ಆಗುಂಬೆ ಘಾಟಿ ರಸ್ತೆಯಲ್ಲಿ ಬಿರುಕು – ವಾಹನ ಸಂಚಾರಕ್ಕೆ ನಿಷೇಧ
ಉಡುಪಿ, ದಕ್ಷಿಣ ಕನ್ನಡ ಸೇರಿ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ಅಲ್ಲಲ್ಲಿ ಭೂಕುಸಿತ ಸಂಭವಿಸುತ್ತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ಥವಾಗಿದೆ. ಭಾರೀ ಮಳೆ ಮತ್ತು ಭಾರೀ ವಾಹನ ಸಂಚಾರದಿಂದ ಆಗುಂಬೆ ಘಾಟಿಯಲ್ಲಿ ಬಿರುಕು ಕಾಣಿಸಿಕೊಂಡಿದೆ. ಈ ಹಿನ್ನೆಲೆ ಘನ ವಾಹನಗಳ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಇದನ್ನೂ ಓದಿ: ಕರಾವಳಿ, ಮಲೆನಾಡು ಭಾಗಗಳಲ್ಲಿ ಧಾರಾಕಾರ ಮಳೆ – ಅಪಾಯಮಟ್ಟ ಮೀರಿ ಹರಿಯುತ್ತಿವೆ ನದಿಗಳು, ರೆಡ್ ಅಲರ್ಟ್ ಘೋಷಣೆ
ಆಗುಂಬೆ ಘಾಟಿ ಪ್ರದೇಶದಲ್ಲಿ ಒಂದೆಡೆ ಭಾರಿ ಮಳೆಯಾಗುತ್ತಿದ್ದರೆ, ಮತ್ತೊಂದೆಡೆ ಆಗುಂಬೆ ಘಾಟಿಯಲ್ಲಿ ವಾಹನ ಸಂಚಾರ ಹೆಚ್ಚಾಗಿದೆ. ಭಾರೀ ಮಳೆ ಮತ್ತು ಭಾರೀ ವಾಹನ ಸಂಚಾರದಿಂದ ರಾಷ್ಟ್ರೀಯ ಹೆದ್ಧಾರಿ 169 A ಯ ಆಗುಂಬೆ ಘಾಟಿಯ 6,7 ಮತ್ತು 11 ನೇ ತಿರುವಿನಲ್ಲಿ ಸಣ್ಣ ಬಿರುಕುಗಳು ಕಾಣಿಸಿಕೊಳ್ಳುತ್ತಿದ್ದು ರಸ್ತೆ ಕುಸಿಯುವ ಆತಂಕ ಉಂಟಾಗಿದೆ. ಹೀಗಾಗಿ ಜುಲೈ 27 ರಿಂದ ಸೆಪ್ಟೆಂಬರ್ 15 ರ ವರೆಗೆ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿ ಉಡುಪಿ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಆದೇಶ ಹೊರಡಿಸಿದ್ದಾರೆ.
ಭಾರೀ ವಾಹನಗಳ ಸಂಚಾರ ನಿರ್ಬಂಧಿಸಿರುವುದರಿಂದಾಗಿ ತೀರ್ಥಹಳ್ಳಿ – ಉಡುಪಿ ಮಧ್ಯೆ ಸಂಚರಿಸುವ ಭಾರೀ ವಾಹನಗಳು ಬದಲಿ ಮಾರ್ಗವನ್ನು ಆಯ್ದುಕೊಳ್ಳಲು ಜಿಲ್ಲಾಡಳಿತ ಸೂಚಿಸಿದೆ. ಬದಲಿ ಮಾರ್ಗಗಳು ಇಲ್ಲಿವೆ..
ಮಾರ್ಗ – ತೀರ್ಥಹಳ್ಳಿ- ಆಗುಂಬೆ- ಶೃಂಗೇರಿ- ಮಾಳಘಾಟ್- ಕಾರ್ಕಳ- ಉಡುಪಿ
ಮಾರ್ಗ 2 – ತೀರ್ಥಹಳ್ಳಿ- ಮಾಸ್ತಿಕಟ್ಟೆ- ಸಿದ್ದಾಪುರ- ಕುಂದಾಪುರ- ಉಡುಪಿ