ಪಿಜ್ಜಾ, ಬರ್ಗರ್ ಪ್ರಿಯರಿಗೆ ಕಹಿ ಸುದ್ದಿ – ಮೆಕ್‌ಡೊನಾಲ್ಡ್ಸ್ ಇನ್ನು ಮುಂದೆ ಈ ತರಕಾರಿ ಬಳಸಲ್ಲ!
ನವದೆಹಲಿ: ಟೊಮೆಟೋ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ದಿನಬೆಳಗಾದರೆ ಚಿನ್ನದ ಬೆಲೆಯಂತೆ ಟೊಮೆಟೋ ದರವನ್ನು ಕೇಳುವ ಸ್ಥಿತಿ ಎಲ್ಲೆಡೆ ನಿರ್ಮಾಣವಾಗಿದೆ. ಕರ್ನಾಟಕದಲ್ಲಿ ಒಂದು ಕೆಜಿ ಟೊಮೆಟೋ 120-150 ರೂ.ವರೆಗೆ ಮಾರಾಟವಾಗುತ್ತಿದ್ದರೆ, ಉತ್ತರಾಖಂಡದಲ್ಲಿ ಟೊಮೆಟೋ ಕೆಜಿಗೆ 250 ರೂ. ಆಗಿದ್ದು, ಬೆಲೆ ಏರಿಕೆಯಾಗಿದೆ. ದೇಶಾದ್ಯಂತ ಟೊಮೆಟೋ ಬೆಲೆಯಲ್ಲಿ ಏರಿಕೆಯಾಗಿರುವುದು ಗ್ರಾಹಕರನ್ನು ಚಿಂತೆಗೀಡು ಮಾಡಿದೆ. ಕೇವಲ ಗ್ರಾಹಕರು, ಸಣ್ಣ-ಪುಟ್ಟ ಹೋಟೆಲ್‌ಗಳಿಗಷ್ಟೇ ಅಲ್ಲ ಆಹಾರ ಉತ್ಪನ್ನಗಳನ್ನು ತಯಾರಿಸುವ ದೊಡ್ಡ ದೊಡ್ಡ ಕಂಪನಿಗಳಿಗೂ ಇದರ ಬಿಸಿ ತಟ್ಟಿದೆ. ಇದೀಗ ಪಿಜ್ಜಾ-ಬರ್ಗರ್ ಆಹಾರ ಉತ್ಪನ್ನ ತಯಾರಿಸುವ ಕಂಪನಿ ಮೆಕ್‌ಡೊನಾಲ್ಡ್ಸ್ ಅಚ್ಚರಿಯ ಘೋಷಣೆಯೊಂದನ್ನು ಮಾಡಿದೆ.
ಇದನ್ನೂ ಓದಿ: 35 ವರ್ಷಗಳ ನಂತರ ಪ್ರೇಮಿಗಳ ಪುನರ್ಮಿಲನ – ಪ್ರೀತಿ ಎಂದರೆ ಇದುವೆ ತಾನೇ…!
ಪಿಜ್ಜಾ-ಬರ್ಗರ್ ಆಹಾರ ಉತ್ಪನ್ನ ತಯಾರಿಸುವ ಕಂಪನಿ ಮೆಕ್‌ಡೊನಾಲ್ಡ್ಸ್ ಎಲ್ಲರಿಗೂ ಚಿರಪರಿಚಿತ. ಕಿರಿಯರಿಂದ ಹಿರಿಯರವರೆಗೂ ಪಿಜ್ಜಾ-ಬರ್ಗರ್ ಅಚ್ಚುಮೆಚ್ಚು. ಇದೀಗ ಮೆಕ್‌ಡೊನಾಲ್ಡ್ಸ್ ಪಿಜ್ಜಾ-ಬರ್ಗರ್ ಪ್ರಿಯರಿಗೆ ಶಾಕಿಂಗ್ ವಿಚಾರವೊಂದನ್ನು ಮೆಕ್‌ಡೊನಾಲ್ಡ್ಸ್ ನೀಡಿದೆ. ಪಿಜ್ಜಾ ಸೇರಿದಂತೆ ಇತರೆ ಆಹಾರ ಉತ್ಪನ್ನಗಳಿಗೆ ಟೊಮೆಟೋ ಬಳಸಲಾಗುತ್ತಿಲ್ಲ ಎಂದು ಹೇಳಿಕೊಂಡಿದೆ. ಮೆಕ್‌ಡೊನಾಲ್ಡ್ಸ್ ದೆಹಲಿಯಲ್ಲಿರುವ ರೆಸ್ಟೋರೆಂಟ್‌ಗಳ ಹೊರಗೆ, ತನ್ನ ಆಹಾರ ಉತ್ಪನ್ನಗಳಲ್ಲಿ ಟೊಮೆಟೋ ಬಳಕೆ ಮಾಡುತ್ತಿಲ್ಲ ಎಂಬ ಸೂಚನಾಫಲಕ ಹಾಕಿಕೊಂಡಿದೆ. ಈ ದೃಶ್ಯದ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಸೆಬಿ ನೋಂದಾಯಿತ ಹೂಡಿಕೆ ಸಲಹೆಗಾರ ಆದಿತ್ಯ ಶಾ ಅವರು ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ.
ಉತ್ತಮ ಪದಾರ್ಥಗಳೊಂದಿಗೆ ಅತ್ಯುತ್ತಮ ಆಹಾರವನ್ನು ನಿಮಗೆ ನೀಡಲು ನಾವು ಬದ್ಧರಾಗಿದ್ದೇವೆ. ನಮ್ಮ ಅಂತಾರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ ನಿಮಗೆ ಗುಣಮಟ್ಟದ ಟೊಮೆಟೋ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಆಹಾರ ಉತ್ಪನ್ನಗಳಲ್ಲಿ ಟೊಮೆಟೋ ಬಳಸುತ್ತಿಲ್ಲ ಎಂದು ಗ್ರಾಹಕರಿಗೆ ಮೆಕ್‌ಡೊನಾಲ್ಡ್ಸ್ ತಿಳಿಸಿದೆ.