ಮಾನ್ಸೂನ್ ಮಳೆಗೆ ಜೀವ ಕಳೆ ಪಡೆದ ಪ್ರವಾಸಿ ತಾಣಗಳು – ಬೆಂಗಳೂರು ಸಮೀಪದಲ್ಲಿವೆ ಈ ಸುಂದರ ಸ್ಥಳಗಳು

ಮಾನ್ಸೂನ್ ಮಳೆಗೆ ಜೀವ ಕಳೆ ಪಡೆದ ಪ್ರವಾಸಿ ತಾಣಗಳು – ಬೆಂಗಳೂರು ಸಮೀಪದಲ್ಲಿವೆ ಈ ಸುಂದರ ಸ್ಥಳಗಳು

ಬದುಕಿನ ಜಂಜಾಟ, ಮನಸ್ಸಿನ ತೊಳಲಾಟ, ನೋವು, ಸಂಕಟಗಳಿಗೆಲ್ಲಾ ಮದ್ದು ಅಂದರೆ ಅದು ಪ್ರಕೃತಿಯ ತಾಣ. ವಾರವಿಡೀ ದುಡಿದು ಬಸವಳಿದ ದೇಹಕ್ಕೆ ಹಸಿರೆಲೆಗಳ ನಡುವೆ ಮನಸ್ಸು ರೆಕ್ಕೆ ಬಿಚ್ಚಿ ಹಾರಬೇಕು. ಜಗದ ಜಂಜಾಟ ಮರೆತು ಹಕ್ಕಿಯಂತೆ ಸಂಭ್ರಮಿಸಬೇಕು ಅನ್ನಿಸುತ್ತೆ. ಇದೇ ಕಾರಣಕ್ಕೆ ಬೆಂಗಳೂರು ಸೇರಿದಂತೆ ನಗರ ಪ್ರದೇಶಗಳ ಜನ ಹೆಚ್ಚೆಚ್ಚು ಪ್ರವಾಸಕ್ಕೆ ಹೋಗುತ್ತಾರೆ. ಅದರಲ್ಲೂ ಈಗ ಮಾನ್ಸೂನ್ ಕಾಲ ಆಗಿರೋದರಿಂದ ಪ್ರವಾಸಿ ತಾಣಗಳಿಗೆಲ್ಲಾ ಹೊಸ ಕಳೆ ಬಂದಿದೆ. ಅದರಲ್ಲೂ ಬೆಂಗಳೂರು ನಿವಾಸಿಗಳಿಗೆ ಮಾನ್ಸೂನ್ ನಲ್ಲಿ ಭೇಟಿ ನೀಡಬಹುದಾದ ಒಂದಷ್ಟು ಸ್ಥಳಗಳ ಬಗ್ಗೆ ಮಾಹಿತಿ ಇಲ್ಲಿದೆ.

ನಂದಿ ಬೆಟ್ಟ

ನಂದಿಬೆಟ್ಟ. ಇಲ್ಲಿ ಸೂರ್ಯೋದಯವಾಗುವುದನ್ನ ನೋಡಲೆಂದೇ ವೀಕೆಂಡ್ ಬಂದ್ರೆ ಸಾವಿರಾರು ಪ್ರವಾಸಿಗರು ಮುಗಿ ಬೀಳ್ತಾರೆ. ಬೆಂಗಳೂರಿಗೆ ಸಮೀಪದ ಗಿರಿಧಾಮವಾಗಿರುವ ನಂದಿ ಬೆಟ್ಟ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ ಕೇವಲ 60 ಕಿ.ಮೀ ದೂರದಲ್ಲಿ ಈ ಆಹ್ಲಾದಕರವಾದ ಪ್ರವಾಸಿ ತಾಣ. ಸಮುದ್ರಮಟ್ಟದಿಂದ 4851 ಅಡಿ ಎತ್ತರದಲ್ಲಿದೆ. ಮಾನ್ಸೂನ್‌ ಸಮಯವಾದ್ದರಿಂದ ನಂದಿ ಬೆಟ್ಟವು ಹಚ್ಚ ಹಸಿರಿನ ವೃಕ್ಷಗಳಿಂದ ಕಂಗೊಳಿಸುತ್ತಿದೆ. ನಿಮ್ಮ ತನು-ಮನವನ್ನು ರಿಫ್ರೆಶ್‌ಗೊಳಿಸಲು ಮಾನ್ಸೂನ್‌ನಲ್ಲಿ ಒಮ್ಮೆ ನಂದಿ ದುರ್ಗಕ್ಕೆ ಭೇಟಿ ನೀಡಿ. ಸೈಕ್ಲಿಂಗ್‌, ಫೋಟೋಗ್ರಫಿ, ಪ್ಯಾರಾಸೈಕ್ಲಿಂಗ್‌ ಇಲ್ಲಿ ಕೈಗೊಳ್ಳಬಹುದಾದ ಸಾಹಸ ಚಟುವಟಿಕೆಗಳಾಗಿವೆ.

ಕನಕಪುರ

ಈಗಾಗಲೇ ನಂದಿ ಬೆಟ್ಟ ನೋಡಿದ್ದೇವೆ ಎನ್ನುವವರು ನೈಸರ್ಗಿಕ ವೈಭವವನ್ನು ಕಣ್ಣಾರೆ ಕಂಡು ಸಂತೋಷಪಡಲು ಕನಕಪುರಕ್ಕೆ ಹೋಗಬಹುದು. ಇದು ಬೆಂಗಳೂರಿನಿಂದ ಸುಮಾರು 70 ಕಿ.ಮೀ ದೂರದಲ್ಲಿದೆ. ಇಲ್ಲಿ ನೀವು ನೀರಿನ ತೊರೆಗಳು, ಹುಲ್ಲಿನ ಬೆಟ್ಟದ ಇಳಿಜಾರುಗಳನ್ನು ನೋಡುತ್ತೀರಿ. ಇಲ್ಲಿ ಟ್ರೆಕ್ಕಿಂಗ್‌, ಕೊರಾಕಲ್‌ ಬೋಟಿಂಗ್‌, ಕಯಾಕಿಂಗ್‌ನಂತಹ ಸಾಹಸಗಳನ್ನು ಎಂಜಾಯ್ ಮಾಡಬಹುದು. ಚುಂಚಿ ಜಲಪಾತ, ಬಿಳಿಕಲ್‌ ರಂಗಸ್ವಾಮಿ ಬೆಟ್ಟ, ಜಾನಪದ ಲೋಕ, ಭೀಮೇಶ್ವರಿ ವನ್ಯಜೀವಿ ಅಭಯಾರಣ್ಯ ಇಲ್ಲಿ ಸಂದರ್ಶಿಸಬಹುದಾದ ಪ್ರವಾಸಿ ಆಕರ್ಷಣೆಗಳು.

ಕಾಳಾವರ ಬೆಟ್ಟ

ಬೆಂಗಳೂರಿನಿಂದ ಸುಮಾರು 62 ಕಿ.ಮೀ ದೂರದಲ್ಲಿರುವ ಈ ಕಾಳಾವರ ಬೆಟ್ಟವನ್ನು ಸ್ಕಂದಗಿರಿ ಎಂದು ಕೂಡ ಕರೆಯುತ್ತಾರೆ. ನೀವು ಈಗಾಗಲೇ ನಂದಿ ಬೆಟ್ಟಕ್ಕೆ ಸಾಕಷ್ಟು ಬಾರಿ ಭೇಟಿ ನೀಡಿದ್ದರೆ ಕಾಳಾವರ ದುರ್ಗಕ್ಕೆ ಭೇಟಿ ನೀಡಿ. ಇದು ಚಿಕ್ಕಬಳ್ಳಾಪುರದ ಸಮೀಪದಲ್ಲಿರುವ ಪಾರಂಪರಿಕ ಪರ್ವತ ಕೋಟೆಯಾಗಿದೆ. ಮಳೆಗಾಲದ ಸಮಯದಲ್ಲಿ ಸಮೃದ್ಧವಾಗಿ ಬೆಳೆದ ಸಸ್ಯವರ್ಗವನ್ನು ನೋಡುವುದು ಮನೋಹರವಾಗಿರುತ್ತದೆ. ಹೂವುಗಳು ಮಳೆಗಾಲದ ಸಮಯದಲ್ಲಿ ಹಚ್ಚ ಹಸಿರಿನಿಂದ ಅರಳಿರುತ್ತವೆ.

ಸಾವನದುರ್ಗ

ಬೆಂಗಳೂರಿನಿಂದ ಸಾವನದುರ್ಗ ಕೇವಲ 49 ಕಿ.ಮೀ ದೂರದಲ್ಲಿದೆ. ಮಳೆಗಾಲದ ಸಮಯದಲ್ಲಿ ಬೆರಗುಗೊಳಿಸುವ ದೃಶ್ಯಾವಳಿಗಳಿಂದ ಈ ಪ್ರವಾಸಿ ತಾಣವು ಕಂಗೊಳಿಸುತ್ತದೆ. ಮಳೆಗಾಲದಲ್ಲಿ ಬೆಂಗಳೂರಿನ ಸುತ್ತಲೂ ಭೇಟಿ ನೀಡಲು ಇದು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ಸಾವನದುರ್ಗವು ಟ್ರೆಕ್ಕಿಂಗ್‌ ಪ್ರೇಮಿಗಳ ಫೇವರೆಟ್ ತಾಣವು ಹೌದು. ಅರ್ಕಾವತಿ ನದಿಯ ಪಕ್ಕದಲ್ಲಿ ಪ್ರಕೃತಿ ನಡಿಗೆ ಮಾಡಲು ಜನರು ಆದ್ಯತೆ ನೀಡುತ್ತಾರೆ. ದೊಡ್ಡ ಆಲದ ಮರ ಮತ್ತು ಮಂಚನಬೆಲೆ ಅಣೆಕಟ್ಟು ಜನಪ್ರಿಯ ಸೈಕ್ಲಿಂಗ್ ಮಾರ್ಗಗಳಾಗಿವೆ. ಅಷ್ಟೇ ಅಲ್ಲದೆ ನೀವು ವೀಕೆಂಡ್ ನಲ್ಲಿ 2 ದಿನ ಪ್ರವಾಸ ಮಾಡುವ ಐಡಿಯಾ ಇದ್ದರೆ ಮಡಿಕೇರಿ, ಚಿಕ್ಕಮಗಳೂರು, ವಯನಾಡ್, ಸಕಲೇಶಪುರ, ಹೊಗೇನಕಲ್ ಜಲಪಾತ, ಶಿವನಸಮುದ್ರಕ್ಕೆ ಭೇಟಿ ನೀಡಬಹುದು.

suddiyaana