ಜ್ಞಾನವಾಪಿಯಲ್ಲಿ ವೈಜ್ಞಾನಿಕ ಸಮೀಕ್ಷೆ ಪ್ರಾರಂಭ – ಆಗಸ್ಟ್ 4ರಂದು ನ್ಯಾಯಾಲಯಕ್ಕೆ ASI ವರದಿ ಸಲ್ಲಿಕೆ!

ಜ್ಞಾನವಾಪಿಯಲ್ಲಿ ವೈಜ್ಞಾನಿಕ ಸಮೀಕ್ಷೆ ಪ್ರಾರಂಭ – ಆಗಸ್ಟ್ 4ರಂದು ನ್ಯಾಯಾಲಯಕ್ಕೆ ASI ವರದಿ ಸಲ್ಲಿಕೆ!

ಲಕ್ನೋ: ಭಾರಿ ವಿವಾದಕ್ಕೆ ಕಾರಣವಾಗಿದ್ದ ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಜ್ಞಾನವಾಪಿ ಮಸೀದಿ ವೈಜ್ಞಾನಿಕ ಸಮೀಕ್ಷೆ ಸೋಮವಾರ ಆರಂಭಗೊಂಡಿದೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ (ASI) ತಂಡ ಮಸೀದಿಯ ವೈಜ್ಞಾನಿಕ ಸಮೀಕ್ಷೆ ಆರಂಭಿಸಿದೆ.

ಇಡೀ ಜ್ಞಾನವಾಪಿ ಕ್ಯಾಂಪಸ್‌ನಲ್ಲಿ ಎಎಸ್‌ಐ ಸಮೀಕ್ಷೆಯನ್ನು ನಡೆಸುವಂತೆ ಹಿಂದೂ ಸಂಘ ಸಂಸ್ಥೆಗಳು ಮನವಿ ಮಾಡಿದ್ದವು. ಈ ಹಿನ್ನೆಲೆ ವಾರಣಾಸಿ ಜಿಲ್ಲಾ ನ್ಯಾಯಾಲಯ ವೈಜ್ಞಾನಿಕ ಸಮೀಕ್ಷೆ ನಡೆಸಲು ಅನುಮತಿ ನೀಡಿತ್ತು. ಆದರೆ ಮುಸ್ಲಿಂ ಕಡೆಯವರು ಮತ್ತು ಮಸೀದಿ ಸಮಿತಿಯು ನ್ಯಾಯಾಲಯದಲ್ಲಿ ಹಿಂದೂ ಪಕ್ಷದ ವಾದವನ್ನು ಬಲವಾಗಿ ವಿರೋಧಿಸಿದೆ. ಮಸೀದಿ ಪರಿಶೀಲನೆಗೆ ಅವಕಾಶ ನೀಡಿರುವ ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ವಿರುದ್ಧ ಮಸೀದಿ ಆಡಳಿತ ಸಮಿತಿ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿರುವ ಬೆನ್ನಲ್ಲೇ ಈ ಸರ್ವೆ ಆರಂಭಗೊಂಡಿದೆ.

ಇದನ್ನೂ ಓದಿ: ಜ್ಞಾನವಾಪಿ ಆವರಣದಲ್ಲಿ ವೈಜ್ಞಾನಿಕ ಸಮೀಕ್ಷೆಗೆ ವಾರಣಾಸಿ ಕೋರ್ಟ್‌ ಅನುಮತಿ

ಸೋಮವಾರ ಬೆಳಗ್ಗೆ 7 ಗಂಟೆಗೆ ಪ್ರಾರಂಭವಾದ ಸಮೀಕ್ಷೆ ಸೀಲ್ ಮಾಡಿದ ಶಿವಲಿಂಗದ ಆಕೃತಿ ಇರುವ ಪ್ರದೇಶವನ್ನು ಹೊರತುಪಡಿಸಿ ಬೇರೆ ಎಲ್ಲಾ ಪ್ರದೇಶಗಳಲ್ಲೂ ಸಮೀಕ್ಷೆ ನಡೆಸಲಿದೆ. ಮಸೀದಿಯಲ್ಲಿ ಶಿವಲಿಂಗದಂತೆ ಕಾಣುವ ರಚನೆ 2022 ರಲ್ಲಿ ಸಮೀಕ್ಷೆಯ ಸಮಯದಲ್ಲಿ ಕಂಡುಬಂದಿತ್ತು. ಈಗ ನಡೆಯುತ್ತಿರುವ ಸಮೀಕ್ಷೆಯ ವರದಿಯನ್ನು ಆ.4ರ ಒಳಗಾಗಿ ಜಿಲ್ಲಾ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.

ವಾರಣಾಸಿ ಜಿಲ್ಲಾ ನ್ಯಾಯಾಲಯದ ಆದೇಶದ ಮೇರೆಗೆ ಈ ತಪಾಸಣೆ ನಡೆಸಲಾಗುತ್ತಿದೆ. ಪುರಾತನ ಹಿಂದೂ ದೇವಾಲಯವನ್ನು ನೆಲಸಮಗೊಳಿಸಿ ನಂತರ ಜ್ಞಾನವಾಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದರು. ಈ ಬಗ್ಗೆ ಸಂಪೂರ್ಣ ಸತ್ಯವನ್ನು ಹೊರತರಲು ವೈಜ್ಞಾನಿಕ ಅಧ್ಯಯನದ ಅಗತ್ಯವಿದೆ ಎಂದಿದ್ದರು. ಆದರೆ ಜ್ಞಾನವಾಪಿ ಮಸೀದಿಯ ಸಿಬ್ಬಂದಿ ಶಿವಲಿಂಗದ ರಚನೆಯು ವಝುಖಾನಾದಲ್ಲಿ ಕಾರಂಜಿಯ ಒಂದು ಭಾಗವಾಗಿದೆ ಎಂದು ಹೇಳಿದ್ದರು. ವಿಚಾರಣೆಯ ಭಾಗವಾಗಿ ವೈಜ್ಞಾನಿಕ ತನಿಖೆ ಅಗತ್ಯ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ಅರ್ಜಿದಾರರ ಪರವಾಗಿಯೂ ಪ್ರತಿನಿಧಿಸುವ ಸುಭಾಷ್ ನಂದನ್ ಚತುರ್ವೇದಿ, ನ್ಯಾಯಾಲಯದ ನಿರ್ಧಾರವು ಪ್ರಕರಣದಲ್ಲಿ ಮಹತ್ವದ ತಿರುವು ಎಂದು ಹೇಳಿದ್ದಾರೆ.

suddiyaana