ರಾಹುಲ್ ಗಾಂಧಿಯ ಪರ ಎಟಿಎಂ ಸರ್ಕಾರ  ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ – ಬಿಜೆಪಿ ವ್ಯಂಗ್ಯ

ರಾಹುಲ್ ಗಾಂಧಿಯ ಪರ ಎಟಿಎಂ ಸರ್ಕಾರ  ಪ್ರತಿಭಟನೆ ನಡೆಸಿದ್ದು ಹಾಸ್ಯಾಸ್ಪದ – ಬಿಜೆಪಿ ವ್ಯಂಗ್ಯ

ಬೆಂಗಳೂರು: ಮೋದಿ ಸರ್‌ ನೇಮ್‌ ವಿಚಾರವಾಗಿ ಶಿಕ್ಷೆಗೆ ಗುರಿಯಾಗಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಸಂಸದ ಸ್ಥಾನದಿಂದ ಅನರ್ಹಗೊಂಡಿದ್ದಾರೆ.ಅನರ್ಹತೆ ಪ್ರಶ್ನಿಸಿ ರಾಹುಲ್‌ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿರುವ ಹಿನ್ನೆಲೆ ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ ಶಿವಕುಮಾರ್‌ ಸೇರಿ ರಾಜ್ಯ ಕಾಂಗ್ರೆಸ್‌ ನಾಯಕರು ಗುರುವಾರ ಮೌನ ಪ್ರತಿಭಟನೆ ನಡೆಸಿದ್ದರು. ಈ ಬೆನ್ನಲ್ಲೇ ರಾಜ್ಯ ಬಿಜೆಪಿ ಟ್ವೀಟ್‌ ಮಾಡಿ ಕಾಂಗ್ರೆಸ್‌ ಕಾಲೆಳೆದಿದೆ. ಅನರ್ಹ ಸಂಸದ ರಾಹುಲ್‌ ಗಾಂಧಿಯ ಪರ ಎಟಿಎಂ ಸರ್ಕಾರದವರು ಮೌನ ಪ್ರತಿಭಟನೆ ನಡೆಸಿದ್ದು ಒಂದು ಹಾಸ್ಯಾಸ್ಪದ ಸಂಗತಿ ಎಂದು ವ್ಯಂಗ್ಯವಾಡಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ಅನರ್ಹ ಸಂಸದ ರಾಹುಲ್‌ ಗಾಂಧಿಯ ಪರ ಎಟಿಎಂ ಸರ್ಕಾರದವರು ಮೌನ ಪ್ರತಿಭಟನೆ ನಡೆಸಿದ್ದು ಒಂದು ಹಾಸ್ಯಾಸ್ಪದ ಸಂಗತಿ. ಜಾತಿನಿಂದನೆ ಅಪರಾಧವೇ, ಅದರಲ್ಲಿಯೂ ರಾಜಕೀಯ ದ್ವೇಷದಿಂದ ಭಾರತದ ಪ್ರಧಾನಿಯವರ ಜಾತಿಯನ್ನು ಸಾರ್ವಜನಿಕವಾಗಿ ಅವಹೇಳನ ಮಾಡಿದ್ದು ವಿದೇಶಿ ಕೈಗೊಂಬೆ ರಾಹುಲ್ ಗಾಂಧಿಯ ಅಪ್ರಬುದ್ಧತೆಗೆ ಮತ್ತು ಸಂವಿಧಾನ ವಿರೋಧಿ ಮಾನಸಿಕತೆಗೆ ಸಾಕ್ಷಿಯಾಗಿದೆ ಎಂದು ಲೇವಡಿ ಮಾಡಿದೆ.

ಇದನ್ನೂ ಓದಿ: RSSಗೆ 35 ಎಕರೆ ಭೂಮಿ ಹಸ್ತಾಂತರಕ್ಕೆ ಸರ್ಕಾರ ತಡೆ – ಸದನದಲ್ಲೂ ಲಿಖಿತ ಉತ್ತರ ನೀಡಿದ ಸಚಿವ

ಇಂತಹ ಹೀನ ಮನಸ್ಥಿತಿಯುಳ್ಳ ರಾಹುಲ್ ಪರ ಪ್ರತಿಭಟನೆ ನಡೆಸಿದ್ದು ಕಾಂಗ್ರೆಸ್‌ ನ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿದೆ. ಹಿಂದುಳಿದ ವರ್ಗಗಳನ್ನು ಹೀಯಾಳಿಸಿದ್ದಾರೆ ಎಂಬ ಕಾರಣಕ್ಕೆ ಘನ ನ್ಯಾಯಾಲಯವು ರಾಹುಲ್ ಗೆ ಶಿಕ್ಷೆ ನೀಡಿದ್ದು, ಕಾನೂನಿನ ಪ್ರಕಾರ ಸಹಜವಾಗಿಯೇ ಅನರ್ಹಗೊಂಡಿದ್ದಾರೆ. ಆದರೇ, ನ್ಯಾಯಾಲಯದ ತೀರ್ಪಿನ ವಿರುದ್ಧ ಪ್ರತಿಭಟಿಸುತ್ತಿರುವ “ಕೈ” ಪಕ್ಷದವರು, ನ್ಯಾಯಾಂಗ ವ್ಯವಸ್ಥೆಯ ಸಾರ್ವಭೌಮತೆಗೆ ಧಕ್ಕೆ ತರುತ್ತಿದ್ದಾರೆ. ಸಂವಿಧಾನದ ರಕ್ಷಕರು ಎಂದು ಬಡಾಯಿಕೊಚ್ಚಿಕೊಳ್ಳುವ ಸಿದ್ದರಾಮಯ್ಯ ಈ ನೆಲದ ಕಾನೂನು & ಸಂವಿಧಾನಕ್ಕೆ ಗೌರವ ನೀಡುತ್ತಿರುವ ಪರಿ ಇದು ಎಂದು ಆಕ್ರೋಶ ವ್ಯಕ್ತಪಡಿಸಿದೆ.

ನಿಜಕ್ಕೂ ಕಾಂಗ್ರೆಸ್ ಪಕ್ಷಕ್ಕೆ ಈ ನೆಲದ ಕಾನೂನು & ಸಂವಿಧಾನದ ಬಗ್ಗೆ ಗೌರವವಿದ್ದರೇ, ರಾಹುಲ್ ವಿರುದ್ಧ ಪ್ರತಿಭಟನೆಗೆ ಇಳಿಯಬೇಕಿತ್ತು. ತನ್ನ ಸ್ವಾರ್ಥ ರಾಜಕಾರಣಕ್ಕಾಗಿ, ವಿದೇಶಗಳಿಗೆ ತೆರಳಿ ಭಾರತದ ಅಸ್ಮಿತೆಯನ್ನು ಕೆಣಕುವ ಹಾಗೂ ಭಾರತದ ಸಾರ್ವಭೌಮತ್ವವನ್ನು ವ್ಯಂಗ್ಯ ಮಾಡುವ ರಾಹುಲ್‌ರನ್ನು ಗಡಿಪಾರು ಮಾಡಿ ಎಂದು ಆಗ್ರಹಿಸಬೇಕಿತ್ತು ಎಂದು ಕಿಡಿಕಾರಿದೆ.

ಭಾರತದ ಅಸ್ಮಿತೆಯ ಪರಮವೈರಿ ಜಾರ್ಜ್ ಸೋರಸ್ ಸಂಗಡಿಗರ ಜೊತೆ ಜೊತೆಗೆ ಅಮೇರಿಕಾದಲ್ಲಿ ರಾಹುಲ್ ಭಾರತವನ್ನು ಅವಮಾನಿಸುತ್ತಾರೆ. ಅದೇ ರಾಹುಲ್ ಭಾರತದ ಪರಮವೈರಿ ಚೀನಾಕ್ಕೆ ಕದ್ದು ಮುಚ್ಚಿ ಭೇಟಿ ಮಾಡುತ್ತಾರೆ. ಇದೇ ರಾಹುಲ್ ಇಂಗ್ಲೆಂಡ್ ಗೆ ಭೇಟಿ ನೀಡಿ, ಅಲ್ಲಿನ ಪ್ರಜೆಗಳನ್ನು, ಭಾರತದ ಆಂತರಿಕ ವ್ಯವಹಾರದಲ್ಲಿ ಮೂಗು ತೂರಿಸಿ ಎಂದು ಕರೆ ಕೊಡುತ್ತಾರೆ. ಕಾಂಗ್ರೆಸ್‌ಗೆ ಇದರ ವಿರುದ್ಧ ಪ್ರತಿಭಟಿಸಲು ಧೈರ್ಯವಿದೆಯೇ..? ಎಂದು ಪ್ರಶ್ನಿಸಿದೆ.

suddiyaana