ಕಲಾಪದಲ್ಲಿ ಜೈನಮುನಿ ಹತ್ಯೆ ಪ್ರಕರಣದ ಬಗ್ಗೆ ಚರ್ಚೆ – ಗೃಹಸಚಿವರು ಬಂದ ಮೇಲೆ ಉತ್ತರ ನೀಡುತ್ತೇನೆ ಎಂದ ಸಿಎಂ ಸಿದ್ದರಾಮಯ್ಯ
ವಿಧಾನಸಭೆ ಕಲಾಪದಲ್ಲಿ ಜೈನ ಮುನಿ ಕಾಮಕುಮಾರನಂದಿ ಮಹರಾಜರ ಹತ್ಯೆ ಪ್ರಕರಣದ ಬಗ್ಗೆ ಬೆಳಗಾವಿಯ ಶಾಸಕರು ಒಕ್ಕೊರಲಿನಿಂದ ನ್ಯಾಯಕ್ಕಾಗಿ ಸರ್ಕಾರವನ್ನು ಆಗ್ರಹಸಿದರು. ಅಹಿಂಸೆಯನ್ನು ಸಾರುವ, ಶಾಂತಿಪ್ರಿಯರಾದ ಜೈನಮುನಿಯನ್ನು ಹಿಂಸೆ ಮಾಡಿ ಕ್ರೂರಮಾಡಿ ಹತ್ಯೆ ಮಾಡಿದ್ದಾರೆ ಎಂಬ ವಿಚಾರ ಸದನದಲ್ಲಿ ಮಾರ್ದನಿಸಿತು. ಜೊತೆಗೆ ಬೆಳಗಾವಿ ಜಿಲ್ಲೆಯ ಜನಪ್ರತಿನಿಧಿಗಳು ಜೈನಮುನಿ ಹತ್ಯೆಗೆ ಕಾರಣರಾದವರಿಗೆ ಮರಣದಂಡನೆ ಶಿಕ್ಷೆ ಕೊಡಿ ಎಂದು ಸರ್ಕಾರವನ್ನು ಆಗ್ರಹಿಸಿದರು. ಶಾಸಕರ ಒಕ್ಕೊರಲ ಆಗ್ರಹಕ್ಕೆ ಸಿಎಂ ಕೂಡಾ ಉತ್ತರ ನೀಡಿದರು.
ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಬಿಜೆಪಿ ಶಾಸಕ ಅಭಯ್ ಪಾಟೀಲ್, ಜೈನಮುನಿ ಹತ್ಯೆ ಪ್ರಕರಣದಲ್ಲಿ ಓರ್ವ ಆರೋಪಿ ಹೆಸರನ್ನು ಮಾತ್ರ ಪೊಲೀಸರು ಬಹಿರಂಗವಾಗಿ ಹೇಳಿದ್ದಾರೆ. ಆದರೆ ಮತ್ತೋರ್ವನ ಹೆಸರನ್ನು ಬಹಿರಂಗವಾಗಿ ಹೇಳಿಲ್ಲ. ಇದು ಸಂಶಯಕ್ಕೆ ಕಾರಣವಾಗಿದೆ ಎಂದರು. ನಂತರ ಈ ಬಗ್ಗೆ ಮಾತನಾಡಿದ ಶಾಸಕ ಲಕ್ಷ್ಣಣ ಸವದಿ,
ಜೈನಮುನಿಯನ್ನು ಹಿಂಸಿಸಿ ಕೊಂದಿದ್ದಾರೆ. ಅವರ ದೇಹದ ಭಾಗಗಳನ್ನು 9 ತುಂಡುಗಳನ್ನಾಡಿ ಮಾಡಿ ಬೋರ್‌ವೆಲ್‌ಗೆ ಎಸೆದಿದ್ದಾರೆ. ಅಹಿಂಸೆಯನ್ನು ಸಾರುವ ಮುನಿಗಳನ್ನು ಹಿಂಸೆ ನೀಡಿ ಕೊಂದವರಿಗೆ ಮರಣದಂಡನೆ ಶಿಕ್ಷೆಯೇ ಸೂಕ್ತ ಎಂದರು. ಹತ್ಯೆ ಹಿಂದೆ ಯಾರೇ ಇದ್ದರೂ ಅವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಿ. ಹತ್ಯೆ ಮಾಡಿದವರಿಗೆ ಮರಣ ದಂಡನೆ ಶಿಕ್ಷೆ ಕೊಡಿಸಿ ಎಂದು ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದರು.
ಶಾಸಕಿ ಶಶಿಕಲಾ ಜೊಲ್ಲೆ, ಶಾಸಕ ಸುನಿಲ್ ಕುಮಾರ್, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಠಿಣ ಕ್ರಮಕೈಗೊಳ್ಳಬೇಕು. ಸಿಬಿಐಗೆ ಈ ಪ್ರಕರಣದ ತನಿಖೆ ವಹಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಜೈನ ಮುನಿ ಹತ್ಯೆಯನ್ನು ನಾನು ಕೂಡಾ ಖಂಡಿಸ್ತೀನಿ. ನಿಮಗೆ ಉತ್ತರ ಕೊಡಲು ನನ್ನ ಬಳಿ ಉತ್ತರ ಸಿದ್ಧವಿದೆ. ಆದರೆ, ಗೃಹಸಚಿವರು ಬಂದ ಮೇಲೆ ಸೂಕ್ತ ಉತ್ತರ ನೀಡುತ್ತೇನೆ ಎಂದರು.