ಪತ್ನಿಯ ಸೆಂಟ್ ಪರಿಮಳಕ್ಕೆ ಕೆರಳಿದ ಗಂಡ – ಎದೆಗೆ ಗುರಿಯಿಟ್ಟು ಹಾರಿಸಿಯೇ ಬಿಟ್ಟ ಗುಂಡು..!
ಕೆಲವರಿಗೆ ಸೆಂಟ್ ಪರಿಮಳ ಬಂದರೆ ಅದೇನೋ ಖುಷಿ. ಇನ್ನು ಕೆಲವರಿಗೆ ಪರ್ಫ್ಯೂಮ್ ಬೇಕೇ ಬೇಕು. ಆದರೆ, ಇಲ್ಲೊಬ್ಬ ಗಂಡ ಹೆಂಡತಿ ಸುಗಂಧದ್ರವ್ಯ ಹಾಕಿದ್ದಕ್ಕೆ ಅವಳ ಎದೆಗೆ ಗುಂಡು ಹಾರಿಸಿದ್ದಾನೆ. ದುಷ್ಟ ಪತಿಯ ಅಟ್ಟಹಾಸಕ್ಕೆ ಪಾಪದ ಪತ್ನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಇದನ್ನೂ ಓದಿ: ಬಾಯಿಗೆ ಬಾಯಿಟ್ಟು ಗಂಡನಿಂದ ಮುತ್ತು – ಪತಿ ಚುಂಬಿಸುವಾಗ ನಾಲಗೆಯನ್ನೇ ಕಚಕ್ ಮಾಡಿದ ಪತ್ನಿ..!
ಮಧ್ಯಪ್ರದೇಶದ ಗ್ವಾಲಿಯರ್ನ ಬಿಜೋಯಿಲಿ ಠಾಣಾ ವ್ಯಾಪ್ತಿಯ ಗಣೇಶಪುರ ನಿವಾಸಿ ನೀಲಂ ಜಾತವ್ ಎಂಬಾಕೆ 8 ವರ್ಷಗಳ ಹಿಂದೆ ಮಹೇಂದ್ರ ಜಾತವ್ ಎಂಬಾತನನ್ನು ವಿವಾಹವಾಗಿದ್ದಳು. ಮಹೇಂದ್ರ ಜಾತವ್ ಕ್ರಿಮಿನಲ್ ಹಿನ್ನಲೆಯುಳ್ಳ ವ್ಯಕ್ತಿಯಾಗಿದ್ದು, ಕಳ್ಳತನ ಪ್ರಕರಣದಲ್ಲಿ ಜೈಲುಪಾಲಾಗಿದ್ದ. ಗಂಡ ಜೈಲು ಸೇರಿದ ಬಳಿಕ ನೀಲಂ ತನ್ನ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದಳು. ಮಹೇಂದ್ರ ಜಾತವ್ ನಾಲ್ಕು ವರ್ಷಗಳ ಜೈಲುವಾಸ ಮುಗಿಸಿ ಒಂದು ವರ್ಷದ ಹಿಂದಷ್ಟೇ ಜೈಲಿನಿಂದ ಹೊರಬಂದು ತನ್ನ ಹೆಂಡತಿಯೊಂದಿಗೆ ಆಕೆಯ ತಂದೆಯ ಮನೆಯಲ್ಲಿ ವಾಸಿಸುತ್ತಿದ್ದ. ಶನಿವಾರ ನೀಲಂ ಮನೆಯಿಂದ ಹೊರಗಡೆ ಹೋಗುವ ಸಂದರ್ಭ ಸುಗಂಧ ದ್ರವ್ಯವನ್ನು ಹಾಕಿದ್ದಳು. ಇದರ ಬಗ್ಗೆ ಪತಿ ಮಹೇಂದ್ರ ಆಕೆಯನ್ನು ಪ್ರಶ್ನಿಸಿದ್ದಾನೆ. ಇದರಿಂದಾಗಿ ದಂಪತಿ ನಡುವೆ ವಾಗ್ವಾದ ಶುರುವಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಕೋಪದ ಭರದಲ್ಲಿ ಪತಿ ಗನ್ ತೆಗೆದು ಪತ್ನಿಯ ಎದೆಗೆ ಗುಂಡು ಹಾರಿಸಿದ್ದಾನೆ. ನಂತರ ಅಲ್ಲಿಂದ ಪರಾರಿಯಾಗಿದ್ದಾನೆ. ಎದೆಗೆ ಗುಂಡು ತಗುಲಿದ ಬಳಿಕ ಆಕೆ ಅಲ್ಲಿಯೇ ಕುಸಿದು ಬಿದ್ದಿದ್ದಾಳೆ. ಘಟನೆ ನಡೆದ ತಕ್ಷಣ ನೀಲಂ ಅವರ ಸಹೋದರ ದಿನೇಶ್ ಜಾತವ್ ತನ್ನ ಸಂಬಂಧಿಕರಿಗೆ ಕರೆ ಮಾಡಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ನೀಲಂ ಕುಟುಂಬಸ್ಥರು ದೂರು ನೀಡಿದ್ದು, ಮಹೇಂದ್ರನ ವಿರುದ್ಧ ಕೊಲೆ ಯತ್ನ ಪ್ರಕರಣವನ್ನು ದಾಖಲಿಸಿಕೊಂಡ ಪೊಲೀಸರು ಆತನ ಪತ್ತೆಗಾಗಿ ಬಲೆಬೀಸಿದ್ದಾರೆ