ಮಹಾಮಳೆಗೆ ಉತ್ತರಭಾರತ ತತ್ತರ – ಸಾವಿನ ಸಂಖ್ಯೆ 37ಕ್ಕೆ ಏರಿಕೆ

ನವದೆಹಲಿ: ಮಳೆಯ ಆರ್ಭಟಕ್ಕೆ ಉತ್ತರಭಾರತ ನಲುಗಿದೆ. ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಸಾಕಷ್ಟು ಹಾನಿ ಸಂಭವಿಸಿದೆ. ಮಹಾಮಳೆಯ ರೌದ್ರ ನರ್ತನಕ್ಕೆ 37 ಮಂದಿ ಸಾವನ್ನಪ್ಪಿದ್ದಾರೆ. ಮಂಗಳವಾರವೂ ಮಳೆಯ ಆರ್ಭಟ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉತ್ತರಾಖಾಂಡ್ ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರವಾಹ ಸ್ಥಿತಿ ಉಂಟಾಗಿದ್ದು ಅಪಾರ ಹಾನಿ ಉಂಟಾಗಿದೆ. ಪ್ರವಾಹ ಮತ್ತು ಭೂಕುಸಿತದಿಂದಾಗಿ ಹಿಮಾಚಲ ಪ್ರದೇಶದಲ್ಲಿ 18 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಪಂಜಾಬ್ ಮತ್ತು ಹರಿಯಾಣದಲ್ಲಿ 9 ಮಂದಿ, ರಾಜಸ್ಥಾನದಲ್ಲಿ ಏಳು ಹಾಗೂ ಉತ್ತರ ಪ್ರದೇಶದಲ್ಲಿ ಮೂವರು ಮೃತಪಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಎರಡೂ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಿದ್ದು, ಕೇಂದ್ರದಿಂದ ಎಲ್ಲಾ ರೀತಿಯ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ: ಮಹಾಮಳೆಯ ರೌದ್ರ ನರ್ತನ – ಆಟಿಕೆಗಳಂತೆ ಕೊಚ್ಚಿ ಹೋಗುತ್ತಿರುವ ವಾಹನಗಳು!
ಇನ್ನು ಯಮುನಾ ಸೇರಿದಂತೆ ಹಲವು ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ರಸ್ತೆ ಸೇರಿ ಹಲವು ಮನೆಗಳು ಜಲಾವೃತಗೊಂಡಿವೆ. ಇನ್ನೂ ಧಾರಾಕಾರ ಮಳೆಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯೂ ನಲುಗಿದ್ದು, ಮಂಗಳವಾರ ನರ್ಸರಿಯಿಂದ 5ನೇ ತರಗತಿಯವರೆಗಿನ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಕಳೆದ ಎರಡು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಸೋಮವಾರ ಕೂಡ ನಗರದ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿತ್ತು. ಖಾಸಗಿ ಶಾಲೆಗಳೂ ಇದೇ ಸಲಹೆಯನ್ನು ಪಾಲಿಸುವಂತೆ ಶಿಕ್ಷಣ ಇಲಾಖೆ ಸೂಚಿಸಿದೆ. ಆರು ಮತ್ತು ಅದಕ್ಕಿಂತ ಹೆಚ್ಚಿನ ತರಗತಿಯವರಿಗೆ ತರಗತಿಗಳು ಎಂದಿನಂತೆ ನಡೆಯುತ್ತವೆ. ಸೋಮವಾರ ಹೊರಡಿಸಿದ ಅಧಿಕೃತ ಆದೇಶದ ಪ್ರಕಾರ ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ನಿಂದ ಮಾನ್ಯತೆ ಪಡೆದ ಎಲ್ಲಾ ಶಾಲೆಗಳು ಸಹ ಮಂಗಳವಾರ ಬಂದ್ ಆಗಲಿವೆ. ಇಲಾಖೆ ಮುಖ್ಯಸ್ಥರು ಮತ್ತು ಶಿಕ್ಷಕರು ಶಾಲೆಗಳಿಗೆ ಬರಬೇಕು ಮತ್ತು ಎಲ್ಲಾ ಕಚೇರಿಗಳು ಸಹ ಕಾರ್ಯನಿರ್ವಹಿಸುತ್ತವೆ ಎಂದು ಆದೇಶದಲ್ಲಿ ಹೇಳಲಾಗಿದೆ.
ಉತ್ತರದ ರಾಜ್ಯಗಳಿಗೆ ನೆರವಾಗಲು ಒಟ್ಟು 39 ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ನಿಯೋಜಿಸಲಾಗಿದೆ. ಹಾನಿಗೀಡಾದ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ ಎಂದು ಎನ್‌ಡಿಆರ್‌ಎಫ್‌ನ ವಕ್ತಾರರು ತಿಳಿಸಿದ್ದಾರೆ.
ಹಿಮಾಚಲ ಪ್ರದೇಶದ ಚಂದೆರತಾಲ್, ಪಾಗಲ್ ನಲ್ಲಾ ಸೇರಿದಂತೆ ಹಲವು ಪ್ರದೇಶಗಳಲ್ಲಿ 300 ಕ್ಕೂ ಹೆಚ್ಚು ಪ್ರವಾಸಿಗರು ಮತ್ತು ಸ್ಥಳಿಯರು ಸಿಲುಕಿದ್ದು, ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯ ನಡೆಸಲಾಗುತ್ತಿದೆ. ಜಲಾವೃತಗೊಂಡ ಸ್ಲಮ್ ಪ್ರದೇಶಗಳಿಂದ ಈಗಾಗಲೇ 500ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಮಾಚಲಪ್ರದೇಶದಲ್ಲಿ 800ಕ್ಕೂ ಹೆಚ್ಚು ರಸ್ತೆಗಳು ಬಂದ್ ಆಗಿದ್ದು, 1,255 ಮಾರ್ಗಗಳ ಬಸ್ ಸಂಚಾರ ಸ್ಥಗಿತಗೊಂಡಿದೆ. 576 ಬಸ್‌ಗಳು ದಾರಿ ಮಧ್ಯೆ ಸಿಲುಕಿಕೊಂಡಿವೆ ಎಂದು ಹಿಮಾಚಲ ರಸ್ತೆ ಸಾರಿಗೆ ನಿಗಮ ತಿಳಿಸಿದೆ.