ಪೆನ್ಡ್ರೈವ್ ರಿಲೀಸ್ ಗೆ ಕಾಂಗ್ರೆಸ್ ನಾಯಕರಿಂದಲೇ ತಡೆ! – ಹೊಸ ಬಾಂಬ್ ಸಿಡಿಸಿದ ಹೆಚ್ಡಿಕೆ
ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ರಾಜ್ಯ ಸರ್ಕಾರದ ವಿರುದ್ಧ ಪೆನ್ ಡ್ರೈವ್ ಬಾಂಬ್ ಸಿಡಿಸಿದ್ದಾರೆ. ಇದು ರಾಜ್ಯ ರಾಜಕೀಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೆಲದಿನಗಳ ಹಿಂದೆ ತಾನು ಪೆನ್ ಡ್ರೈವ್ ರಿಲೀಸ್ ಮಾಡಿದ್ರೆ ಸಚಿವರೊಬ್ಬರು ರಾಜೀನಾಮೆ ನೀಡಬೇಕಾಗುತ್ತದೆ ಎಂದು ಹೇಳಿದ್ದರು. ಇದೀಗ ಪೆನ್ಡ್ರೈವ್ ಬಿಡುಗಡೆಗೆ ಕಾಂಗ್ರೆಸ್ ನಾಯಕರೇ ತಡೆಯುತ್ತಿದ್ದಾರೆಂದು ಹೆಚ್.ಡಿ ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.
ಇದನ್ನೂ ಓದಿ: ಪ್ರವಾಹ ಪರಿಸ್ಥಿತಿ ಅವಲೋಕಿಸಲು ಬಂದ ಶಾಸಕರು – ಆಕ್ರೋಶಗೊಂಡ ಮಹಿಳೆಯಿಂದ ಶಾಸಕರಿಗೆ ಕಪಾಳಮೋಕ್ಷ..!
ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್ಡಿಕೆ, ಇನ್ನೂ ತುಂಬಾ ವಿಚಾರ ಸಿಗಲಿದೆ. ಈಗಲೇ ಆತುರಪಡಬೇಡಿ. ಕಾಂಗ್ರೆಸ್ನಲ್ಲಿ ವಿಕೆಟ್ ಬೀಳಬೇಕು ಎಂದು ಕೆಲವರು ಕಾಯುತ್ತಿದ್ದಾರೆ. ಇದು ಸಾಮಾನ್ಯ ಪೆನ್ಡ್ರೈವ್ ಅಲ್ಲ. ನಾನು ಎಲ್ಲೂ ಕದ್ದು ಓಡಿ ಹೋಗುವುದಿಲ್ಲ. ಹಿಟ್ ಆ್ಯಂಡ್ ರನ್ ಪ್ರಶ್ನೆಯೇ ಇಲ್ಲ. ಈ ಹಿಂದೆ 2008-2013ರ ಅವಧಿಯಲ್ಲಿನ ಹಗರಣಗಳ ಬಗ್ಗೆ ನಾನು ದಾಖಲೆ ಇಟ್ಟು ಮಾಡಿದ್ದೇನೆ. ಪೆನ್ಡ್ರೈವ್ ಬಿಡುಗಡೆಯನ್ನು ಕಾಂಗ್ರೆಸ್ನವರೇ ತಡೆಯುತ್ತಿದ್ದಾರೆ ಎಂದು ಹೇಳಿದ್ದಾರೆ.
ವರ್ಗಾವಣೆ ದಂಧೆಗೆ ಅಡ್ಡಗಳನ್ನು ಮಾಡಿಕೊಂಡಿದ್ದಾರೆ. ಈ ದರಪಟ್ಟಿ ಅವರೇ ಕೊಟ್ಟಿದ್ದ ಜಾಹೀರಾತಿನ ಮುಂದುವರೆದ ಭಾಗ ಇರಬಹುದು. ವಾಸ್ತವಾಂಶವನ್ನು ಸದನದ ಮುಂದೆ ಇಟ್ಟಿದ್ದೇನೆ. ಭ್ರಷ್ಟಾಚಾರ ನಿಲ್ಲಿಸುವ ಧೈರ್ಯವಿದ್ದರೆ ಕ್ರಮ ಕೈಗೊಳ್ಳಲಿ. ಈ ದರಪಟ್ಟಿ ಈಗ ಇವರ ಅವಧಿಯಲ್ಲೇ ಮಾಡಿದ್ದಾರೆ. ಅಧಿಕಾರಿಗಳಿಂದಲೇ ಈ ಮಾಹಿತಿ ಸೋರಿಕೆ ಆಗಿದೆ ಎಂದರು.
ನಾನು ಒಕ್ಕಲಿಗ ಸಮಾಜದಲ್ಲಿ ಯಾರನ್ನೂ ಬೆಳೆಯಲು ಅಡ್ಡಿ ಮಾಡಿಲ್ಲ. ಭ್ರಷ್ಟಾಚಾರದ ದಾಖಲೆ ಇಟ್ಟಿದ್ದಕ್ಕೆ ಜಾತಿ ಬಣ್ಣ ಕಟ್ಟಿದ್ದಾರೆ. ಭ್ರಷ್ಟಾಚಾರಕ್ಕೆ ಯಾವುದಾದರೂ ಜಾತಿ ಇದ್ಯಾ ಎಂದು ಪ್ರಶ್ನಿಸುವ ಮೂಲಕ ಚಲುವರಾಯಸ್ವಾಮಿಗೆ ಟಾಂಗ್ ನೀಡಿದರು.