ಮೋದಿ ಮಣಿಸಲು ಬೆಂಗಳೂರಿನಲ್ಲಿ ವಿಪಕ್ಷಗಳ ರಣಕಹಳೆ – ಲೋಕಸಭಾ ಸಮರಕ್ಕೆ ಒಗ್ಗಟ್ಟಿನ ತಂತ್ರಗಾರಿಕೆ

ಮೋದಿ ಮಣಿಸಲು ಬೆಂಗಳೂರಿನಲ್ಲಿ ವಿಪಕ್ಷಗಳ ರಣಕಹಳೆ – ಲೋಕಸಭಾ ಸಮರಕ್ಕೆ ಒಗ್ಗಟ್ಟಿನ ತಂತ್ರಗಾರಿಕೆ

2024ರ ಲೋಕಸಭಾ ಚುನಾವಣೆಗೆ ರಾಷ್ಟ್ರ ರಾಜಕೀಯ ರಂಗೇರುತ್ತಿದ್ದು ವಿಪಕ್ಷಗಳೆಲ್ಲಾ ಮತ್ತೊಮ್ಮೆ ಒಗ್ಗಟ್ಟಿನ ಮಂತ್ರ ಜಪಿಸಿವೆ. ಮೋದಿ ನೇತೃತ್ವದ ಬಿಜೆಪಿ ಸರ್ಕಾರವನ್ನ ಮಣಿಸಿ ಮಹಾಘಟಬಂಧನ್ ಮೂಲಕ ದೇಶದ ಚುಕ್ಕಾಣಿ ಹಿಡಿಯಲು ರಣಕಹಳೆ ಮೊಳಗಿಸಿವೆ. ಮೈತ್ರಿಕೂಟದ ಸಭೆ ಇದೇ ಜುಲೈ 17 ಹಾಗೂ 18 ರಂದು ಬೆಂಗಳೂರಿನ (Bengaluru) ಖಾಸಗಿ ಹೋಟೆಲ್ ನಲ್ಲಿ ನಡೆಯಲಿದೆ. ಕೇಂದ್ರ ಬಿಜೆಪಿ ಸರ್ಕಾರದ ಎನ್‍ಡಿಎ ಮೈತ್ರಿ ಕೂಟದ ವಿರುದ್ಧ ಒಟ್ಟಾಗಿರುವ ಯುಪಿಎ ಮೈತ್ರಿಕೂಟದ ಮಹತ್ವದ ಸಭೆ ಇದಾಗಿದ್ದು, ಎರಡನೇ ಸಭೆಗೆ ಬೆಂಗಳೂರು ಸಾಕ್ಷಿಯಾಗಲಿದೆ.

ಇದನ್ನೂ ಓದಿ : ಶಿಂಧೆ ಬಣದ ಶಾಸಕರ ಅನರ್ಹತೆ ವಿಚಾರ – ಮಹಾರಾಷ್ಟ್ರ ವಿಧಾನಸಭಾ ಸ್ಪೀಕರ್‌ಗೆ ಸುಪ್ರೀಂ ನೋಟಿಸ್

ಲೋಕಸಮರಕ್ಕೆ ಈಗಾಗ್ಲೇ ಶಂಖನಾದ ಮೊಳಗಿಸಿರುವ ವಿಪಕ್ಷಗಳು ಮೋದಿ ಸರ್ಕಾರವನ್ನು ಮಣಿಸುವ ಉದ್ದೇಶದಿಂದ ವಿಪಕ್ಷಗಳು ಸೋಮವಾರ ಮತ್ತು ಮಂಗಳವಾರ ಬೆಂಗಳೂರಿನಲ್ಲಿ ಮಹಾಮೈತ್ರಿ ಸಭೆಯನ್ನು ನಡೆಸಲಿವೆ. ಕಾಂಗ್ರೆಸ್ (Congress) ನೇತೃತ್ವದ ಈ ಸಭೆಗೆ 24 ರಾಜಕೀಯ ಪಕ್ಷಗಳಿಗೆ ಆಹ್ವಾನ ಹೋಗಿದೆ. ಎಎಪಿಯನ್ನು ಈ ಕೂಟದ ಭಾಗವಾಗಿ ಮಾಡಿಕೊಳ್ಳಬೇಕು ಎನ್ನುವ ಉದ್ದೇಶದಿಂದ, ದೆಹಲಿ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಸುಗ್ರಿವಾಜ್ಞೆಯನ್ನು ವಿರೋಧಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಹೀಗಾಗಿ ಈ ಸಭೆಯಲ್ಲಿ ಎಎಪಿಯ ಕೇಜ್ರಿವಾಲ್ ಪಾಲ್ಗೊಳ್ಳುವುದು ಬಹುತೇಕ ನಿಶ್ಚಿತವಾಗಿದೆ.

ಭಾನುವಾರದಿಂದಲೇ ಹಲವು ನಾಯಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ನಿತೀಶ್ ಕುಮಾರ್, ಎಂಕೆ ಸ್ಟಾಲಿನ್, ಲಾಲೂ ಪ್ರಸಾದ್ ಯಾದವ್, ಮಮತಾ ಬ್ಯಾನರ್ಜಿ, ಹೇಮಂತ್ ಸೋರೆನ್, ಅಖಿಲೇಶ್ ಯಾದವ್, ಉದ್ಧವ್ ಠಾಕ್ರೆ ಸೇರಿ ಪ್ರಮುಖರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಮೊದಲ ದಿನವಾದ ಸೋಮವಾರ ಸಂಜೆ ವಿಪಕ್ಷಗಳ ಒಕ್ಕೂಟದ ನಾಯಕರಿಗೆ ಸಿಎಂ ಸಿದ್ದರಾಮಯ್ಯ ಔತಣಕೂಟ ಏರ್ಪಡಿಸಿದ್ದಾರೆ. ಆದರೆ ಅನಾರೋಗ್ಯದ ಕಾರಣ ಈ ಔತಣಕೂಟದಲ್ಲಿ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಪಾಲ್ಗೊಳ್ಳುತ್ತಿಲ್ಲ. ಈ ಮಧ್ಯೆ ಬಿಜೆಪಿ ಜೊತೆ ಮೈತ್ರಿ ಮಾಡಲು ಮುಂದಾಗಿರುವ ಜೆಡಿಎಸ್‍ಗೆ ಕಾಂಗ್ರೆಸ್‍ನಿಂದ ಯಾವುದೇ ಆಹ್ವಾನ ಹೋಗಿಲ್ಲ. ಪಾಟ್ನಾ ಸಭೆಯಿಂದಲೂ ಜೆಡಿಎಸ್, ಬಿಜೆಡಿ, ಬಿಎಸ್‍ಪಿ ಪಕ್ಷಗಳನ್ನು ದೂರ ಇಡಲಾಗಿತ್ತು. ಎರಡು ದಿನಗಳ ಕಾರ್ಯಕ್ರಮಕ್ಕೆ ಬೆಂಗಳೂರಿನ ಖಾಸಗಿ ಹೋಟೆಲ್‍ನಲ್ಲಿ ಭಾರೀ ಸಿದ್ಧತೆಗಳು ನಡೆದಿವೆ. ಪಾಟ್ನಾ ಸಭೆಗೆ 16 ಪಕ್ಷಗಳಿಗೆ ಆಹ್ವಾನ ನೀಡಲಾಗಿದ್ದು, 15 ಪಕ್ಷಗಳು ಭಾಗ ವಹಿಸಿದ್ದವು. ಈ ಬಾರಿ 24 ಪಕ್ಷಗಳಿಗೆ ಆಹ್ವಾನ ನೀಡಲಾಗಿದ್ದು ಎಲ್ಲಾ ಪಕ್ಷಗಳು ಭಾಗವಹಿಸ್ತಾವಾ ಎಂಬ ಕುತೂಹಲವಂತೂ ಇದೆ.

suddiyaana