಕೂಡಾ ಪಂದ್ಯ ಮುಗಿದ ಮೇಲೆ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಇದನ್ನೂ ಓದಿ: ಹೊಸ ಜೆರ್ಸಿಯಲ್ಲಿ ಯುವ ಪಡೆ ಮಿರಮಿರ ಮಿಂಚಿಂಗ್ – ಟೀಮ್ ಇಂಡಿಯಾ ಕ್ರಿಕೆಟಿಗರಿಂದ ಫೋಟೋಗೆ ಪೋಸ್
ಟೀಮ್ ಇಂಡಿಯಾ ಆಟಗಾರರಿಗೆ ಸಾಮಾನ್ಯ ವ್ಯವಸ್ಥೆಗಳನ್ನೂ ಸಹ ಮಾಡದ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ಹಾರ್ದಿಕ್ ಪಾಂಡ್ಯ ಗುಡುಗಿದ್ದಾರೆ. ಪಂದ್ಯ ಮತ್ತು ಸರಣಿ ಗೆಲುವಿನ ಬಳಿಕ ಮಾತನಾಡಿದ ಕ್ಯಾಪ್ಟನ್ ಪಾಂಡ್ಯ, ಪ್ರವಾಸಿ ತಂಡಕ್ಕೆ ಲಭ್ಯವಾಗುತ್ತಿರುವ ಕಳಪೆ ಆತಿಥ್ಯದ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಸಾಮಾನ್ಯ ವ್ಯವಸ್ಥೆಗಳನ್ನು ಒದಗಿಸಲು ವಿಫಲವಾಗಿರುವ ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿ ಸಮಸ್ಯೆಗಳನ್ನು ಈ ಕೂಡಲೇ ಸರಿಪಡಿಸಬೇಕು. ನಾವು ಆಡಿದ ಅತ್ಯುತ್ತಮ ಕ್ರಿಕೆಟ್ ಕ್ರೀಡಾಂಗಣಗಳಲ್ಲಿ ಇದೂ ಒಂದು. ಮುಂದಿನ ಬಾರಿ ನಾವು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಾಗ ಪರಿಸ್ಥಿತಿಗಳು ಮತ್ತಷ್ಟು ಸುಧಾರಿಸಿರುತ್ತವೆ ಎಂದು ಭಾವಿಸುತ್ತೇನೆ. ಪ್ರಯಾಣದಿಂದ ಹಿಡಿದು ಎಲ್ಲ ಸಂಗತಿಗಳನ್ನು ನಿಭಾಯಿಸುವ ಕಡೆಗೆ ಸಾಕಷ್ಟು ಸುಧಾರಣೆ ಆಗಬೇಕಿದೆ. ಕಳೆದ ಪ್ರವಾಸದಲ್ಲಿಯೂ ಹಲವು ಸಮಸ್ಯೆಗಳು ಎದುರಾಗಿದ್ದವು ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ. “ವೆಸ್ಟ್ ಇಂಡೀಸ್ ಕ್ರಿಕೆಟ್ ಮಂಡಳಿಗೆ ಎಚ್ಚೆತ್ತುಕೊಳ್ಳಲು ಇದು ಸರಿಯಾದ ಸಮಯ. ಇಲ್ಲಿಗೆ ಪ್ರಯಾಣ ಬೆಳೆಸುವ ತಂಡಗಳನ್ನು ಉತ್ತಮವಾಗಿ ನಡೆಸಿಕೊಳ್ಳುವ ಅಗತ್ಯವಿದೆ. ನಾವಿಲ್ಲಿ ಐಶಾರಾಮಿ ಆತಿಥ್ಯ ಎದುರು ನೋಡುತ್ತಿಲ್ಲ. ಬದಲಿಗೆ ಸರಳ ಮತ್ತು ಸಾಮಾನ್ಯ ಸಂಗತಿಗಳ ವ್ಯವಸ್ಥೆ ಆಗುವ ಅಗತ್ಯವಿದೆ ” ಎಂದು ಹಾರ್ದಿಕ್ ಪಾಂಡ್ಯ ಹೇಳಿದ್ದಾರೆ.