ನಾಯಿ ಕಚ್ಚಿದ ಮೇಲೆ 50ಕ್ಕೂ ಹೆಚ್ಚು ಜನರಿಗೆ ಕಚ್ಚಿದ ಪುಟ್ಟ ಬಾಲೆ – ಕಂದಮ್ಮ ಸತ್ತ ಮೇಲೆ ಬೆಚ್ಚಿಬಿದ್ದ ಗ್ರಾಮದ ಜನ
ಎರಡೂವರೆ ವರ್ಷದ ಪುಟ್ಟ ಕಂದಮ್ಮ ಅವಳು. ಒಂದು ದಿನ ಪುಟ್ಟ ಬಾಲಕಿಗೆ ನಾಯಿಯೊಂದು ಕಚ್ಚಿತ್ತು. ಇದಾದ ಕೆಲವೇ ದಿನಗಳಲ್ಲಿ ಬಾಲಕಿ ಅಸ್ವಸ್ಥಗೊಂಡಳು. ಅಷ್ಟೇ ಅಲ್ಲ. ಸಿಕ್ಕ ಸಿಕ್ಕವರಿಗೂ ಕಚ್ಚುತ್ತಿದ್ದಳು. ನಾಯಿಯಂತೆಯೇ ವರ್ತಿಸುತ್ತಿದ್ದಳು. ನಂತರ ಬಾಲಕಿಯ ಆರೋಗ್ಯ ಜಾಸ್ತಿ ಹದಗೆಟ್ಟಿತ್ತು. ಈಗ ಆ ಊರಿನ ಜನ ಬೆಚ್ಚಿಬೀಳುತ್ತಿದ್ದಾರೆ. ಆಸ್ಪತ್ರೆಯಲ್ಲೂ ಜನಜಂಗುಳಿ ಏರ್ಪಟ್ಟಿದೆ.
ಇದನ್ನೂ ಓದಿ: ನೀರಲ್ಲಿ ಹುಚ್ಚಾಟ ತೋರಿ ಪ್ರಾಣ ಹೋದರೂ ಲೆಕ್ಕಕ್ಕಿಲ್ಲ – ಮೋಜು ಮಸ್ತಿ ನೆಪದಲ್ಲಿ ಜೀವ ಹೋಗಬಹುದು ಹುಷಾರ್..!
ಉತ್ತರ ಪ್ರದೇಶದ ಜಲೌನ್ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದ ಘಟನೆಯಿದು. ಎರಡೂವರೆ ವರ್ಷದ ಹೆಣ್ಣುಮಗು ಆಟವಾಡುತ್ತಿದ್ದಾಗ ಬೀದಿ ನಾಯಿಯೊಂದು ಕಚ್ಚಿತ್ತು. ಈ ಅವಘಡ ನಡೆದ ಎರಡನೇ ದಿನದಿಂದ ಮಗು ನಾಯಿಯಂತೆಯೇ ವರ್ತಿಸುವುದು ಮತ್ತು ಆಟವಾಡುವ ವೇಳೆ ಜನರಿಗೆ ಕಚ್ಚುವುದನ್ನು ಶುರುಮಾಡಿದ್ದಾಳೆ. ಇಲ್ಲಿಯವರೆಗೆ ಬಾಲಕಿ 50ಕ್ಕೂ ಹೆಚ್ಚು ಜನರಿಗೆ ಕಚ್ಚಿದ್ದಾಳೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೆಣ್ಣುಮಗು ದಿನದಿಂದ ದಿನಕ್ಕೆ ಅಸ್ವಸ್ಥವಾಗಿದೆ. ಮಗುವನ್ನು ಉಳಿಸಿಕೊಳ್ಳಲು ಹೆತ್ತವರು ಸಮೀಪದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದ್ದಂತೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಝಾನ್ಸೀ ವೈದ್ಯಕೀಯ ಕಾಲೇಜಿಗೆ ದಾಖಲಿಸಲು ತಿಳಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಆ ಮಗು ಮೃತಪಟ್ಟಿದೆ. ಇದೀಗ ಗ್ರಾಮಸ್ಥರೆಲ್ಲರೂ ಭಯಬೀತರಾಗಿದ್ದು, ಆ್ಯಂಟೀ ರೇಬಿಸ್ ಇಂಜೆಕ್ಷನ್ ಪಡೆಯಲು ಸರ್ಕಾರಿ ಆಸ್ಪತ್ರೆಗೆ ಹೋಗುತ್ತಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಲೌನ್ನ ಮುಖ್ಯ ವೈದ್ಯಾಧಿಕಾರಿ ಡಾ. ಎನ್.ಡಿ. ಶರ್ಮಾ, ‘ಈ ಪ್ರಕರಣವು ನನ್ನ ಗಮನಕ್ಕೆ ಬಂದಿದೆ. ಆ್ಯಂಟಿ ರೇಬಿಸ್ ಇಂಜೆಕ್ಷನ್ ಪಡೆಯಲು ಜನರು ತಂಡೋಪತಂಡವಾಗಿ ಆಸ್ಪತ್ರೆಗೆ ಧಾವಿಸುತ್ತಲೇ ಇದ್ದಾರೆ. ನಾಯಿಯಿಂದ ಕಚ್ಚಿಸಿಕೊಂಡ ಹೆಣ್ಣುಮಗು ಮನುಷ್ಯರನ್ನು ಕಚ್ಚಿದರೆ ರೇಬೀಸ್ ಸೋಂಕು ಹರಡುವುದಿಲ್ಲ. ಆದರೆ ನಾಯಿ, ಕೋತಿ ಅಥವಾ ಇನ್ನಿತರೇ ಕಾಡುಪ್ರಾಣಿಗಳಿಂದ ಮನುಷ್ಯರು ಕಚ್ಚಿಸಿಕೊಂಡಾಗ ರೇಬೀಸ್ ಹರಡುತ್ತದೆ. ಆದರೂ ಜನರು ತಮ್ಮ ಸುರಕ್ಷತೆಗಾಗಿ ಇಂಜೆಕ್ಷನ್ ಪಡೆಯುತ್ತಿದ್ದಾರೆ’ ಎಂದಿದ್ದಾರೆ.