ಲೋಕಸಭಾ ಚುನಾವಣೆಗೆ ಟಿಕೆಟ್ ಕೊಟ್ಟರೆ ಬೆಳಗಾವಿಯಿಂದ ಸ್ಪರ್ಧೆಗೆ ಸಿದ್ಧ – 2 ತಿಂಗಳಲ್ಲೇ ಅಭ್ಯರ್ಥಿ ಹೆಸರು ಘೋಷಣೆ ಎಂದ ಸತೀಶ್ ಜಾರಕಿಹೊಳಿ

ಲೋಕಸಭಾ ಚುನಾವಣೆಗೆ ಟಿಕೆಟ್ ಕೊಟ್ಟರೆ ಬೆಳಗಾವಿಯಿಂದ ಸ್ಪರ್ಧೆಗೆ ಸಿದ್ಧ – 2 ತಿಂಗಳಲ್ಲೇ ಅಭ್ಯರ್ಥಿ ಹೆಸರು ಘೋಷಣೆ ಎಂದ ಸತೀಶ್ ಜಾರಕಿಹೊಳಿ

2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇದ್ದು, ಈಗಲೇ ಟಿಕೆಟ್ ಆಕಾಂಕ್ಷಿಗಳು ಬಹಿರಂಗವಾಗಿ ಹೇಳಿಕೆ ನೀಡುತ್ತಿದ್ದಾರೆ. ಈ ನಡುವೆ ವಿಧಾನಸಭಾ ಚುನಾವಣೆಯಲ್ಲಿ ಅಮೋಘ ಗೆಲುವು ಸಾಧಿಸಿರುವ ಕಾಂಗ್ರೆಸ್ ಕೂಡ ಭಾರೀ ತಂತ್ರ ಹೆಣೆಯುತ್ತಿದೆ. ರಾಜಕೀಯ ಬೆಳವಣಿಗೆಯೊಂದರಲ್ಲಿ 2019ರಲ್ಲಿ ನಡೆದಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿ ಅಲ್ಪ ಮತಗಳಿಂದ ಸೋತರೂ ಬಿಜೆಪಿ ನಾಯಕರಿಗೆ ಶಾಕ್ ಕೊಟ್ಟಿದ್ದ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ಅಖಾಡಕ್ಕಿಳಿಯಲು ಸಜ್ಜಾಗಿದ್ದಾರೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟ ವಿ.ಸೋಮಣ್ಣ – ಬೆಂಗಳೂರು ದಕ್ಷಿಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ಎಂದು ಬಹಿರಂಗ ಹೇಳಿಕೆ

2024ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಸತೀಶ್ ಜಾರಕಿಹೊಳಿ ಮತ್ತೊಮ್ಮೆ ಬೆಳಗಾವಿಯಿಂದ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಪಕ್ಷ ಹೇಳಿದರೆ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ. ಲೋಕಸಭಾ ಚುನಾವಣೆ ಸಂಬಂಧ ಬೆಂಗಳೂರಿನಲ್ಲಿ ಸಭೆ ನಡೆದಿದೆ. ಬೆಳಗಾವಿ ಜಿಲ್ಲೆಯ ಶಾಸಕರ ಜೊತೆ ಸಭೆ ಮಾಡಿ ಚರ್ಚಿಸಿದ್ದೇನೆ. ಮುಂದಿನ 2 ತಿಂಗಳೊಳಗೆ ಕಾಂಗ್ರೆಸ್ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ ಎಂದು ಸತೀಶ್ ಜಾರಕಿಹೊಳಿ ಸ್ಪಷ್ಟ ಪಡಿಸಿದ್ದಾರೆ.

ಬೆಳಗಾವಿ, ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಹೆಸರು ಮುಂದಿನ 2 ತಿಂಗಳೊಳಗೆ ಘೋಷಣೆಯಾಗಲಿದೆ. ಎರಡೂ ಲೋಕಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ದೊಡ್ಡದಿದೆ. ಸ್ಥಳೀಯ ಶಾಸಕರು, ಮುಖಂಡರ ಜೊತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸದ್ಯಕ್ಕೆ ನಮ್ಮ ಕುಟುಂಬ ಎರಡನೇ ಸ್ಥಾನದಲ್ಲಿ ಇರಲಿದೆ. ಪಕ್ಷ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಹೇಳಿದರೆ ನಿಲ್ಲುತ್ತೇನೆ. ಅವಶ್ಯಕತೆ ಇದ್ದರೆ ನಮ್ಮ ಕುಟುಂಬದಿಂದಲೇ ಅಭ್ಯರ್ಥಿ ನಿಲ್ಲಿಸುತ್ತೇವೆ ಎಂದು ಪರೋಕ್ಷವಾಗಿ ತಮ್ಮ ಪುತ್ರನನ್ನು ಕಣಕ್ಕಿಳಿಸುವ ಸುಳಿವು ನೀಡಿದ್ದಾರೆ.

ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ 135 ಸ್ಥಾನಗಳಲ್ಲಿ ಗೆಲ್ಲುವುದರ ಮೂಲಕ ಅಧಿಕಾರಕ್ಕೇರಿರುವ ಕಾಂಗ್ರೆಸ್ ಇದೀಗ ಮುಂಬರುವ ಲೋಕಸಭಾ ಚುನಾವಣೆ ಮೇಲೆ ಕಣ್ಣಿಟ್ಟಿದೆ. ಕನಿಷ್ಠ 15 ಕ್ಷೇತ್ರಗಳಲ್ಲಿ ಗೆಲ್ಲುವ ಗುರಿ ಇಟ್ಟುಕೊಂಡಿದೆ. ಹೀಗಾಗಿ ಈಗಿನಿಂದಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಸಿದ್ಧತೆ ನಡೆಸಿದ್ದಾರೆ. ಅಲ್ಲದೇ ಚುನಾವಣೆಗೆ ತಯಾರಾಗುವಂತೆ ನಾಯುಕರಿಗೆ ಸೂಚನೆ ನೀಡಿದ್ದಾರೆ.​ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸಿದ್ದ ಸತೀಶ್ ಜಾರಕಿಹೊಳಿ ಅಲ್ಪಮತಗಳಿಂದ ಸೋಲು ಕಂಡಿದ್ದರು. ಬಿಜೆಪಿಯ ಮಂಗಳ ಅಂಗಡಿ ವಿರುದ್ಧ ಕಣಕ್ಕಿಳಿದಿದ್ದ ಸತೀಶ್​ ಜಾರಕಿಹೊಳಿ ಪ್ರಬಲ ಪೈಪೋಟಿ ನೀಡುವ ಮೂಲಕ ಬಿಜೆಪಿ ನಾಯಕರಿಗೆ ನಡುಕ ಹುಟ್ಟಿಸಿದ್ದರು. ಬಿಜೆಪಿ ಭದ್ರಕೋಟೆಯಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದಲ್ಲಿ ಸತೀಶ್ ಜಾರಕಿಹೊಳಿ ಸ್ಪರ್ಧೆಯಿಂದ ಕಾಂಗ್ರೆಸ್​ನ ಶಕ್ತಿ ಹೆಚ್ಚಿಸಿತ್ತು. ಹೀಗಾಗಿ ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಳಗಾವಿ ಜಿಲ್ಲೆಯಲ್ಲಿ ಭರ್ಜರಿ ಗೆಲುವ ಸಾಧಿಸುವಲ್ಲಿ ಸಹಾಯಕವಾಯ್ತು. ಇದೀಗ ಮತ್ತೆ ಬೆಳಗಾವಿ ಲೋಕಸಭೆ ಚುನಾವಣೆಗೆ ಕಾಂಗ್ರೆಸ್​ ಸಜ್ಜಾಗಿದ್ದು, ಮತ್ತೆ ಸತೀಶ್ ಜಾರಕಿಹೊಳಿಯನ್ನು ಅಖಾಡಕ್ಕಿಳಿಸುವ ಬಗ್ಗೆ ಚಿಂತನೆ ನಡೆಸಿದೆ. ಒಂದು ವೇಳೆ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದರೆ, ಯಮಕನಮರಡಿ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಟಿಕೆಟ್ ಸತೀಶ್ ಜಾರಕಿಹೊಳಿ ಪುತ್ರನಿಗೆ ನೀಡುವ ಬಗ್ಗೆಯೂ ಸಹ ಚರ್ಚೆಗಳು ನಡೆದಿವೆ.

suddiyaana