ಮುಂದುವರಿದ ಮಳೆಯ ಆರ್ಭಟ – ಉಡುಪಿ, ಕೊಡಗು, ಸುಳ್ಯದಲ್ಲಿ ಮಂಗಳವಾರ ರಜೆ ಘೋಷಣೆ

ಮುಂದುವರಿದ ಮಳೆಯ ಆರ್ಭಟ – ಉಡುಪಿ, ಕೊಡಗು, ಸುಳ್ಯದಲ್ಲಿ ಮಂಗಳವಾರ ರಜೆ ಘೋಷಣೆ

ಉಡುಪಿ, ದಕ್ಷಿಣಕನ್ನಡ ಮತ್ತು ಮಡಿಕೇರಿಯಲ್ಲಿ ಮಳೆಯ ಆರ್ಭಟ ಮುಂದುವರೆದಿದೆ. ಕರಾವಳಿ ಮತ್ತು ಕೊಡಗಿನಲ್ಲಿ ನಿರಂತರವಾಗಿ ಮಳೆಯಾಗುತ್ತಿರುವ ಪರಿಣಾಮ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮುಂದುವರೆದಿದೆ. ಮಂಗಳವಾರ (ಜುಲೈ 25) ರಜೆ ಘೋಷಣೆ ಮಾಡಲಾಗಿದೆ. ದಿನಾಂಕ 25.07.2023 ರಂದು ಉಡುಪಿ ಜಿಲ್ಲೆಯ ಎಲ್ಲಾ ತಾಲೂಕಿನ ಅಂಗನವಾಡಿ ಕೇಂದ್ರಗಳಿಗೆ, ಹಾಗೂ ಪ್ರಾಥಮಿಕ, ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳ ವಿದ್ಯಾರ್ಥಿಗಳಿಗೆ ರಜೆಯನ್ನು ಘೋಷಿಸಿ ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಆದೇಶಿಸಿದ್ದಾರೆ. ಜೊತೆಗೆ ಕೊಡಗಿನಾದ್ಯಂತ ಭಾರೀ ಗಾಳಿ ಮಳೆ ಸುರಿಯುತ್ತಿರುವುದರಿಂದ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ಮಂಗಳವಾರವೂ ರಜೆ ಘೋಷಣೆ ಮಾಡಲಾಗಿದೆ.

ಇದನ್ನೂ ಓದಿ:  ಕುಕ್ಕೆಯಲ್ಲಿ ರಸ್ತೆ ಸಂಪರ್ಕ ಸ್ಥಗಿತ – ಬೆಳಗಾವಿಯಲ್ಲಿ ಮನೆಗಳಿಗೆ ನುಗ್ಗಿದ ನೀರು – ರಾಜ್ಯಾದ್ಯಂತ ಮಳೆಯ ಆರ್ಭಟಕ್ಕೆ ಜನ ತಲ್ಲಣ

ಕೊಡಗು ಜಿಲ್ಲೆಯಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ಪರೀಕ್ಷೆ ನಡೆಯುತ್ತಿದೆ. ಹೀಗಾಗಿ ಜಿಲ್ಲೆಯ ಅಂಗನವಾಡಿ, ಶಾಲೆ, ಹಾಗೂ ಪಿಯು ಕಾಲೇಜಿಗೆ ಮಂಗಳವಾರ ರಜೆ ಘೋಷಿಸಿ ಕೊಡಗು ಡಿಸಿ ವೆಂಕಟ್ ರಾಜ್ ಆದೇಶ ಹೊರಡಿಸಿದ್ದಾರೆ. ಕೊಡಗಿನ ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಕಾವೇರಿ ಹಾಗೂ ಉಪನದಿಗಳು ಮೈದುಂಬಿ ಹರಿಯುತ್ತಿವೆ. ಭಾಗಮಂಡಲದ ತ್ರಿವೇಣಿ ಸಂಗಮದ ನೀರು ಭಂಗಢೇಶ್ವರ ದೇವಾಲಯ ಆವರಣದವರೆಗೂ ಹರಿದಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಜಲಾವೃತವಾಗಿದ್ದು, 4 ಅಡಿಯಷ್ಟು ನೀರು ತುಂಬಿಕೊಂಡಿದೆ. ಭಾರೀ ಗಾತ್ರದ ವಾಹನಗಳಷ್ಟೇ ಪ್ರದೇಶಗಳಲ್ಲಿ ಸಂಚಾರಕ್ಕೆ ಸಾಧ್ಯವಾಗುತ್ತಿದ್ದು, ಸಣ್ಣ ಪುಟ್ಟ ವಾಹನಗಳ ಸಂಚಾರ ಅಸಾಧ್ಯವಾಗಿದೆ.

ಮತ್ತೊಂದೆಡೆ ಸುಳ್ಯ ತಾಲೂಕಿನಲ್ಲೂ ಮಂಗಳವಾರ ರಜೆ ಘೋಷಣೆ ಮಾಡಲಾಗಿದೆ. ತಾಲೂಕಿನ ಅಂಗನವಾಡಿ ಕೇಂದ್ರ, ಶಾಲಾ ಮತ್ತು ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

suddiyaana