ಅಡುಗೆಗೆ ಟೊಮ್ಯಾಟೊ ಬಳಸಿದ ಗಂಡ – ಸಿಟ್ಟಿಗೆದ್ದು ತವರಿಗೆ ಹೋದಳು ಹೆಂಡತಿ!
ಮಧ್ಯಪ್ರದೇಶ: ದೇಶದಾದ್ಯಂತ ಟೊಮ್ಯಾಟೊ ಬೆಲೆ ಗಗನಕ್ಕೇರಿದೆ. ದಿನಬೆಳಗಾದರೆ ಚಿನ್ನದ ದರದಂತೆ ಟೊಮ್ಯಾಟೊ ಬೆಲೆಯನ್ನು ಕೇಳುವಂತಾಗಿದೆ. ಬೆಲೆ ಏರಿಕೆಯಿಂದಾಗಿ ಅಡುಗೆ ಆಡುವಾಗ ಟೊಮ್ಯಾಟೊ ಹಾಕಬೇಕೋ ಬೇಡವೋ ಎಂದು ಯೋಚಿಸುವ ಕಾಲ ಬಂದಿದೆ. ಅಷ್ಟರ ಮಟ್ಟಿಗೆ ಟೊಮ್ಯಾಟೊ ಬೆಲೆ ಏರಿಕೆಯಾಗಿದೆ.
ಗಗನಕ್ಕೇರುತ್ತಿರುವ ಟೊಮ್ಯಾಟೊ ಬೆಲೆಯಿಂದ ಅನೇಕ ಜನರ ಆರ್ಥಿಕತೆಯ ಮೇಲೆ ಹೊಡೆತಬಿದ್ದಿದೆ. ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಟೊಮ್ಯಾಟೊ ವಿಚಾರವಾಗಿ ಗಂಡ ಹೆಂಡತಿ ಮಧ್ಯೆ ಜಗಳ ನಡೆದಿದೆ. ಗಂಡ ಅಡುಗೆ ಮಾಡುವಾಗ ತನ್ನ ಪತ್ನಿಯ ಬಳಿ ಕೇಳದೆ ಪದಾರ್ಥಕ್ಕೆ ಟೊಮ್ಯಾಟೊ ಬಳಸಿದ ಎಂಬ ಕಾರಣಕ್ಕೆ ಜಗಳ ನಡೆದು ಪತ್ನಿ ಮನೆ ಬಿಟ್ಟು ಹೋಗಿರುವ ವಿಚಿತ್ರ ಘಟನೆ ನಡೆದಿದೆ.
ಇದನ್ನೂ ಓದಿ: ಸಿನಿಪ್ರಿಯರಿಗೆ ಖುಷಿ ಸುದ್ದಿ – ಮಲ್ಟಿಪ್ಲೆಕ್ಸ್ನಲ್ಲಿ ತಿಂಡಿ, ಪಾನೀಯದ ಬೆಲೆ ಇಳಿಕೆ!
ಮಧ್ಯಪ್ರದೇಶದ ಶಾಹದೋಲ್ ಜಿಲ್ಲೆಯಲ್ಲಿ ಟಿಫಿನ್ ಸರ್ವಿಸ್ ನಡೆಸುತ್ತಿರುವ ಸಂಜೀವ್ ಬರ್ಮನ್, ಟೊಮ್ಯಾಟೊ ಬೆಲೆ ಏರಿಕೆಯಾದ ಬಳಿಕ ತಾನು ಮಾಡಿದ ಅಡುಗೆಗೆ ಎರಡು ಟೊಮ್ಯಾಟೊಗಳನ್ನು ಬಳಸಿದ್ದ ಇದು ಹೆಂಡತಿಯ ಗಮನಕ್ಕೆ ಮೊದಲು ಬಂದಿರಲಿಲ್ಲ. ಆದರೆ ಒಟ್ಟಿಗೆ ಊಟ ಮಾಡುವ ವೇಳೆ ಪದಾರ್ಥದಲ್ಲಿ ಟೊಮ್ಯಾಟೊ ಪತ್ತೆಯಾಗಿದೆ. ಇದನ್ನು ಕಂಡ ಪತ್ನಿ ಪತಿಯ ಮೇಲೆ ರೇಗಾಡಿದ್ದಾರೆ. ಅಲ್ಲದೆ ಇದೆ ವಿಚಾರವಾಗಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ. ನನ್ನನ್ನು ಕೇಳದೆ ಪದಾರ್ಥಕ್ಕೆ ಟೊಮ್ಯಾಟೊ ಯಾಕೆ ಹಾಕಿದ್ದೀರಿ ಎಂದು ಜಾಗವಾಡಿದ್ದಾರೆ. ಆದರೆ ಕೊನೆಗೆ ಜಗಳ ವಿಕೋಪಕ್ಕೆ ತೆರಳಿ ಪತ್ನಿ ತನ್ನ ಮಗಳ ಜೊತೆ ಮನೆ ಬಿಟ್ಟು ತೆರಳಿದ್ದಾಳೆ.
ಸಿಟ್ಟಿನಲ್ಲಿದ್ದ ಪತಿಯೂ ಮೊದಲು ಪತ್ನಿ ಸಿಟ್ಟು ಇಳಿದ ಬಳಿಕ ಮನೆಗೆ ಬರಬಹುದು ಎಂದುಕೊಂಡಿದ್ದ. ಆದರೆ ಪತ್ನಿ ಮತ್ತು ಮಗಳು ಎರಡು ದಿನವಾದರೂ ಮನೆಗೆ ಬಾರದೇ ಇರುವುದನ್ನು ಕಂಡ ಪತಿ ತನ್ನ ಕುಟುಂಬದವರ ಜೊತೆ ಪತ್ನಿ ಮಗಳ ವಿಚಾರ ವಿಚಾರಿಸಿದ್ದಾನೆ. ಆದರೆ ಯಾವುದೇ ಸುಳಿವು ಸಿಗಲಿಲ್ಲ. ಇದರಿಂದ ಗಾಬರಿಗೊಂಡ ಪತಿ ಹತ್ತಿರದ ಪೊಲೀಸ್ ಠಾಣೆಗೆ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾದ ತಾಯಿ ಮಗಳ ಪತ್ತೆ ಕಾರ್ಯಕ್ಕೆ ಬಲೆ ಬಿಸಿದ್ದಾರೆ.