ಗ್ರಾಹಕರ ಜೇಬು ಸುಡಲಿದೆ ಹೋಟೆಲ್ ಬಿಲ್! – ಆಷಾಢ ಮುಗಿಯುತ್ತಿದ್ದಂತೆ ತಿಂಡಿ, ಊಟದ ದರ ಏರಿಕೆ?

ಗ್ರಾಹಕರ ಜೇಬು ಸುಡಲಿದೆ ಹೋಟೆಲ್ ಬಿಲ್! – ಆಷಾಢ ಮುಗಿಯುತ್ತಿದ್ದಂತೆ ತಿಂಡಿ, ಊಟದ ದರ ಏರಿಕೆ?

ಬೆಂಗಳೂರು: ಮನೆಯಲ್ಲಿ ಅಡುಗೆ ಮಾಡೋಣ ಅಂದ್ರೆ ಅಕ್ಕಿ, ಬೇಳೆ ಕಾಳು, ಕಾಫಿ ಪುಡಿ, ತರಕಾರಿ ಎಲ್ಲಾ ಕಾಸ್ಲಿ. ಈ ಮಧ್ಯೆ ವಿದ್ಯುತ್ ದರ ಕೂಡ ಹೆಚ್ಚಳವಾಗಿದೆ. ಅಡುಗೆ ಮಾಡುವುದೇ ಬೇಡ. ಹೇಗೋ ಹೋಟೆಲಿನಲ್ಲಿ ತಿನ್ನೋಣ ಎನ್ನುವವರಿಗೂ ಕೂಡ ಈಗ ಶಾಕ್ ಎದುರಾಗಿದೆ. ಕಾರಣ ಸದ್ಯದಲ್ಲೇ ಹೊಟೇಲ್ ದರ ಏರಿಕೆಯಾಗಲಿದೆ.

ರಾಜ್ಯದಲ್ಲಿ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಅಕ್ಕಿ, ಬೇಳೆ, ತರಕಾರಿ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಸದ್ಯದಲ್ಲೇ ನೀರು ಮತ್ತು ಹಾಲಿನ ಹೆಚ್ಚಳವಾಗುವ ಎಲ್ಲಾ ಸಾಧ್ಯತೆಗಳು ಕಂಡು ಬರುತ್ತಿದೆ. ಈ ಹಿನ್ನೆಲೆ ಹೋಟೆಲ್‌ ಮಾಲೀಕರು ಹೋಟೆಲ್‌ ತಿನಸುಗಳ ದರ ಏರಿಕೆ ಮಾಡಲು ಮುಂದಾಗಿದೆ. ಇದೀಗ ಹೋಟೆಲ್‌ ನಂಬಿಕೊಂಡು ಜೀವನ ಮಾಡುತ್ತಿರುವ ಜನರ ಜೇಬು ಮತ್ತಷ್ಟು ಭಾರವಾಗಲಿದೆ.

ಇದನ್ನೂ ಓದಿ: ಡಬಲ್‌ ಸೆಂಚುರಿ ಹೊಡೆದು ಮುನ್ನುಗ್ಗುತ್ತಿರುವ ಟೊಮ್ಯಾಟೊ ಬೆಲೆ – ಕೆಜಿಗೆ ರೂ. 90 ರಂತೆ ಮಾರಾಟ ಆರಂಭಿಸಿದ ಕೇಂದ್ರ!

ಅಗತ್ಯ ವಸ್ತುಗಳ ಬೆಲೆ ದಿನಕಳೆದಂತೆ ಗಗನಕ್ಕೇರುತ್ತಿರೋದು ಹೊಟೇಲ್ ಉದ್ಯಮವನ್ನ ಸಂಕಷ್ಟಕ್ಕೆ ದೂಡಿದೆ. ಇದರ ಜೊತೆ ವಿದ್ಯುತ್, ಹಾಲಿನ ದರ ಏರಿಕೆ ಬರೆ ಮಾಲೀಕರನ್ನ ಕಂಗೆಡಿಸಿದ್ದು, ಉದ್ಯಮ ನಡೆಸಬೇಕಾದ್ರೆ ಹೋಟೆಲ್ ಊಟ, ತಿಂಡಿ, ಕಾಫಿ, ಟೀ ಮೇಲಿನ ಬೆಲೆ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಇದೇ ಕಾರಣಕ್ಕೆ ಸದ್ಯ ಈ ಬಾರಿಯ ಆಷಾಢ ಮುಗಿದ ಬೆನ್ನಲ್ಲೆ ಸಿಲಿಕಾನ್ ಸಿಟಿ ಹೊಟೇಲ್ ದರ ಏರಿಕೆಯಾಗಲಿದೆ ಎಂದು ಹೋಟೆಲ್‌ ಮಾಲೀಕರು ಹೇಳಿದ್ದಾರೆ.

ಯಾವುದಕ್ಕೆ ಎಷ್ಟು ದರ?

ಮಸಾಲೆ ದೋಸೆಗೆ ಪ್ರಸ್ತುತ  50ರೂ. ಇದ್ದು, ಬೆಲೆ ಏರಿಕೆಯಾದರೆ 55 -60, 70ರೂ ಹೆಚ್ಚಳವಾಗಲಿದೆ. ಇನ್ನು ಉದ್ದಿನವಡೆ 10. ರೂ. ಇತ್ತು ಇದನ್ನು 12- 15 ರೂ. ಹೆಚ್ಚಳ ಮಾಡುವ ಸಾಧ್ಯತೆ ಇದೆ. ಪೂರಿ ಬೆಲೆ ಪ್ರಸ್ತುತ 40 ರೂ. ಇದೆ. ದರ ಏರಿಕೆಯಾದರೆ 45-50 ರೂಪಾಯಿಯಾಗಲಿದೆ. ಪೂಳಿಯೊಗರೆ 35 ರೂ. ಇದೆ. ಇದರ ಬೆಲೆ  40-45 ರೂ. ಗೆ ಹೆಚ್ಚಳ ಮಾಡಲಾಗುತ್ತಿದೆ. ಇನ್ನು ಇಡ್ಲಿ ವಡೆ  ಸದ್ಯ  30 ರೂ. ಇದೆ ಇದನ್ನು 50 ರೂ. ಏರಿಕೆಯಾಗಲಿದೆ. ಬಿಸಿ ಬೇಳೆಬಾತ್ 30 ರೂ. ಇದೆ. ಇದನ್ನು  35- 40ರೂ. ಏರಿಕೆ ಮಾಡುವ ಸಾಧ್ಯತೆ ಇದೆ. ರೈಸ್ ಬಾತ್ ಈಗ  30 ರೂ.  ಇದೆ. 35-40 ರೂ. ಗೆ ಹೆಚ್ಚಳವಾಗಲಿದೆ.  ಟೀ, ಕಾಫಿ 10. ರೂ. ಇದೆ.  12- 15ರೂ. ಹೆಚ್ಚಳ ಮಾಡಲಾಗುತ್ತದೆ. ಅನ್ನ ಸಾಂಬಾರ್  30 ರೂ. ಇದೆ. 35-40 ರೂ. ಗೆ ಹೆಚ್ಚಳವಾಗಲಿದೆ. ಊಟ 50 ರೂ. ಇದ್ದು, 60- 70 ರೂ. ಗೆ ಹೆಚ್ಚಳ ಮಾಡಲಾಗುತ್ತಿದೆ.

ಇನ್ನೂ ಉಳಿದ ಹೋಟೆಲ್‌ಗಳ ದರ ಪರಿಷ್ಕರಣೆ ವಿಚಾರವಾಗಿ ಈಗಾಗಲೇ ಜೂಮ್ ಮೀಟಿಂಗ್‌ಗಳನ್ನು ಮಾಡಲಾಗಿದೆ. ಕೊನೆಯದಾಗಿ ಮತ್ತೊಮ್ಮೆ ಇದೇ ತಿಂಗಳ 25 ರಂದು ಕನಕಪುರ ರೋಡ್‌ನಲ್ಲಿರುವ ಅಡಿಗಾಸ್ ಹೋಟೆಲ್‌ನಲ್ಲಿ ಸಭೆ ಕರೆಯಲಾಗಿದೆ. ಒಟ್ಟಾರೆ ಹೋಟೆಲ್ ಮಾಲೀಕರ ಸಂಘ ಅಧಿಕೃತವಾಗಿ ದರ ಹೆಚ್ಚಳ ಮಾಡದೆ ಇದ್ದರೂ ಬೀದಿ ಬದಿ ಹೋಟೆಲ್‌ಗಳು ಮತ್ತು ದರ್ಶಿನಿಗಳಲ್ಲಿ ಈಗಾಗಲೇ ದರ ಏರಿಕೆ ಸದ್ದಿಲ್ಲದೆ ಆಗಿದೆ. ಹೊಟೇಲ್‌ನಲ್ಲಿ ತಿನ್ನುವವರು ಒಮ್ಮೆ ಯೋಚನೆ ಮಾಡುವಂತಾಗಲಿದೆ.

suddiyaana