ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕ್ಷಣದಿಂದ ಕೊಲೆ, ಸುಲಿಗೆ, ಹತ್ಯೆ ಪ್ರಕರಣ ಹೆಚ್ಚಳ! – ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಕಿಡಿ
ಬೆಂಗಳೂರು: ರಾಜ್ಯದಲ್ಲಿ ಸಾಲು ಸಾಲು ಕೊಲೆಗಳ ಬೆನ್ನಲ್ಲೇ ರಾಜಕೀಯ ಯುದ್ಧ ಶುರುವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಕೆಸರೆರಚಾಟ ನಡೀತಿದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ರಾಜ್ಯದಲ್ಲಿ ಶಾಂತಿ, ಸುವ್ಯವಸ್ಥೆ ಹದಗೆಟ್ಟಿದೆ. ಸಮಾಜದ ಸ್ವಾಸ್ತ್ಯ ಕಾಪಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ವಿಧಾನಸೌಧದ ಬಳಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದಾರೆ.
ಇದನ್ನೂ ಓದಿ: ಹಿಂದೂ ವಿರೋಧಿ ಸಂಘಟನೆಗಳಿಗೆ ರೆಡ್ ಕಾರ್ಪೆಟ್ ಹಾಸುತ್ತಿದೆ ರಾಜ್ಯಸರ್ಕಾರ! – ಬಿಜೆಪಿ ಕಿಡಿ
ಬಿಜೆಪಿ ಒಂದೆಡೆ ಪ್ರತಿಭಟನೆ ನಡೆಸುತ್ತಿದ್ದರೆ, ಮತ್ತೊಂದೆಡೆ ಟ್ವಿಟ್ಟರ್ನಲ್ಲೂ ಕೂಡ ವಾಗ್ದಾಳಿ ನಡೆಸಿದೆ. ತುಘಲಕ್ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ ಅರಾಜಕತೆ ಸೃಷ್ಟಿಯಾಗಿದೆ. ರಾಜ್ಯದಲ್ಲಿ ಹಿಂದೂಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಪ್ರಕರಣಗಳಲ್ಲಿ ಪ್ರಭಾವಿಗಳನ್ನು ಹಾಗೂ ಸಚಿವರ ಪುತ್ರರನ್ನು ರಕ್ಷಣೆ ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದ ರಾಜ್ಯದಲ್ಲಿ ಕೊಲೆ, ಸುಲಿಗೆ, ಹತ್ಯೆ ಪ್ರಕರಣಗಳು ಹೆಚ್ಚಾಗಿದೆ. ಕಾಂಗ್ರೆಸ್ ಪಕ್ಷ ಮಾಧ್ಯಮಗಳಲ್ಲಿ ಕೊಲೆ ಪ್ರಕರಣಗಳನ್ನು ಸಮರ್ಥಿಸಿಕೊಳ್ಳುತ್ತಿದೆ ಎಂದರೆ ಅದು ನಾಡಿನ ದೌರ್ಭಾಗ್ಯ. ಕೊಲೆಗಡುಕ ಕಾಂಗ್ರೆಸ್ ಸರಕಾರಕ್ಕೆ ಧಿಕ್ಕಾರ ಎಂದು ಬಿಜೆಪಿ ತನ್ನ ಟ್ವಿಟ್ಟರ್ನಲ್ಲಿ ಬರೆದುಕೊಂಡಿದೆ.
ಬಿಜೆಪಿ ಟ್ವೀಟ್‌ಗೆ ಕಾಂಗ್ರೆಸ್ ಕೂಡ ತಿರುಗೇಟು ನೀಡಿದೆ. ಜೈನಮುನಿ, ವೇಣುಗೋಪಾಲ್, ಬೆಂಗಳೂರಿನ ಡಬಲ್ ಮರ್ಡರ್ ಮೂರೂ ಕೊಲೆಗಳು ವೈಯಕ್ತಿಕ ಕಾರಣಗಳಿಂದ ನಡೆದಿವೆ. ಆರೋಪಿಗಳನ್ನು ತಕ್ಷಣವೇ ಪತ್ತೆ ಹಚ್ಚಿದ ನಮ್ಮ ಪೊಲೀಸರ ಕಾರ್ಯಕ್ಷಮತೆ ಶ್ಲಾಘನೀಯ. ಹೆಣ ಕಂಡೊಡನೆ ಹಾರಿ ಬರುವ ಬಿಜೆಪಿಗರು ತಮ್ಮ ಆಡಳಿತದಲ್ಲಿ ನಡೆದ ಹತ್ಯೆಗಳೆಷ್ಟು? ಆರೋಪಿಗಳಿಗೆ ಜೈಲಿನಲ್ಲಿ ಬಿರಿಯಾನಿ ಸೇವೆ ನೀಡಿದ್ದೇಕೆ ಎಂದು ಹೇಳುವರೇ? ಪ್ರಶ್ನಿಸಿದೆ. ಹಾಗೇ ಕೊಲೆಗಳ ಹಿಂದೆ ಬಿಜೆಪಿ ಮುಖಂಡರ ಕೈವಾಡವಿದೆ ಅಂತಾ ತಿರುಗೇಟು ನೀಡಿದೆ.