ಅಮೆರಿಕ ಸರ್ಕಾರದ ವಶದಲ್ಲಿ ‘ಅನ್ಯಗ್ರಹ ಜೀವಿಗಳು’! – ಮಾಜಿ ಗುಪ್ತಚರ ಅಧಿಕಾರಿ ಸ್ಫೋಟಕ ಹೇಳಿಕೆ

ಅಮೆರಿಕ ಸರ್ಕಾರದ ವಶದಲ್ಲಿ ‘ಅನ್ಯಗ್ರಹ ಜೀವಿಗಳು’! – ಮಾಜಿ ಗುಪ್ತಚರ ಅಧಿಕಾರಿ ಸ್ಫೋಟಕ ಹೇಳಿಕೆ

ವಾಷಿಂಗ್ಟನ್: ಯುಎಫ್‌ಒಗಳು ಮತ್ತು ಏಲಿಯನ್ಸ್‌ಗಳು ಅಮೆರಿಕ ಸರ್ಕಾರದ ವಶದಲ್ಲಿ ಇವೆ ಎಂದು ಅಮೆರಿಕದ ಮಾಜಿ ಗುಪ್ತಚರ ಇಲಾಖೆ ಅಧಿಕಾರಿ ಡೇವಿಡ್ ಗ್ರುಸ್ಚ್ ಹೇಳಿದ್ದಾರೆ.

ಯುಎಫ್‌ಒಗಳನ್ನು ಅಮೆರಿಕ ಸರ್ಕಾರ ತನ್ನ ಬಳಿ ಇರಿಸಿಕೊಂಡಿದೆ ಎಂದು ಗ್ರುಸ್ಚ್ ಅವರು ಜೂನ್‌ನಲ್ಲಿ ಹೇಳಿದ್ದರು. ಅವರ ಈ ಹೇಳಿಕೆ ದೇಶದಲ್ಲಿ ತೀವ್ರ ಸಂಚಲನ ಉಂಟುಮಾಡಿತ್ತು. ಗ್ರುಸ್ಚ್ ಹೇಳಿಕೆ ಕುರಿತಂತೆ ತನಿಖೆ ನಡೆಸಲು ರಿಪಬ್ಲಿಕ್ ಪಕ್ಷದ ನೇತೃತ್ವದ ಮೇಲ್ವಿಚಾರಣಾ ಸಮಿತಿಯನ್ನು ರಚಿಸಲಾಗಿತ್ತು. ಇದೀಗ ವಾಷಿಂಗ್ಟನ್‌ನಲ್ಲಿ ಸದನ ಮೇಲ್ವಿಚಾರಣಾ ಸಮಿತಿಯೊಂದರ ಮುಂದೆ ಗ್ರುಸ್ಚ್ ಅವರಿಂದ ವಿವರಣೆ ಪಡೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ನಾಸಾ ಕಚೇರಿಯಲ್ಲಿ ಕರೆಂಟ್‌ ಕಟ್‌! – ಗಗನಯಾತ್ರಿಗಳ ಜೊತೆ ಸಂಪರ್ಕ ಕಳೆದುಕೊಂಡ ವಿಜ್ಞಾನಿಗಳು!

ಗ್ರುಸ್ಚ್ ಅವರಿಂದ ವಿವರಣೆ ಪಡೆಯುವ ವೇಳೆ ‘ಅಪಘಾತಗೊಂಡ ನೌಕೆ’ಗಳ ಪೈಲಟ್‌ಗಳು ಅಮೆರಿಕ ಸರ್ಕಾರದ ಬಳಿ ಇದ್ದಾರೆಯೇ ಎಂಬ ಪ್ರಶ್ನೆಗೆ, “ಸರ್ಕಾರ ವಶಪಡಿಸಿಕೊಂಡ ಕೆಲವು ವಸ್ತುಗಳ ಜತೆಗೆ ಜೀವಿಗಳೂ ಇದ್ದವು. ಈ ಜೀವಿಗಳು ಏಲಿಯನ್ಸ್‌ಗಳಾಗಿವೆ. ಈ ವಿಚಾರದ ಬಗ್ಗೆ ‘ನೇರ ತಿಳಿವಳಿಕೆ’ ಇರುವ ವ್ಯಕ್ತಿಗಳು ಇದನ್ನು ಖಚಿತಪಡಿಸಿದ್ದಾರೆ” ಎಂದು ಗ್ರುಸ್ಚ್ ಹೇಳಿದ್ದಾರೆ.

ಸರ್ಕಾರವು‌ ಏಲಿಯನ್ಸ್‌ಗಳ ದೇಹಗಳನ್ನು ವಶಪಡಿಸಿಕೊಂಡಿದೆ ಎಂದು ಸಂಸದರ ಸಮಿತಿ ಮುಂದೆ ಹೇಳಿರುವ ಅವರು, ಏಲಿಯನ್ಸ್ ದೇಹವನ್ನು ತಾವು ಎಂದಿಗೂ ಕಂಡಿಲ್ಲ ಎಂಬುದನ್ನು ಒಪ್ಪಿಕೊಂಡಿದ್ದಾರೆ. ತಾವು ಪ್ರತಿಪಾದಿಸಿರುವ ಅನ್ಯಗ್ರಹ ನೌಕೆಯನ್ನು ಕೂಡ ಸ್ವತಃ ಕಣ್ಣಾರೆ ಕಂಡಿಲ್ಲ. ಆದರೆ ಈ ಎಲ್ಲಾ ಹೇಳಿಕೆಗಳೂ ಉನ್ನತ ಮಟ್ಟದ ಗುಪ್ತಚರ ಅಧಿಕಾರಿಗಳ ಜತೆಗಿನ ವಿಸ್ತೃತ ಸಂದರ್ಶನಗಳ ಆಧಾರದಲ್ಲಿವೆ ಎಂದಿದ್ದಾರೆ.

ನನ್ನ ಅಧಿಕೃತ ಕರ್ತವ್ಯದ ಸಂದರ್ಭದಲ್ಲಿ, ಹಲವು ವರ್ಷಗಳ ಹಿಂದೆ ಪತನಗೊಂಡ ಯುಎಪಿಯ ಅವಶೇಷಗಳ ವಶ ಮತ್ತು ರಿವರ್ಸ್ ಎಂಜಿನಿಯರಿಂಗ್ ಕಾರ್ಯಕ್ರಮಗಳ ಬಗ್ಗೆ ನನಗೆ ಮಾಹಿತಿ ಸಿಕ್ಕಿತ್ತು. ನಾನು ಸಂಗ್ರಹಿಸಿದ ವಿವರಗಳ ಆಧಾರದಲ್ಲಿ ಈ ಮಾಹಿತಿಯನ್ನು ನನ್ನ ಮೇಲಿನ ಅಧಿಕಾರಿಗಳಿಗೆ ಮತ್ತು ಹಲವಾರು ಇನ್‌ಸ್ಪೆಕ್ಟರ್ಸ್ ಜನರಲ್‌ಗಳಿಗೆ ನೀಡುವ ನಿರ್ಧಾರ ಮಾಡಿದ್ದೆ. ಮಾಹಿತಿಯು ಬಹಳ ಸೂಕ್ಷ್ಮವಾಗಿರುವುದರಿಂದ ಸಾರ್ವಜನಿಕವಾಗಿ ಅದನ್ನು ಹೇಳುವುದು ಸಾಧ್ಯವಿಲ್ಲ ಎಂದು ಸಮಿತಿ ವಿಚಾರಣೆ ಸಂದರ್ಭದಲ್ಲಿ ಅವರು ಪದೇ ಪದೆ ಹೇಳಿದ್ದಾರೆ ಎಂದು ವರದಿಯಾಗಿದೆ.

ಅನ್ಯಗ್ರಹದ ಜೀವಿಗಳನ್ನು ಅಡಗಿಸಿ ಇರಿಸಲಾಗಿದೆ ಎಂಬ ಗ್ರುಸ್ಚ್ ಅವರ ಹೇಳಿಕೆಯನ್ನು ಅಮೆರಿಕ ಸರ್ಕಾರ ನಿರಾಕರಿಸಿದೆ. ಅನ್ಯಗ್ರಹದ ವಸ್ತುಗಳನ್ನು ಸ್ವಾಧೀನದಲ್ಲಿ ಇರಿಸಿಕೊಂಡಿರುವುದಕ್ಕೆ ಸಂಬಂಧಿಸಿದಂತಹ ಚಟುವಟಿಕೆಯನ್ನು ಸಾಬೀತುಪಡಿಸಲು ಈ ಹಿಂದೆಯಾಗಲೀ ಅಥವಾ ಪ್ರಸ್ತುತವಾಗಲೀ ಯಾವುದೇ ವಿಶ್ವಾಸಾರ್ಹ ಮಾಹಿತಿ ಇಲ್ಲ ಎಂದು ರಕ್ಷಣಾ ಇಲಾಖೆ ವಕ್ತಾರರು ಹೇಳಿದ್ದಾರೆ.

ಡೇವಿಡ್ ಗ್ರುಸ್ಚ್ ಅವರು 2023ರವರೆಗೂ ಅಮೆರಿಕದ ರಕ್ಷಣಾ ಇಲಾಖೆಯ ಸಂಸ್ಥೆಯಲ್ಲಿ ವಿವರಿಸಲಾಗದ ಅಸಂಗತ ವಿದ್ಯಮಾನಗಳ (ಯುಎಪಿ) ವಿಶ್ಲೇಷಣೆಯ ನೇತೃತ್ವ ವಹಿಸಿದ್ದರು.

suddiyaana