ಚಂದ್ರಯಾನ-3ಗೆ ಕ್ಷಣಗಣನೆ ಆರಂಭ – ನೌಕೆಯ ಮಾಡೆಲ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ವಿಜ್ಞಾನಿಗಳು!
ಶ್ರೀಹರಿಕೋಟಾ: ಇಸ್ರೋದ ಮಹತ್ವಾಕಾಂಕ್ಷಿ ಯೋಜನೆ ಜುಲೈ 14ರಂದು ಶ್ರೀಹರಿಕೋಟದಿಂದ ಚಂದ್ರಯಾನ-3 ಉಡಾವಣೆ ಆಗಲಿದೆ. ಶುಕ್ರವಾರ ಮಧ್ಯಾಹ್ನ 2:35 ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಲಾಂಚ್ ವೆಹಿಕಲ್ ಮಾರ್ಕ್-III ಉಡಾವಣಾ ವಾಹನ ಮೂಲಕ ಚಂದ್ರಯಾನ ಉಡಾವಣೆ ಆಗಲಿದೆ. ಇದಕ್ಕಾಗಿ ಇಸ್ರೋ ಈಗಾಗಲೇ ಎಲ್ಲಾ ವ್ಯವಸ್ಥೆಗಳನ್ನು ಮಾಡಿಕೊಂಡಿದೆ. ಈ ಮಧ್ಯೆ ಚಂದ್ರಯಾನ-3 ಉಪಗ್ರಹ ನೌಕೆಯ ಮಾಡೆಲ್ ಜೊತೆ ಇಸ್ರೋ ವಿಜ್ಞಾನಿಗಳು ಹಾಗೂ ಸಿಬ್ಬಂದಿಗಳ ತಂಡ ತಿರುಪತಿ ತಿಮ್ಮಪ್ಪನ ಸನ್ನಿಧಾನಕ್ಕೆ ಭೇಟಿ ನೀಡಿದ್ದು, ವಿಶೇಷ ಪೂಜೆ ಸಲ್ಲಿಸಿದೆ.
ಇದನ್ನೂ ಓದಿ: ಚಂದ್ರಯಾನ-3 ಉಡಾವಣೆಗೂ ಮುನ್ನ ಚೆಂಗಾಲಮ್ಮನಿಗೆ ಪೂಜೆ – ಪ್ರತಿ ಬಾರಿಯೂ ಇಸ್ರೋದಿಂದ ಈ ದೇವಿಗೆ ಪೂಜೆ ಸಲ್ಲಿಕೆ..!
ಆಂಧ್ರಪ್ರದೇಶದ ತಿರುಪತಿಯಲ್ಲಿರುವ ಬಾಲಾಜಿಯ ದೇಗುಲಕ್ಕೆ ಆಗಮಿಸಿದ ಇಸ್ರೋ ವಿಜ್ಞಾನಿಗಳ ತಂಡ ಮಿನಿಯೇಚರ್ ಮಾಡೆಲ್ ಜೊತೆ ತಿರುಪತಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ಇನ್ನು ಚಂದ್ರಯಾನ ಉಡಾವಣೆಗೆ ಕೇವಲ 1 ದಿನವಷ್ಟೇ ಬಾಕಿ ಇದೆ. 25 ಗಂಟೆ 30 ನಿಮಿಷಗಳ ಕೌಂಟ್ಡೌನ್ ಗುರುವಾರ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿದ್ದು, ಇದಕ್ಕೆ ಸಂಬಂಧಿಸಿದಂತೆ ಬುಧವಾರ ಸಿದ್ಧತಾ ಪರಿಶೀಲನೆಯನ್ನು ಇಸ್ರೋ ಮುಗಿಸಿದ್ದು, ಉಡ್ಡಯನಕ್ಕೆ ಅನುಮತಿ ನೀಡಿದೆ.
ಶುಕ್ರವಾರ ಮಧ್ಯಾಹ್ನ 2 ಗಂಟೆ 35 ನಿಮಿಷ 17 ಸೆಕೆಂಡ್ಗೆ ಚಂದ್ರಯಾನ ನೌಕೆಯನ್ನು ಹೊತ್ತ ರಾಕೆಟ್ ಶ್ರೀಹರಿಕೋಟಾದಿಂದ ಉಡಾವಣೆಗೊಳ್ಳಲಿದೆ. ಈ ಉಡಾವಣೆಗೆ ದೇಶೀಯವಾಗಿ ನಿರ್ಮಾಣ ಮಾಡಲಾದ ಲಾಂಚಿಂಗ್ ವಾಹನ ಬಳಸಲಾಗುತ್ತಿದ್ದು, ಲ್ಯಾಂಡರ್ ಮತ್ತು ರೋವರ್ಗಳನ್ನು ಸಹ ದೇಶೀಯವಾಗಿ ತಯಾರಿಸಲಾಗಿದೆ. ಲ್ಯಾಂಡರ್ ಆಗಸ್ಟ್ನಲ್ಲಿ ಚಂದ್ರನ ಮೇಲೆ ಇಳಿಯಲಿದೆ. ಈ ಉಡಾವಣೆಯನ್ನು ಇಸ್ರೋದ ಅಧಿಕೃತ ಯೂಟ್ಯೂಬ್ ಚಾನಲ್ನಲ್ಲಿ ವೀಕ್ಷಿಸಬಹುದು ಎಂದು ಇಸ್ರೋ ಹೇಳಿದೆ. ಇದು ಚಂದ್ರಯಾನ-2 ಯೋಜನೆಯ ಮುಂದುವರೆದ ಭಾಗವಾದ ಕಾರಣ ಈ ಯೋಜನೆಯ ಆರ್ಬಿಟರನ್ನು ಕೈಬಿಡಲಾಗಿದೆ. ಚಂದ್ರನ ದಕ್ಷಿಣ ಧ್ರುವದಲ್ಲಿ ನೌಕೆಯನ್ನು ಇಳಿಸಲು ಇಸ್ರೋ ಸಿದ್ಧತೆ ನಡೆಸಿದ್ದು, ಈ ಬಾರಿ ಸಕಲ ಪೂರ್ವ ತಯಾರಿಯೊಂದಿಗೆ ನೌಕೆಯನ್ನು ಸಿದ್ಧಪಡಿಸಲಾಗಿದೆ.