ರಾಜ್ಯದಲ್ಲಿ ಮುಂದುವರಿದ ಮಳೆ – ಮುಂದಿನ 1 ವಾರ ರಾಜ್ಯಾದ್ಯಂತ ಹೈ ಅಲರ್ಟ್
ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಹಲವು ಜಿಲ್ಲೆಗಳಲ್ಲಿ ನಿರಂತವಾಗಿ ಮಳೆ ಸುರಿಯುತ್ತಿದ್ದು, ನದಿಗಳು ಉಕ್ಕಿ ಹರಿಯುತ್ತಿದೆ. ಹಲವು ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಮುಂದುವರಿದಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ್ಯಂತ ಮುಂದಿನ 1 ವಾರ ಹೈ ಅಲರ್ಟ್’ನಲ್ಲಿರಬೇಕಿದ್ದು, ಮುಂಜಾಗ್ರತಾ ಕ್ರಮಗಳ ಕೈಗೊಳ್ಳಲಾಗುತ್ತಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ದಕ್ಷಿಣ, ಕನ್ನಡ ಉಡುಪಿ, ಮಡಿಕೇರಿ, ಉತ್ತರಕನ್ನಡ ಜಿಲ್ಲೆ ಸೇರಿ ಕೆಲವು ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಮಂಗಳವಾರವೂ ಮಳೆ ಮುಂದುವರಿದಿರುವ ಹಿನ್ನೆಲೆ ಆಯಾಯಾ ಜಿಲ್ಲೆಯ ಜಿಲ್ಲಾಧಿಕಾರಿಗಳು ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ಇದನ್ನೂ ಓದಿ: ಜಂಬೂಸವಾರಿಗೆ ಹೊಸ ಆನೆಗಳ ಹುಡುಕಾಟ – ಆಗಸ್ಟ್ 23ರಿಂದ ಗಜಪಯಣ ಆರಂಭ
ಇನ್ನು ಕರಾವಳಿ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳ ಅವಧಿಯಲ್ಲಿ ಭಾರಿ ಮಳೆಯಾಗಲಿದೆ. 11.5 ಸೆಂ.ಮೀ.ನಿಂದ 20 ಸೆಂ.ಮೀ. ಮಳೆ ಸುರಿಯುವ ಸಾಧ್ಯತೆ ಇದ್ದು, ಜತೆಗೆ ಗಾಳಿ ಗಂಟೆಗೆ 45-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ತಗ್ಗು ಪ್ರದೇಶದಲ್ಲಿನ ಜನರು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಗೊಳ್ಳಬೇಕು. ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಸೂಚಿಸಲಾಗಿದೆ.
ಉತ್ತರ ಒಳನಾಡಿನ ಒಂದೆರಡು ಕಡೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಈ ಹಿನ್ನೆಲೆ 3 ದಿನಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಾತ್ರವಲ್ಲದೇ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಹಾಸನ ಜಿಲ್ಲೆಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ. ಬುಧವಾರದಿಂದ 4 ದಿನಗಳ ಕಾಲ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಮುಂದಿನ 5 ದಿನಗಳ ಕಾಲ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.