ಕರಾವಳಿಯಲ್ಲಿ ಧಾರಾಕಾರ ಮಳೆ – ‘ರೆಡ್ ಅಲರ್ಟ್’ ಘೋಷಿಸಿದ ಹವಾಮಾನ ಇಲಾಖೆ
ದಕ್ಷಿಣಕನ್ನಡ, ಉಡುಪಿ, ಉತ್ತರಕನ್ನಡ ಜಿಲ್ಲೆಗಳಲ್ಲಿ ಮಳೆಯ ಆರ್ಭಟ ಮತ್ತಷ್ಟೂ ಜೋರಾಗಿದೆ. ಬಿರುಗಾಳಿ, ಗುಡುಗು ಸಹಿತ ಧಾರಾಕಾರ ಮಳೆ ಸುರಿಯುತ್ತಿದೆ. ಮಳೆಯ ಅಬ್ಬರ ಮಂಗಳವಾರ, ಬುಧವಾರ, ಗುರುವಾರದವರೆಗೂ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಮತ್ತು ಕರಾವಳಿ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಇದನ್ನೂ ಓದಿ: ದೇಶಾದ್ಯಂತ ಭಾರಿ ಮಳೆ ಬೆನ್ನಲ್ಲೇ ಅಪ್ಪಳಿಸಲಿದೆ 3 ಸೈಕ್ಲೋನ್! – ಹೈ ಅಲರ್ಟ್ ಘೋಷಿಸಿದ ಐಎಂಡಿ!
ಕರಾವಳಿ ಜಿಲ್ಲೆಗಳಲ್ಲಿ ಜುಲೈ 25 ರಂದು, 204.5 ಮಿ.ಮೀ ಗಿಂತಲೂ ಹೆಚ್ಚು ಅತೀ ಭಾರೀ ಮಳೆಯಾಗುವ ಸಾಧ್ಯತೆ ಇರುವ ಕಾರಣ ರೆಡ್ ಅಲರ್ಟ್ ಘೋಷಿಸಲಾಗಿದೆ. ಇನ್ನು ಈ ಮೂರೂ ಜಿಲ್ಲೆಗಳಿಗೂ ಬುಧವಾರ ಹಾಗೂ ಗುರುವಾರವೂ ಭಾರೀ ಮಳೆ ಮುಂದುವರಿಯಲಿರುವ ಕಾರಣ ಆರೆಂಜ್ ಅಲರ್ಟ್ ನೀಡಲಾಗಿದೆ. ಜುಲೈ 28 ಹಾಗೂ 29 ರಂದು ಎಲ್ಲೋ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಒಳನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಮಂಗಳವಾರ ಆರೆಂಜ್ ಅಲರ್ಟ್ ನೀಡಲಾಗಿದೆ. ಅಲ್ಲದೆ ಹಾಸನ, ಕೊಡಗು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಿಗೆ ಜುಲೈ 26, 27, 28 ರಂದು ಎಲ್ಲೋ ಅಲರ್ಟ್ ನೀಡಲಾಗಿದೆ. ಜುಲೈ 25, 26, 27 ರ ವರೆಗೂ ಉತ್ತಮ ಮಳೆಯಾಗಲಿದ್ದು, ನಂತರ ಮಳೆ ಪ್ರಮಾಣ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಲಾಗಿದೆ.