ಮಳೆಗಾಲದಲ್ಲಿ ‘ವಜ್ರ’ಗಳ ಬೇಟೆ – ಕೆಲವು ರೈತರಿಗೆ ಸುಗ್ಗಿ.. ಇನ್ನು ಕೆಲವರಿಗೆ ಹುಡುಕುವುದೇ ಕಾಯಕ..!
ಮುಂಗಾರು ತಡವಾಗಿ ಪ್ರವೇಶ ಮಾಡಿರುವುದು ಒಂದು ಕಡೆಯಾದರೆ, ಹೊಲಗದ್ದೆಗಳಲ್ಲಿ ನೀರಿಲ್ಲ ಅನ್ನೋ ಯೋಚನೆ ಇನ್ನೊಂದು ಕಡೆ. ಆದರೆ, ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಜನ ಮಳೆಗಾಗಿ ಕಾಯುವುದು ವ್ಯವಸಾಯ ಮಾಡಲು ಅಲ್ಲ. ಮಳೆ ಬಂದರೆ ಸಾಕು, ಅವರೆಲ್ಲಾ ಹೊಲಗದ್ದೆಗಳಲ್ಲೇ ಇದ್ದು ಬಿಡುತ್ತಾರೆ. ಯಾಕೆಂದರೆ, ಮಳೆ ಬಿದ್ದ ತಕ್ಷಣ ಫಳಫಳ ಹೊಳೆಯುವ ಕಲ್ಲುಗಳು ಹೊಲದಲ್ಲಿ ಸಿಗುತ್ತವೆ. ಅದು ಬರೀ ಕಲ್ಲುಗಳಲ್ಲ. ಝಣ ಝಣ ಜೇಬು ತುಂಬ ಹಣ ಸಂಪಾದಿಸಲು ರೈತರಿಗೆ ಸಿಗುವ ವಜ್ರಗಳು.
ಇದನ್ನೂ ಓದಿ: ಆಸ್ಟ್ರೇಲಿಯಾ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್‌ವೆಲ್ ಪತ್ನಿ ಗರ್ಭಿಣಿ – ಭಾರತೀಯ ಸಂಪ್ರದಾಯದ ಪ್ರಕಾರ ಸೀಮಂತ ಸಂಭ್ರಮ
ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ವಜಕರೂರ ಮತ್ತು ಪೆತ್ತಿಕೊಂಡ ಮಂಡಲದ ಹಲವಾರು ಹಳ್ಳಿಗಳಲ್ಲಿ ಈ ಸಮಯದಲ್ಲಿ ರೈತರಿಗೆ ಒಂದೇ ಕೆಲಸ. ಅದು ವಜ್ರಗಳ ಹುಡುಕಾಟ. ವಜಕರೂರು, ತುಗ್ಗಲಿ, ಜೊನ್ನಾಗಿರಿ, ಮಡ್ಡಿಕೇರಾ, ಬಾಸಿನೇಪಲ್ಲಿ, ಚೆನ್ನಗಿರಿ, ಯಾಪಲಿ, ಮದ್ದಿಕೇರಿ ಸೇರಿ ಸುತ್ತಮುತ್ತಲ ಹಳ್ಳಿಗಳಲ್ಲಿ ಮಳೆಗಾಲದಲ್ಲಿ ರೈತರು, ಕೂಲಿಕಾರ್ಮಿಕರು ಸೇರಿದಂತೆ ಅನೇಕರು ವಜ್ರಕ್ಕಾಗಿ ಹುಡುಕಾಟ ನಡೆಸುತ್ತಾರೆ. ವಜ್ರ ಹುಡುಕಲು ಜಮೀನುಗಳನ್ನ ಲೀಸ್ (ಭೋಗ್ಯಕ್ಕೆ) ಪಡೆಯುವರೂ ಇದ್ದಾರೆ. ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿ ರಾಯಲಸೀಮಾದಲ್ಲಿ ವಜ್ರಗಳ ಮಾರುಕಟ್ಟೆಯಿತ್ತು. ಆಗ ರಸ್ತೆ ಪಕ್ಕದಲ್ಲಿ ವಜ್ರ, ವಜ್ರದ ಆಭರಣಗಳನ್ನ ಮಾಡಿ ಮಾರಾಟ ಮಾಡಲಾಗುತ್ತಿತ್ತು. ಆಗಿನ ವಜ್ರಗಳು ಇಂದಿಗೂ ಭೂಮಿಯಲ್ಲಿದ್ದು, ಮಳೆ ಬಂದಾಗ ಮಾತ್ರ ಕಣ್ಣಿಗೆ ಗೋಚರವಾಗುತ್ತವೆ ಅಂತ ಜನ ನಂಬಿದ್ದಾರೆ. ಇನ್ನು ಕೆಲವರಿಗೆ ಬೆಲೆಬಾಳುವ ವಜ್ರಗಳು ಸಿಕ್ಕಿರುವುದೂ ಇದೆ. ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಮೀನುಗಳ ಮೇಲೆ ನಿಗಾ ಇಟ್ಟಿದ್ದರೂ ಕೂಡಾ ಮಳೆಯಾದರೆ ಸಾಕು ಜನ ಹೊಲದಲ್ಲಿಯೇ ಬೀಡುಬಿಡುತ್ತಾರೆ. ಹಗಲಿಡಿ ವಜ್ರಕ್ಕಾಗಿ ಹುಡುಕುತ್ತಾರೆ.
ಇನ್ನು ಗಡಿ ರಾಜ್ಯ ಆಂಧ್ರಪ್ರದೇಶದಲ್ಲಿ ವಜ್ರದ ಹುಡುಕಾಟಕ್ಕಾಗಿ ರಾಯಚೂರು, ಬಳ್ಳಾರಿ ಜಿಲ್ಲೆಗಳಿಂದಲೂ ಜನ ಹೋಗುತ್ತಿದ್ದಾರೆ. ಇಲ್ಲಿ ವಜ್ರಗಳ ಹುಡುಕಾಟ ನಡೆಸುತ್ತಿರುವ ಕೆಲವರು ಲಕ್ಷ ಲಕ್ಷ ಸಂಪಾದಿಸಿದ್ದಾರೆ. ಅದರಲ್ಲೂ ಒಬ್ಬ ರೈತ ವಜ್ರದ ಹರಳುಗಳನ್ನು ಮಾರಿ ಎರಡು ಕೋಟಿ ರೂಪಾಯಿ ಪಡೆದಿದ್ದಾನೆ. ಹೀಗಾಗಿ ಇಲ್ಲಿಗೆ ವಜ್ರದ ಹುಡುಕಾಟ ಮಾಡಲು ಗಡಿ ಭಾಗದ ಜನ ಕೂಡಾ ದಾಂಗುಡಿಯಿಡುತ್ತಿದ್ದಾರೆ.