ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಕಡ್ಡಾಯ!

ಮೈಸೂರು ದಸರಾದಲ್ಲಿ ಭಾಗವಹಿಸುವ ಆನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ಕಡ್ಡಾಯ!

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಇನ್ನೆರಡು ತಿಂಗಳು ಮಾತ್ರ ಬಾಕಿ ಇದೆ. ನಾಡಹಬ್ಬಗೆ ಸಿದ್ಧತೆಗಳು ಆರಂಭಗೊಂಡಿವೆ. ಅರಣ್ಯ ಇಲಾಖೆ ಜಂಬೂ ಸವಾರಿಯಲ್ಲಿ ಭಾಗಿಯಾಗುವ ಆನೆಗಳ ಆಯ್ಕೆಯ ಪ್ರಕ್ರಿಯೆಯನ್ನು ಆರಂಭಿಸಿದೆ. ಇದೀಗ ಇದೆಲ್ಲದರ ನಡುವೆ ಮೈಸೂರು ದಸರಾ ಮಹೋತ್ಸವಕ್ಕೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ.

ಕಳೆದ ವರ್ಷ ಮೈಸೂರು ದಸರಾವೇಳೆ ಗರ್ಭಿಣಿ ಆನೆಯನ್ನು ತಾಲೀಮಿಗೆ ಬಳಸಿಕೊಂಡಿರೋದಕ್ಕೆ ಪ್ರಾಣಿಪ್ರಿಯರ ಆಕ್ರೋಶಕ್ಕೆ ಅರಣ್ಯ ಇಲಾಖೆ ತುತ್ತಾಗಿತ್ತು. ದಸರಾ ಸಮಯದಲ್ಲಿಯೇ ಲಕ್ಷ್ಮಿ ಆನೆ ಮರಿಗೆ ಜನ್ಮ ಕೊಟ್ಟಿತ್ತು. ಈ ಘಟನೆ ಅರಣ್ಯ ಇಲಾಖೆಯನ್ನು ಮುಜುಗಕ್ಕೀಡು ಮಾಡಿತ್ತು. ಹೀಗಾಗಿ ಅರಣ್ಯ ಇಲಾಖೆ ಈ ಬಾರಿ ದಸರಾ ಗಜಪಡೆ ಆಯ್ಕೆಯಲ್ಲಿ ಭಾರಿ ಮುನ್ನೆಚ್ಚರಿಕೆ ವಹಿಸಿದೆ. ದಸರಾ ಮಹೋತ್ಸವಕ್ಕೆ ಬರುವ ಹೆಣ್ಣಾನೆಗಳಿಗೆ ಪ್ರೆಗ್ನೆನ್ಸಿ ಟೆಸ್ಟ್ ನಡೆಸಲು ನಿರ್ಧರಿಸಲಾಗಿದೆ.

ಇದನ್ನೂ ಓದಿ: ಅಂಗಡಿಗೆ ಹೋಗಿ ಬರಿಗೈಯಲ್ಲಿ ವಾಪಸ್ ಬಂದ್ರೆ ಹುಷಾರ್..!‌ – ನಿಮಗೂ ಬೀಳುತ್ತೆ 500 ರೂಪಾಯಿ ದಂಡ!

ಈ ಬಾರಿ ಆನೆ ಕ್ಯಾಂಪ್‌ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ನಡೆಸಲಾಗುತ್ತದೆ. ಟೆಸ್ಟ್‌ ನ ವರದಿ ಬಂದ ಬಳಿಕವೇ ಹೆಣ್ಣಾನೆಗಳು ಮೈಸೂರಿಗೆ ಆಗಮಿಸಲಿವೆ. ಬಳಿಕ ದಸರಾದಲ್ಲಿ ಪಾಲ್ಗೊಳ್ಳಲು ಅವಕಾಶ ನೀಡಲಾಗುವುದು ಎಂಬ ನಿರ್ಧಾರಕ್ಕೆ ಬರಲಾಗಿದೆ ಎಂದು ಅರಣ್ಯ ಸಂರಕ್ಷಣಾಧಿಕಾರಿ ಡಾ. ಮಾಲತಿ ಪ್ರಿಯಾ ಮಾಹಿತಿ ನೀಡಿದ್ದಾರೆ.

ಪ್ರಸಕ್ತ ಸಾಲಿನ ದಸರಾ ಮಹೋತ್ಸವಕ್ಕೆ ಒಟ್ಟು 14 ಆನೆಗಳನ್ನ ಕರೆ ತರಲು ಚಿಂತನೆ ನಡೆಸಲಾಗಿದ್ದು, ಜುಲೈ ಅಂತ್ಯಕ್ಕೆ ಆನೆಗಳ ಪಟ್ಟಿ ಸಿದ್ಧವಾಗಲಿದೆ. ಈ ಬಾರಿ ದಸರಾ ಮಹೋತ್ಸವದಲ್ಲಿ ಅರ್ಜುನ, ಗೋಪಾಲಸ್ವಾಮಿ ಆನೆಗಳು ಭಾಗಿಯಾಗುವುದಿಲ್ಲ. ಇತ್ತೀಚೆಗೆ ಕಾಡಾನೆ ದಾಳಿಯಿಂದ ಗೋಪಾಲಸ್ವಾಮಿ ಮೃತಪಟ್ಟಿದ್ದು, ವಯಸ್ಸಾದ ಕಾರಣ ದಸರಾ ಮಹೋತ್ಸವದಿಂದ ಅರ್ಜುನನಿಗೆ ಕೊಕ್ ನೀಡಲಾಗಿದೆ. ಇನ್ನು ಕ್ಯಾಪ್ಟನ್ ಅಭಿಮನ್ಯು ನೇತೃತ್ವದಲ್ಲಿ ದಸರಾ ಜಂಬೂಸವಾರಿ ಮೆರವಣಿಗೆ ಸಾಗಲಿದೆ.

ಈಗಾಗಲೇ ಮತ್ತಿಗೋಡು ಶಿಬಿರಕ್ಕೆ ಭೇಟಿ ನೀಡಿ 9 ಆನೆಗಳನ್ನು ಅಧಿಕಾರಿಗಳು ಗುರುತು ಮಾಡಿದ್ದಾರೆ . ಆನೆಗಳ ಸಂಪೂರ್ಣ ಆರೋಗ್ಯ ತಪಾಸಣೆ ನಂತರ ಆಯ್ಕೆ ಪ್ರಕ್ರಿಯೆ ನಡೆಯುತ್ತೆ. ಒಟ್ಟು 2 ಹಂತದಲ್ಲಿ ಆನೆಗಳು ಮೈಸೂರಿಗೆ ಆಗಮಿಸುತ್ತವೆ ಎಂದು ಪ್ರಿಯಾ ಮಾಹಿತಿ ನೀಡಿದ್ದಾರೆ.

suddiyaana