ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಮತ್ತೊಂದು ಚೀತಾ ಸಾವು – ಐದು ತಿಂಗಳಲ್ಲಿ 7 ನೇ ಸಾವು
ಭೋಪಾಲ್: ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳ ಸರಣಿ ಸಾವು ಮುಂದುವರಿದಿದೆ. ಉದ್ಯಾನದಲ್ಲಿ ‘ತೇಜಸ್’ ಹೆಸರಿನ ನಾಲ್ಕು ವರ್ಷದ ಗಂಡು ಚೀತಾ ಮೃತಪಟ್ಟಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಸುಮಾರು ನಾಲ್ಕು ವರ್ಷದ ತೇಜಸ್ ಎಂಬ ಗಂಡು ಚಿರತೆಯನ್ನು ಈ ವರ್ಷದ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಶಿಯೋಪುರ್ ಜಿಲ್ಲೆಯ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ತರಲಾಗಿತ್ತು. ದಕ್ಷಿಣ ಆಫ್ರಿಕಾದಿಂದ ತರಲಾಗಿದ್ದ ‘ತೇಜಸ್’ ಸಾವಿನೊಂದಿಗೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮೃತಪಟ್ಟ ಚೀತಾಗಳ ಸಂಖ್ಯೆ 7ಕ್ಕೇರಿದೆ.
ಇದನ್ನೂ ಓದಿ: ಉತ್ತರಾಖಂಡದಲ್ಲಿ ಮಳೆಯ ಅಬ್ಬರ – ಕೇದಾರನಾಥ ಯಾತ್ರೆ ರದ್ದು
ಮಂಗಳವಾರ ಬೆಳಿಗ್ಗೆ ಚೀತಾದ ಕುತ್ತಿಗೆಯಲ್ಲಿ ಗಾಯಗಳಾಗಿರುವುದನ್ನು ಗಮನಿಸಿದ್ದ ಮೇಲ್ವಿಚಾರಣಾ ತಂಡವು ಈ ಬಗ್ಗೆ ವೈದ್ಯರ ಗಮನಕ್ಕೆ ತಂದಿತ್ತು. ಆದರೆ ಮಧ್ಯಾಹ್ನದ ವೇಳೆಗೆ ಅದು ಅಸುನೀಗಿದೆ. ಚೀತಾ ಗಾಯಗೊಂಡಿದ್ದು ಹೇಗೆ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಅದರ ಸಾವಿಗೆ ನಿಖರ ಕಾರಣ ಏನೆಂಬುದು ತಿಳಿಯಲಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಸಿ. ಚೌಹಾಣ್ ತಿಳಿಸಿದ್ದಾರೆ.