ಎಷ್ಟೇ ಅಲೆದಾಡಿದರೂ ಸಿಗಲಿಲ್ಲ ಆಂಬ್ಯುಲೆನ್ಸ್ – ಅಣ್ಣನ ಮೃತದೇಹವನ್ನು ಬೈಕ್ಗೆ ಕಟ್ಟಿ ಮನೆಗೆ ತಂದ ತಮ್ಮ..!
ಮಹಾರಾಷ್ಟ್ರ ಸರ್ಕಾರ ಆರೋಗ್ಯ ವ್ಯವಸ್ಥೆಗಾಗಿ ಕೋಟಿ ಕೋಟಿ ರೂಪಾಯಿ ಖರ್ಚು ಮಾಡುತ್ತದೆ. ಆದರೆ, ಹಳ್ಳಿಗಳಲ್ಲಿ ಆರೋಗ್ಯ ವ್ಯವಸ್ಥೆ ಹೇಗಿದೆ. ಹಳ್ಳಿಗಳಲ್ಲಿ ಬಡವರಿಗೆ ಸುಲಭವಾಗಿ ಆರೋಗ್ಯ ವ್ಯವಸ್ಥೆ ತಲುಪುತ್ತಿದೆಯಾ ಅನ್ನೋದಕ್ಕೆ ಇಲ್ಲೊಂದು ಘಟನೆಯೇ ಸಾಕ್ಷಿ. ಈ ಘಟನೆ ಸರ್ಕಾರದ ವ್ಯವಸ್ಥೆಯನ್ನೇ ಅಣಕಿಸುವಂತಿದೆ. ಯಾಕೆಂದರೆ ಇಲ್ಲೊಬ್ಬ ಯುವಕ ತನ್ನ ಮೃತಪಟ್ಟ ಅಣ್ಣನ ಮೃತದೇಹವನ್ನು ತರಲು ಆಂಬ್ಯುಲೆನ್ಸ್ಗಾಗಿ ಒದ್ದಾಡುತ್ತಾನೆ. ಆದರೆ, ಆಂಬ್ಯುಲೆನ್ಸ್ ಸಿಗುವುದಿಲ್ಲ. ನಂತರ ದಿಕ್ಕುತೋಚದೆ ಬೈಕ್ನಲ್ಲಿ ಅಣ್ಣನ ಮೃತದೇಹವನ್ನು ತರುತ್ತಾನೆ.
ಇದನ್ನೂ ಓದಿ: ವಿದ್ಯಾರ್ಥಿನಿ ಸ್ನಾನ ಮಾಡುವಾಗ ಸಹಪಾಠಿಗಳಿಂದಲೇ ಚಿತ್ರೀಕರಣ – ಮೂವರು ವಿದ್ಯಾರ್ಥಿನಿಯರಿಗೆ ಕಾಲೇಜಿಂದ ಗೇಟ್ಪಾಸ್..!..!
ಮಹಾರಾಷ್ಟ್ರದ ಗಡ್ಚಿರೋಲಿ ಜಿಲ್ಲಾಸ್ಪತ್ರೆಯಲ್ಲಿ ಯುವಕ ಮೃತಪಟ್ಟಿದ್ದಾನೆ. ಆಂಬ್ಯುಲೆನ್ಸ್ ಸಿಗದಿದ್ದಾಗ ಆತನ ತಮ್ಮ ಮೃತದೇಹವನ್ನು ಬೈಕ್ ನಲ್ಲಿ ಕಟ್ಟಿ ತಂದಿದ್ದಾರೆ. ಮೃತದೇಹವನ್ನು ಬೈಕ್ಗೆ ಕಟ್ಟಿ ತಂದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಗಣೇಶ್ ತೇಲಮಿ ಎಂಬ ಯುವಕ ಗಡ್ಚಿರೋಲಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. ಕೆಲ ದಿನಗಳ ಹಿಂದೆ ಆತನ ಸ್ಥಿತಿ ಹದಗೆಟ್ಟಿದ್ದು, ಕುಟುಂಬಸ್ಥರು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದರೂ ಗಣೇಶ್ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ದಿನದಿಂದ ದಿನಕ್ಕೆ ಅವನ ಸ್ಥಿತಿ ಹದಗೆಡುತ್ತಿತ್ತು. ಸೋಮವಾರ ರಾತ್ರಿ ಚಿಕಿತ್ಸೆ ವೇಳೆ ಗಣೇಶ್ ಮೃತಪಟ್ಟಿದ್ದಾರೆ. ಆಂಬ್ಯುಲೆನ್ಸ್ ಗಾಗಿ ಕುಟುಂಬಸ್ಥರು ರಾತ್ರಿಯಿಡೀ ಅಲ್ಲಿ ಇಲ್ಲಿ ಅಲೆದಾಡಿದ್ದಾರೆ, ಆದರೆ ಆಂಬುಲೆನ್ಸ್ ಪತ್ತೆಯಾಗಿಲ್ಲ. ಕೊನೆಗೆ ಮಂಗಳವಾರ ಬೆಳಗ್ಗೆ ಕೂಡ ಆಂಬ್ಯುಲೆನ್ಸ್ ಗಾಗಿ ಸಂಬಂಧಿಕರು ಹರಸಾಹಸ ಪಟ್ಟರೂ ಗಣೇಶ್ ಮೃತದೇಹವನ್ನು ಗ್ರಾಮಕ್ಕೆ ಕೊಂಡೊಯ್ಯಲು ಆಂಬುಲೆನ್ಸ್ ಸಿಗಲಿಲ್ಲ. ಬೇಸತ್ತ ಕುಟುಂಬಸ್ಥರು ಗಣೇಶ್ ಮೃತದೇಹವನ್ನು ಮಂಚದ ಮೇಲೆ ಇಟ್ಟು ಬೈಕ್ ನಲ್ಲಿ ಕಟ್ಟಿ ನಂತರ ಗ್ರಾಮಕ್ಕೆ ತಂದಿದ್ದಾರೆ. ಈ ವೇಳೆ ದಾರಿಯಲ್ಲಿ ಈ ದೃಶ್ಯವನ್ನು ನೋಡಿದವರಿಗೆ ಬೇಜಾರು ಜೊತೆಗೆ ಆಶ್ಚರ್ಯವಾಗಿದೆ. ಗಣೇಶ್ ಸಹೋದರ ಬೈಕ್ನಲ್ಲಿ ಮೃತದೇಹದೊಂದಿಗೆ ಗ್ರಾಮ ತಲುಪಿದಾಗ ಜನರೆಲ್ಲಾ ಸೇರಿದ್ದರು. ಆಸ್ಪತ್ರೆ ಸಿಬ್ಬಂದಿ ಹಾಗೂ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾರೂ ಕಿವಿಗೊಡಲಿಲ್ಲ ಎಂದು ಗಣೇಶ್ ಅವರ ಸಹೋದರ ತಿಳಿಸಿದರು. ಇನ್ನು ಖಾಸಗಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಅಷ್ಟೊಂದು ಹಣ ತಮ್ಮ ಬಳಿಯಿಲ್ಲ ಎಂದು ಮೃತನ ಸಹೋದರ ತಿಳಿಸಿದ್ದಾನೆ.