ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇನಲ್ಲಿ ಶರವೇಗಕ್ಕೆ ದಂಡಾಸ್ತ್ರ – ಎರಡೇ ದಿನದಲ್ಲಿ 490 ಪ್ರಕರಣ ದಾಖಲು!
ಬೆಂಗಳೂರು: ಡೆತ್ ವೇ ಆಗಿರುವ ಬೆಂಗಳೂರು – ಮೈಸೂರು ಎಕ್ಸ್ಪ್ರೆಸ್ ವೇ ನಲ್ಲಿ ಅಪಘಾತಗಳನ್ನು ತಡೆಗಟ್ಟಲು ಪೊಲೀಸರು ಸನ್ನದ್ಧರಾಗಿದ್ದಾರೆ. ಹೆದ್ದಾರಿಯಲ್ಲಿ ಶರವೇಗದಲ್ಲಿ ಸಂಚರಿಸುವ ವಾಹನಗಳ ಮೇಲೆ ಪೊಲೀಸರು ದಂಡಾಸ್ತ್ರ ಪ್ರಯೋಗಿಸುತ್ತಿದ್ದಾರೆ. ಕೇವಲ ಎರಡು ದಿನಗಳಲ್ಲಿ ಪೊಲೀಸರು ಸುಮಾರು 490 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.
ಕಳೆದ ಮಾರ್ಚ್ನಲ್ಲಿ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿ ಲೋಕಾರ್ಪಣೆಗೊಂಡ ನಂತರ 243 ಅಪಘಾತ ಪ್ರಕರಣಗಳು ಸಂಭವಿಸಿವೆ. ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ 58 ಮಂದಿ, ಮಂಡ್ಯ ಜಿಲ್ಲಾ ವ್ಯಾಪ್ತಿಯಲ್ಲಿ 64 ಮಂದಿ ಸೇರಿ ಒಟ್ಟು 122 ಜನರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿತ್ತು. ಹೆದ್ದಾರಿಯಲ್ಲಿ ಅಪಘಾತಗಳು ಹೆಚ್ಚಳವಾದ ಹಿನ್ನೆಲೆಯಲ್ಲಿ ಸಂಚಾರ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅಪಘಾತ ಸ್ಥಳಗಳನ್ನು ಪರಿಶೀಲನೆ ನಡೆಸಿದ್ದರು. ಬಳಿಕ ನಿಯಮ ಉಲ್ಲಂಘಿಸಿದವರ ವಿರುದ್ಧ ದಂಡ ವಿಧಿಸಲಾಗುವುದು ಎಂದು ಪೊಲೀಸ್ ಇಲಾಖೆ ಹೇಳಿತ್ತು. ಅದರಂತೆ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ.
ಇದನ್ನೂ ಓದಿ: ಅನ್ನಭಾಗ್ಯದ ಜೊತೆ ಹಣದ ಭಾಗ್ಯ – ಜಾರಿಯಾಗುತ್ತಿದೆ ಸರ್ಕಾರದ ಎರಡನೇ ಗ್ಯಾರಂಟಿ
ಕೇವಲ ಎರಡು ದಿನಗಳಲ್ಲಿ 490 ಪ್ರಕರಣಗಳನ್ನು ದಾಖಲಿಸಿದ್ದಾರೆ. ಎಕ್ಸ್ ಪ್ರೆಸ್ ವೇನಲ್ಲಿ ವಿಶೇಷ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು ಮೊದಲ ದಿನವಾದ ಗುರುವಾರ 44 ವಾಹನ ಚಾಲಕರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಎರಡನೇ ದಿನವಾದ ಶುಕ್ರವಾರ 446 ಪ್ರಕರಣಗಳನ್ನು ದಾಖಲು ಮಾಡಿ ದಂಡ ವಸೂಲಿ ಮಾಡಿದ್ದಾರೆ. ಇದರಲ್ಲಿ ಓವರ್ ಸ್ಪೀಡ್ 174 , ಲೇನ್ ಡಿಸಿಪ್ಲೀನ್ ಉಲ್ಲಂಘನೆ ಮಾಡಿದ್ದಕ್ಕಾಗಿ 137, ಸೀಟ್ ಬೆಲ್ಟ್ ಧರಿಸದ ಕಾರಣಕ್ಕೆ 81, ಹೆಲ್ಮೆಟ್ ಧರಿಸದ ಬೈಕ್ ಧರಿಸದ ಕಾರಣ 47 ಪ್ರಕರಣ ಹಾಗೂ ಇತರೆ 51 ಪ್ರಕರಣ ಸೇರಿದಂತೆ ಒಟ್ಟಾರೆ 490 ಪ್ರಕರಣಗಳು ಸೇರಿವೆ.
ರಾಮನಗರ ಪೊಲೀಸರು ರೇಡಾರ್ ಗನ್ಗಳೊಂದಿಗೆ ಹೆದ್ದಾರಿಯಲ್ಲಿ ವಾಹನಗಳ ವೇಗ ತಪಾಸಣೆಯಲ್ಲಿ ತೊಡಗಿದ್ದು, ಅತಿವೇಗ ಮತ್ತು ಅಜಾಗರೂಕತೆಯಿಂದ ಅಡ್ಡಾದಿಡ್ಡಿಯಾಗಿ ವಾಹನ ಚಾಲನೆ ಮಾಡುವವರು, ಸೀಟ್ ಬೆಲ್ಟ್ ಧರಿಸದಿರುವುದು ಸೇರಿದಂತೆ ಸುರಕ್ಷತಾ ಕ್ರಮಗಳ ಬಗ್ಗೆ ನಿಗಾ ವಹಿಸಿದ್ದಾರೆ. ಅನುಮತಿಸುವ ಮಿತಿಗಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ.
ಆನಂತರ ಮೇಜರ್ ಸರ್ಜರಿ ಕೈಗೊಳ್ಳಲಾಗಿದ್ದು, ಎಕ್ಸ್ ಪ್ರೆಸ್ ವೇನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ರೇಡಾರ್ ಗನ್ ಬಳಕೆ ಮಾಡುವುದಾಗಿ ಹೇಳಿದ್ದರು. ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳಿಗೆ 100 ಕಿ.ಮೀ.ಗರಿಷ್ಠ ವೇಗ ಮಿತಿಯನ್ನು ನಿಗದಿಪಡಿಸಲಾಗಿತ್ತು. ಆದರೆ, ವಾಹನ ಚಾಲಕರು 120ರಿಂದ 160 ಕಿಮೀ ವೇಗದವರೆಗೆ ಚಾಲನೆ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ರಾಮನಗರ ವ್ಯಾಪ್ತಿಯ ಹೆದ್ದಾರಿಯಲ್ಲಿ ಪೊಲೀಸರು ಸ್ಪೀಡ್ ರೇಡಾರ್ ಗನ್ ಮೂಲಕ ಕಾರ್ಯಾಚರಣೆಗೆ ಇಳಿದಿದ್ದಾರೆ. ಈ ರೇಡಾರ್ ಗನ್ನಲ್ಲಿ ನಿಗದಿತ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಸಂಚರಿಸುವ ವಾಹನಗಳ ವಿವರವನ್ನು ಚಿತ್ರ ಸಮೇತ ಕ್ಯಾಮರಾದಲ್ಲಿ ಸೆರೆಯಾಗಲಿದೆ. ಇದರ ಆಧಾರದ ಮೇಲೆ ಪೊಲೀಸರು ಈಗಾಗಲೇ ಹೆದ್ದಾರಿಯಲ್ಲಿ ಅಳವಡಿಸಿರುವ ಬ್ಯಾರಿಕೇಡ್ ಗಳ ಸಹಾಯದಿಂದ ಅಂತಹ ವಾಹನವನ್ನು ತಡೆದು ದಂಡ ವಿಧಿಸುವ ಕೆಲಸ ಮಾಡಲಾಗುತ್ತಿದೆ.