ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ನಿಧನ – ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯರಿಂದ ಅಂತಿಮ ನಮನ
ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಬೆಂಗಳೂರಿನಲ್ಲಿ ವಿಧಿವಶರಾಗಿದ್ದಾರೆ. ಮಂಗಳವಾರ ಮುಂಜಾನೆ ನಿಧನರಾದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಗೌರವಾರ್ಥ ಕೇರಳ ಸರ್ಕಾರ ಇಂದು ಸಾರ್ವಜನಿಕ ರಜೆ ಘೋಷಿಸಿದೆ. ಬೆಂಗಳೂರಿನಲ್ಲಿ ಬೆಳಗ್ಗೆ 10 ಗಂಟೆವರೆಗೆ ಸ್ನೇಹಿತನ ಮನೆಯಲ್ಲಿ ಉಮ್ಮನ್ ಚಾಂಡಿ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ 11 ಗಂಟೆಗೆ ತಿರುವನಂತಪುರಂಗೆ ವಿಶೇಷ ವಿಮಾನದಲ್ಲಿ ಪಾರ್ಥಿವ ಶರೀರವನ್ನು ರವಾನೆ ಮಾಡಲಾಗಿದೆ.
ಇದನ್ನೂ ಓದಿ: ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿ ವಿಧಿವಶ – ಕಾಂಗ್ರೆಸ್ ಹಿರಿಯ ನಾಯಕನಿಗೆ ಗಣ್ಯರ ಸಂತಾಪ
ಕೇರಳದ ಮಾಜಿ ಸಿಎಂ ಉಮ್ಮನ್ ಚಾಂಡಿ ಮೃತದೇಹವನ್ನು ಬೆಂಗಳೂರಿನಲ್ಲಿ ಅಂತಿಮ ದರ್ಶನಕ್ಕಿಡಲಾಗಿತ್ತು. ಕಾಂಗ್ರೆಸ್ನ ಮುಖಂಡರು ಅಂತಿಮ ದರ್ಶನ ಸಲ್ಲಿಸಿದರು. ಕಾಂಗ್ರೆಸ್ ಅಧಿನಾಯಕಿ ಸೋನಿಯಾಗಾಂಧಿ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ನ ಪ್ರಮುಖ ನಾಯಕರು ಕೇರಳದ ಮಾಜಿ ಮುಖ್ಯಮಂತ್ರಿ ಉಮ್ಮನ್ ಚಾಂಡಿಯವರ ಅಂತಿಮ ದರ್ಶನ ಪಡೆದರು. ಇದೇ ಸಂದರ್ಭದಲ್ಲಿ ಉಮ್ಮನ್ ಚಾಂಡಿಯವರ ಕುಟುಂಬಕ್ಕೆ ಸಾಂತ್ವನ ಹೇಳಿದರು. ನಂತರ ಸಿಎಂ ಸಿದ್ದರಾಮಯ್ಯ ಉಮ್ಮನ್ ಚಾಂಡಿಯವರ ಪಾರ್ಥಿವ ಶರೀರವನ್ನು ತಿರುವನಂತಪುರಂಗೆ ರವಾನೆ ಮಾಡಲು ವಿಶೇಷ ವಿಮಾನದ ವ್ಯವಸ್ಥೆ ಮಾಡಿದರು.
ಉಮ್ಮನ್ ಚಾಂಡಿ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಶೋಕ ವ್ಯಕ್ತಪಡಿಸಿದ್ದಾರೆ. ಸಾರ್ವಜನಿಕ ಜೀವನಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಟ್ಟಿದ್ದ ಹಾಗೂ ಸದಾ ಕೇರಳದ ಅಭಿವೃದ್ಧಿಗಾಗಿ ಚಿಂತನೆ ನಡೆಸುತ್ತಿದ್ದ ಒಬ್ಬ ಧುರೀಣರನ್ನು ನಾವಿಂದು ಕಳೆದುಕೊಂಡಿದ್ದೇವೆ. ನಾನು ಹಾಗೂ ಅವರು ನಮ್ಮನಮ್ಮ ರಾಜ್ಯಗಳಲ್ಲಿ ಮುಖ್ಯಮಂತ್ರಿಗಳಾಗಿದ್ದಾಗ, ನಾನು ಕೆಲವು ಸಮಾರಂಭಗಳಲ್ಲಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದೆ. ಆ ನೆನಪುಗಳು ಇನ್ನೂ ನನ್ನಲ್ಲಿ ಹಸಿರಾಗಿವೆ ಎಂದು ಅವರು ಹೇಳಿದ್ದಾರೆ.