ಬಿಸಿಲನಾಡಿನಲ್ಲಿ ಮುಂದುವರಿದ ವರುಣಾರ್ಭಟ – ತಗ್ಗು ಪ್ರದೇಶಗಳು ಜಲಾವೃತ, ಹಲವು ಗ್ರಾಮಗಳ ಸಂಪರ್ಕ ಕಡಿತ
ಬೆಂಗಳೂರು: ಕಳೆದ ನಾಲ್ಕು ದಿನಗಳಿಂದ ಬಿಸಿಲನಾಡಿನಲ್ಲಿ ಭಾರಿ ಮಳೆಯಾಗುತ್ತಿದೆ. ಯಾದಗಿರಿ, ಕಲಬುರಗಿ, ರಾಯಚೂರು, ಬೀದರ್ ಜಿಲ್ಲೆಗಳಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬರಿಯುತ್ತಿದ್ದಾನೆ. ನಾಲ್ಕು ದಿನಗಳಲ್ಲಿ ಮಳೆರಾಯ ಹತ್ತಾರು ಅವಾಂತರಗಳನ್ನು ಸೃಷ್ಟಿಸಿ ಹೋಗ್ತಿದ್ದಾನೆ. ಗಿರಿಗಳ ನಗರಿ ಯಾದಗಿರಿಯಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ಹೊಕ್ಕಿದೆ. ಇಂದು ಕೂಡ ಭಾರಿ ಮಳೆಯಾಗುವ ಸಾಧ್ಯತೆ ಇದೆ. ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಇದನ್ನೂ ಓದಿ: ಆಕಾಶದಲ್ಲಿ ಕಾಣಿಸಲಿದೆ ಅಪರೂಪದ ಖಗೋಳ ವಿಸ್ಮಯ – ಆಗಸ್ಟ್ ನಲ್ಲಿ ಗೋಚರಿಸಲಿದೆ ಬ್ಲೂ ಮೂನ್, ಸೂಪರ್ ಮೂನ್
ಇನ್ನು ಬೆಳಗಾವಿಯಲ್ಲೂ ವರುಣಾರ್ಭಟ ಜೋರಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ 16 ಕೆಳಹಂತದ ಸೇತುವೆಗಳು ಮುಳುಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ. ಸೇತುವೆಗಳು ಮುಳುಗಿರೋ ಕಾರಣ ಗ್ರಾಮಗಳ ಮಧ್ಯೆಯೇ ಸಂಚಾರಕ್ಕೆ ಅಡೆತಡೆ ಉಂಟಾಗಿದೆ.
ಕಲಬುರಗಿಯಲ್ಲೂ ಮಳೆರಾಯನ ಅಬ್ಬರ ಮುಂದುವರಿದಿದೆ. ಮುಲ್ಲಾಮಾರಿ ಡ್ಯಾಂ ಭರ್ತಿಯಾಗಿದೆ. ಡ್ಯಾಂ ಕೆಳಭಾಗದ ಚಿಮ್ಮನಚೂಡ, ತಾಜಲಾಪೂರ, ಕನಕಪೂರ, ದರ್ಗಾಪಲ್ಲಿ ಸೇತುವೆಗಳು ಜಲಾವೃತಗೊಂಡಿದೆ. ಹತ್ತಾರು ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಮಳಖೇಡದಲ್ಲಿ ಜಯತೀರ್ಥರ ಮೂಲ ಬೃಂದಾವನಕ್ಕೂ ಮಳೆ ನೀರು ಆವರಿಸಿದೆ. ರಸ್ತೆ ಮೇಲೆ ನದಿಯಂತೆ ನೀರು ಹರೀತಿದೆ. ಹಳ್ಳ-ಕೊಳ್ಳ ಉಕ್ಕಿ ಹರೀತಿದೆ. ಚಿತ್ತಾಪುರದಲ್ಲಿ ಹಲವು ಮನೆಗಳ ಗೋಡೆ ಕುಸಿದಿದೆ.
ಬೀದರ್ ತಾಲೂಕಿನ ಸಿಂದೋಲ್ ಸೇತುವೆ ಮುಳುಗಡೆಯಾಗಿದೆ. ಭಾಲ್ಕಿ ತಾಲೂಕಿನ ಖಾನಾಪುರ ಬಳಿಯ ಗಾಯಮುಖ ಗುಪ್ತಲಿಂಗೇಶ್ವರ ದೇವಸ್ಥಾನದಲ್ಲಿ ಜಲಪಾತ ಸೃಷ್ಟಿಯಾಗಿದೆ.