ಕಳ್ಳತನಕ್ಕೆ ಹೋದ ಖದೀಮರಿಗೆ ಶಾಕ್! – ಕದಿಯಲು ಏನು ಸಿಗದೇ ತಮ್ಮದೇ 500 ರೂ ಇಟ್ಟು ಬಂದ ಕಳ್ಳರು

ಈ ಜಗತ್ತಿನಲ್ಲಿ ನಿತ್ಯ ಲೆಕ್ಕವಿಲ್ಲದಷ್ಟು ಕಳ್ಳತನವಾಗುತ್ತಿರುತ್ತದೆ. ಕಳ್ಳರ ಕೈಗೆ ಏನು ಸಿಕ್ಕರೂ ಬಿಡೋದಿಲ್ಲ. ಅದು ಉಪಯೋಗ ಆಗುತ್ತೋ ಇಲ್ಲವೋ ಗೊತ್ತಿಲ್ಲ. ಕೈಗೆ ಸಿಕ್ಕಿದ್ದನ್ನು ಬಾಚಿಕೊಂಡು ಹೋಗುತ್ತಾರೆ. ಆದರೆ ಇಲ್ಲೊಂದು ಕಳ್ಳರ ಗುಂಪು ಕನ್ನ ಹಾಕಿದ ಮನೆಯಲ್ಲಿ ಏನು ಸಿಗದೇ ಇದ್ದಾಗ ತಮ್ಮದೇ ದುಡ್ಡನ್ನು ಇಟ್ಟು ಬಂದಿದ್ದಾರೆ!
ಕಳ್ಳತನ ಬಯಲಾಗುತ್ತಿದ್ದಂತೆ ಮನೆ ಮಾಲೀಕರು ಹಿಡಿ ಶಾಪ ಹಾಕುವುದನ್ನು ನಾವು ನೋಡಿರುತ್ತೇವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳ್ಳರ ಗುಂಪೊಂದು ಮನೆಗೆ ನುಗ್ಗಿ ಕಳ್ಳತನ ಮಾಡಲು ಹೋಗಿದ್ದಾರೆ. ಮನೆ ಮಾಲೀಕ ಮನೆಗೆ ಬಂದು ನೋಡಿದಾಗ ಕಳ್ಳರ ಕಿತಾಪತಿ ನೋಡಿ ಅಳಬೇಕೋ ನಗಬೇಕೋ ಅನ್ನೋ ಗೊಂದಲಕ್ಕೆ ಒಳಗಾಗಿದ್ದಾರೆ. ಏಕೆಂದರೆ ಕಳ್ಳತನ ಮಾಡಲು ಹೋದವರಿಗೆ ಕದಿಯಲು ಯೋಗ್ಯವಾದ ವಸ್ತು ಏನು ಸಿಗದ ಕಾರಣ ಕಳ್ಳರು 500 ರೂ. ನೋಟನ್ನು ಇಟ್ಟು ಹೋಗಿದ್ದಾರೆ.
ದೆಹಲಿಯ ರೋಹಿಣಿ ಸೆಕ್ಟರ್ 8ರಲ್ಲಿರುವ ಮನೆಯಲ್ಲಿ ಜುಲೈ 20 ಮತ್ತು 21ರ ಮಧ್ಯರಾತ್ರಿ ನಡೆದ ಈ ವಿಚಿತ್ರ ಘಟನೆ ನಡೆದಿದೆ. ಮನೆ ಮಾಲೀಕರು ಪೊಲೀಸರಿಗೆ ದೂರು ನೀಡಿದ ಬಳಿಕ ಈ ಪ್ರಕರಣ ಬೆಳಕಿಗೆ ಬಂದಿದೆ. ದಿಲ್ಲಿಯ ರೋಹಿಣ ಸೆಕ್ಟರ್ 8ರಲ್ಲಿರುವ 80 ವರ್ಷದ ನಿವೃತ್ತ ಇಂಜಿನಿಯರ್ ಎಂ ರಾಮಕೃಷ್ಣ ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಕಳ್ಳರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಎಂ ರಾಮಕೃಷ್ಣ ಅವರು ಜುಲೈ 19 ರ ಸಂಜೆ ತಮ್ಮ ಪತ್ನಿಯೊಂದಿಗೆ ತಮ್ಮ ಮಗನನ್ನು ನೋಡಲು ಗುರುಗ್ರಾಮಕ್ಕೆ ಹೋಗಿದ್ದರು. ಈ ವೇಳೆ ಕಳ್ಳರು ಮನೆ ನುಗ್ಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಜುಲೈ 21ರ ಬೆಳಗ್ಗೆ ಪಕ್ಕದ ಮನೆಯವರು ನಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಫೋನ್ ಮಾಡಿ ಹೇಳಿದರು. ಮಾಹಿತಿ ತಿಳಿದ ತಕ್ಷಣ ನಾವು ಮನೆಗೆ ಧಾವಿಸಿದ್ದೇವೆ. ಮನೆಯ ಮುಖ್ಯ ಗೇಟ್‌ನ ಬೀಗ ಒಡೆದಿರುವುದನ್ನು ನೋಡಿ ಒಳಗಡೆ ಹೋದರೆ ಕಳ್ಳರು ಏನು ಕದ್ದಿಲ್ಲವೆಂದು ಗೊತ್ತಾಗಿದೆ. ಆದರೆ, ಮುಖ್ಯ ಗೇಟ್ ಬಳಿ 500 ರೂ. ಬಿದ್ದಿರುವುದು ಕಂಡುಬಂದಿದೆ. ತಮ್ಮ ಮನೆಯೊಳಗೆ ಯಾವುದೇ ಬೆಲೆ ಬಾಳುವ ವಸ್ತುಗಳನ್ನು ಇಟ್ಟಿರಲಿಲ್ಲ. ಅಲಮೆರಾ ಕೂಡ ಖಾಲಿ ಇದ್ದವು ಎಂದು ಎಂ ರಾಮಕೃಷ್ಣ ಮಾಹಿತಿ ನೀಡಿದ್ದಾರೆ.
ಎಂ ರಾಮಕೃಷ್ಣ ಅವರು ನೀಡಿದ ಅನ್ವಯ ಪೊಲೀಸರು ವಿವಿಧ ಐಪಿಸಿ ಸೆಕ್ಷನ್‌ಗಳಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣದ ತನಿಖೆಯನ್ನು ಆರಂಭಿಸಿರುವ ಪೊಲೀಸರು ಕಳ್ಳರ ಬಂಧನಕ್ಕೆ ಶೋಧ ನಡೆಸುತ್ತಿದ್ದಾರೆ.