‘ಉಪವಾಸ ಮಾಡಿದರೆ ಯೇಸುವನ್ನ ಭೇಟಿ ಮಾಡಬಹುದು’ – ನಕಲಿ ಪಾದ್ರಿ ಮಾತು ನಂಬಿ 403 ಜನ ಸಾವು, 610 ಜನ ನಾಪತ್ತೆ
ಅತಿಯಾದರೆ ಅಮೃತವೂ ವಿಷ ಅನ್ನೋ ಮಾತಿದೆ. ಈ ಮಾತು ಈಗ ಮತ್ತೊಮ್ಮೆ ನಿಜವಾಗಿದೆ. ಯಾಕಂದ್ರೆ ದೇವರ ಮೇಲೆ ನಂಬಿಕೆಗಿಂತ ಮೌಢ್ಯವನ್ನೇ ಹೆಚ್ಚಾಗಿ ನಂಬಿದ ಜನ ಸಾವಿನ ಮನೆ ಸೇರಿದ್ದಾರೆ. ಉಪವಾಸ ಮಾಡಿದರೆ ಯೇಸು ಕ್ರಿಸ್ತನನ್ನು (Jesus) ಭೇಟಿಯಾಗಬಹುದು ಎಂಬ ನಕಲಿ ಧಾರ್ಮಿಕ ಬೋಧಕನ ಮಾತನ್ನು ಕೇಳಿ ಉಪವಾಸ (Fasting) ಮಾಡಿ ಸುಮಾರು 403ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಈ ಪೈಕಿ 12 ಜನರ ಶವ ಕೀನ್ಯಾದ (Kenya) ಶಕಹೊಲ (Shakahola) ಅರಣ್ಯದಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ : ಸ್ಪೀಕರ್ ಮೇಲೆ ಹಾಳೆ ಹರಿದು ಎಸೆದ ವಿರೋಧ ಪಕ್ಷದ ನಾಯಕರು – ಅಧಿವೇಶನದಿಂದ ಬಿಜೆಪಿಯ 10 ಸದಸ್ಯರು ಅಮಾನತು
ಯೇಸುಕ್ರಿಸ್ತನನ್ನ ಭೇಟಿಯಾಗಬಹುದು ಎಂಬ ಧಾರ್ಮಿಕ ಬೋಧಕನ ಮಾತು ಕೇಳಿ ಜನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಮೃತಪಟ್ಟವರ ಪೈಕಿ ಹೆಚ್ಚಿನವರು ಗುಡ್ ನ್ಯೂಸ್ ಇಂಟರ್ನ್ಯಾಷನಲ್ ಚರ್ಚ್ನ ಸಂಸ್ಥಾಪಕ, ಬೋಧಕ ಪೌಲ್ ಮೆಕೆಂಜಿ ಅನುಯಾಯಿಗಳಾಗಿದ್ದರು. ಉಪವಾಸ ಮಾಡಿದರೆ ಯೇಸುಕ್ರಿಸ್ತನನ್ನು ಸೇರಬಹುದು ಎಂಬ ಆತನ ಮಾತನ್ನು ನಂಬಿದ ಅನುಯಾಯಿಗಳು ಉಪವಾಸ ಮಾಡಿದ್ದು, 403ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೇ 610ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಯೇಸು ಹೆಸರಲ್ಲಿ ಉಪವಾಸ ಮಾಡಲು ಸಲಹೆ ನೀಡಿದ ಆರೋಪಿ ಪೌಲ್ ಮೆಕೆಂಜಿ ಮತ್ತು ಇನ್ನಿತರ 36 ಶಂಕಿತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ನಾಪತ್ತೆಯಾದ 610ಕ್ಕೂ ಹೆಚ್ಚು ಜನರು ಅರಣ್ಯದ ಸುತ್ತಲಿನ ಗ್ರಾಮದವರಾಗಿದ್ದಾರೆ. ಇದುವರೆಗೆ ಹೊರತೆಗೆದ 403 ಮೃತದೇಹಗಳ ಪೈಕಿ 253 ದೇಹಗಳಲ್ಲಿ ಡಿಎನ್ಎ ಹೊಂದಾಣಿಕೆಯನ್ನು ನಡೆಸಲಾಗಿದೆ. ಬಂಧಿತರ ಆರೋಪಿ ಪಾದ್ರಿ 2017ರಲ್ಲಿ ಮಕ್ಕಳಿಗೆ ಶಾಲೆಗೆ ಹೋಗಬೇಡಿ, ಬೈಬಲ್ ಶಿಕ್ಷಣವನ್ನು ಮಾನ್ಯ ಮಾಡುವುದಿಲ್ಲ ಎಂದು ಪ್ರಚಾರ ಮಾಡಿದ್ದ. ಅಲ್ಲದೇ ಜನರಿಗೆ ಯೇಸುಕ್ರಿಸ್ತನ ಭೇಟಿ ಮಾಡಲು ಅವಕಾಶ ಕಲ್ಪಿಸುವುದಾಗಿ ಹೇಳಿ ಜನರನ್ನು ಅರಣ್ಯಕ್ಕೆ ಕರೆಸಿ ಅಲ್ಲಿ ಉಪವಾಸ ಮಾಡಿಸುತ್ತಿದ್ದ ಎನ್ನಲಾಗಿದೆ. ಸದ್ಯ ಮೃತಪಟ್ಟವರ ಶವಗಳನ್ನು ಅಧಿಕೃತವಾಗಿ ಪರೀಕ್ಷೆ ನಡೆಸಿದಾಗ ಹೆಚ್ಚಿನವರು, ಅಪೌಷ್ಟಿಕತೆ, ಉಸಿರುಗಟ್ಟುವಿಕೆ ಮುಂತಾದ ತೊಂದರೆಯಿಂದ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದರಲ್ಲಿ ಹೆಚ್ಚಿನವರು ಹಸಿವಿನಿಂದ ಸಾವನ್ನಪ್ಪಿದ್ದಾರೆ.