ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನ – ಪೊಲೀಸ್‌ ಠಾಣೆ ಮೆಟ್ಟಿಲೇರಿದ ವ್ಯಕ್ತಿ!

ದೇವಸ್ಥಾನದಲ್ಲಿ ಚಪ್ಪಲಿ ಕಳ್ಳತನ – ಪೊಲೀಸ್‌ ಠಾಣೆ ಮೆಟ್ಟಿಲೇರಿದ ವ್ಯಕ್ತಿ!

ಲಕ್ನೋ: ದುಬಾರಿ ವಸ್ತು, ಚಿನ್ನಾಭರಣಗಳು ಕಳೆದುಹೋದರೆ, ಕಳ್ಳತನವಾದರೆ ಪತ್ತೆಹಚ್ಚುವಂತೆ ಪೊಲೀಸರ ಮೊರೆ ಹೋಗುವುದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಚಪ್ಪಲಿ ಕಳ್ಳತನವಾಗಿದೆ ಎಂದು ಪೊಲೀಸ್‌ ಠಾಣೆಯಲ್ಲಿ ದೂರು ನೀಡಿರುವ ವಿಚಿತ್ರ ಪ್ರಸಂಗ ನಡೆದಿದೆ.

ದೇವಾಲಯಕ್ಕೆ ಹೋದಾಗ ಚಪ್ಪಲಿ ಕಳ್ಳತನವಾಗುವುದು ಸಾಮಾನ್ಯ. ಹೊಸ ಚಪ್ಪಲಿಗಳನ್ನೇ ಹೆಚ್ಚು ಕಳ್ಳರು ಹೊತ್ತೊಯ್ಯುತ್ತಾರೆ. ಈ ವೇಳೆ ಕದ್ದವರ ಮೇಲೆ ಹಿಡಿ ಶಾಪ ಹಾಕುತ್ತಾ, ಬೈಯ್ಯುತ್ತಾ ದೇವಸ್ಥಾನದಿಂದ ಬಂದು ಹೊಸ ಚಪ್ಪಲಿ ಖರೀದಿಸುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ತನ್ನ ಚಪ್ಪಲಿ ಕಳ್ಳರ ಪಾಲಾಯ್ತು ಎಂದು ಪೊಲೀಸರ ಮೊರೆ ಹೋಗಿದ್ದಾರೆ.

ಇದನ್ನೂ ಓದಿ: ಬೀದಿ ನಾಯಿಗೆ ಇಟಲಿಗೆ ಹೋಗುವ ಅವಕಾಶ –ಪಾಸ್‌ಪೋರ್ಟ್ ಮಾಡಿಸಿದ ದತ್ತು ಪಡೆದ ಒಡತಿ

ಉತ್ತರಪ್ರದೇಶ ಕಾನ್ಪುರ ನಗರದಲ್ಲಿರುವ ಸಿವಿಲ್ ಲೈನ್ ನ ಭೈರವ ಬಾಬಾ ದೇವಸ್ಥಾನದಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ದಬೌಲಿ ನಿವಾಸಿ ಕಾಂತಿಲಾಲ್ ನಿಗಮ್ ಎಂಬಾತ ಭಾನುವಾರ ಬೆಳಗ್ಗೆ ದೇವರ ದರ್ಶನ ಪಡೆಯಲು ದೇವಸ್ಥಾನಕ್ಕೆ ಹೋಗಿದ್ದಾರೆ. ದೇವರ ದರ್ಶನಕ್ಕೆ ಹೋಗುವ ವೇಳೆ  ಚಪ್ಪಲಿಯನ್ನು ದೇವಸ್ಥಾನದ ಹೊರಗೆ ಬಿಟ್ಟಿದ್ದಾನೆ. ಬಳಿಕ ಹತ್ತಿರದಲ್ಲೇ ಇದ್ದ ಅಂಗಡಿಯೊಂದರಿಂದ ಪೂಜಾ ಸಾಮಗ್ರಿ ತೆಗೆದುಕೊಂಡು ಹೋಗಿದ್ದಾರೆ. ಅಂತೆಯೇ ದೇವರ ದರ್ಶನ ಪಡೆದು, ಪೂಜೆ ಮುಗಿಸಿಕೊಂಡು ವಾಪಸ್ ಅಂಗಡಿಗೆ ಬಂದಾಗ ಚಪ್ಪಲಿ ನಾಪತ್ತೆಯಾಗಿದೆ.

ಕಾಂತಿಲಾಲ್ ಇಟ್ಟ ಸ್ಥಳದಲ್ಲಿ  ಚಪ್ಪಲಿ ಹುಡುಕಾಡಿದ್ದಾರೆ. ಅಲ್ಲಿ ಚಪ್ಪಲಿ ಕಾಣದೇ ಇದ್ದಾಗ ಅಂಗಡಿ ಸುತ್ತಮುತ್ತ, ದೇವಾಲಯದ ಸುತ್ತಮುತ್ತ ಹುಡುಕಿದ್ದಾರೆ. ಆದರೆ ಚಪ್ಪಲಿ ಎಲ್ಲೂ ಕಾಣಿಸಲಿಲ್ಲ. ಹೀಗಾಗಿ ಕಾಂತಿಲಾಲ್ ಪೊಲೀಸರ ಮೊರೆ ಹೋಗಿದ್ದಾರೆ. ನನ್ನ ಚಪ್ಪಲಿ ಕಾಣೆಯಾಗಿದೆ ಎಂದು ಇ-ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಕೂಡ ದೂರು ಸ್ವೀಕರಿಸಿ  ಎಫ್‍ಆರ್ ದಾಖಲಿಸಿಕೊಂಡಿದ್ದಾರೆ.

ಕಾಂತಿಲಾಲ್ ದಾಖಲಿಸಿರುವ ದೂರಿನ ಪ್ರಕಾರ, ದೇಗುಲದ ಹೊರಗೆ ಇಟ್ಟಿದ್ದ ನನ್ನ ಚಪ್ಪಲಿಯನ್ನು ಯಾರೋ ಕದ್ದೊಯ್ದಿದ್ದಾರೆ. ನೀಲಿ ಬಣ್ಣದ 7 ಸೈಜ್ ಚಪ್ಪಲಿಯಾಗಿದೆ. ಈ ಚಪ್ಪಲಿಯಲ್ಲಿ ಅಕ್ಯುಪ್ರೆಶರ್ ಇದ್ದು, ಆದಷ್ಟು ಬೇಗ ಹುಡುಕಿಕೊಡಿ ಹಾಗೂ ಕದ್ದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಕಾಂತಿಲಾಲ್ ಮನವಿ ಮಾಡಿದ್ದಾರೆ.

suddiyaana