ಟೊಮ್ಯಾಟೊ ಕಾಯಲು ಬೌನ್ಸರ್! – ʼಬಿಜೆಪಿ ಟೊಮ್ಯಾಟೋಗಳಿಗೆ ಜೆಡ್ ಪ್ಲಸ್’ ನೀಡಿ ಎಂದು ಅಖಿಲೇಶ್ ಯಾದವ್ ಲೇವಡಿ
ವಾರಣಾಸಿ: ದೇಶದಾದ್ಯಂತ ಟೊಮ್ಯಾಟೋ ಬೆಲೆ ಗಗನಕ್ಕೇರಿದೆ. ಸೇಬು ಹಣ್ಣಿನ ಬೆಲೆಗಿಂತ ಟೊಮ್ಯಾಟೋ ದರ ಹೆಚ್ಚಾಗಿದ್ದು, ಇದೀಗ ಕಳ್ಳರ ಕಾಟ ಹೆಚ್ಚಾಗಿದೆ. ಇದೀಗ ಚಿನ್ನದಂತಹ ಟೊಮ್ಯಾಟೋ ಹಣ್ಣನ್ನು ಕಳ್ಳರಿಂದ ರಕ್ಷಿಸಲು ಇಲ್ಲೊಬ್ಬ ವ್ಯಾಪಾರಿ ಇಬ್ಬರು ಬೌನ್ಸರ್ ಗಳನ್ನು ನಿಯೋಜಿಸಿದ್ದಾರೆ.
ಹೌದು, ಟೊಮ್ಯಾಟೋ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ಟೊಮ್ಯಾಟೋವನ್ನು ಗ್ರಾಹಕರು ದೋಚದಂತೆ ಜೋಪಾನವಾಗಿ ಕಾಪಾಡುವ ನಿಟ್ಟಿನಲ್ಲಿ ವಾರಣಾಸಿಯ ಲಂಕಾ ಪ್ರದೇಶದ ತರಕಾರಿ ಮಾರಾಟಗಾರನೊಬ್ಬ ಇಬ್ಬರು ಬೌನ್ಸರ್ ಗಳನ್ನು ನಿಯೋಜಿಸಿದ್ದಾರೆ. ಸಮಾಜವಾದಿ ಪಕ್ಷದ ಕಾರ್ಯಕರ್ತರು ಆಗಿರುವ ಅಜಯ್ ಫೌಜಿ ಈ ರೀತಿ ಬೌನ್ಸರ್ ನೇಮಿಸಿಕೊಂಡಿದ್ದಾರೆ.
ಇದನ್ನೂ ಓದಿ: ಎಂಥಾ ಕಾಲ ಬಂತಪ್ಪ.. – ಹೊಸ ಮೊಬೈಲ್ ಖರೀಸಿದ್ರೆ 2 ಕೆಜಿ ಟೊಮ್ಯಾಟೋ ಫ್ರೀ!
ಈ ಹಿಂದೆ ಅವರು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಹುಟ್ಟುಹಬ್ಬದಂದು ಟೊಮ್ಯಾಟೊ ಆಕಾರದ ಕೇಕ್ ಕತ್ತರಿಸುವ ಮೂಲಕ ಗಮನ ಸೆಳೆದಿದ್ದರು. ಇದೀಗ ಫೌಜಿ ಟೊಮ್ಯಾಟೋ ಕಾಯಲು ಬೌನ್ಸರ್ ಗಳನ್ನು ನೇಮಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಫೌಜಿ, ಟೊಮ್ಯಾಟೊ ದರದ ಬಗ್ಗೆ ಜನರಲ್ಲಿ ವಾದಗಳನ್ನು ಕೇಳುತ್ತಲೇ ಇದ್ದೇನೆ. ನನ್ನ ಅಂಗಡಿಯಲ್ಲಿಯೂ ಜನರು ಚೌಕಾಸಿ ಮಾಡಲು ಪ್ರಯತ್ನಿಸಿದರು. ಆದ್ದರಿಂದ ಇಂತಹ ವಾದಗಳನ್ನು ಕೊನೆಗೊಳಿಸಲು ಬೌನ್ಸರ್ಗಳನ್ನು ನಿಯೋಜಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ.
ಕೆಜಿಗೆ 140-160 ರೂ.ಗೆ ಟೊಮ್ಯಾಟೊ ಮಾರಾಟ ಮಾಡುತ್ತಿರುವ ಫೌಜಿ, ಬೆಳಿಗ್ಗೆ 9 ರಿಂದ ಸಂಜೆ 5 ರವರೆಗೆ ತಮ್ಮ ಅಂಗಡಿಯಲ್ಲಿ ಬೌನ್ಸರ್ಗಳನ್ನು ನಿಯೋಜಿಸಿದ್ದಾರೆ. ಆದರೆ, ಅವರನ್ನು ಎಷ್ಟು ಮೊತ್ತಕ್ಕೆ ನೇಮಿಸಿಕೊಂಡರು ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ.
ಫೌಜಿ ಅವರ ಅಂಗಡಿಯಲ್ಲಿ ಇಬ್ಬರು ಬೌನ್ಸರ್ಗಳು ಟೊಮ್ಯಾಟೊ ಕಾಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಎಸ್ಪಿ ಮುಖ್ಯಸ್ಥ ಅಖಿಲೇಶ್ ಯಾದವ್ ಕೂಡ ಫೌಜಿ ಮತ್ತು ಅವರ ಬೌನ್ಸರ್ಗಳು ಟೊಮ್ಯಾಟೊ ಕಾಯುತ್ತಿರುವ ವಿಡಿಯೋವನ್ನು ತನ್ನ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, “ಬಿಜೆಪಿ ಟೊಮೆಟೊಗಳಿಗೆ ‘ಜೆಡ್-ಪ್ಲಸ್’ ಭದ್ರತೆ ನೀಡಬೇಕು” ಎಂದು ವ್ಯಂಗ್ಯವಾಡಿದ್ದಾರೆ.