ಬುಡಕಟ್ಟು ವ್ಯಕ್ತಿ ಮೇಲೆ ಬಿಜೆಪಿ ಮುಖಂಡ ಮೂತ್ರ ಮಾಡಿದ ಪ್ರಕರಣ – ಸಂತ್ರಸ್ತನ ಪಾದ ತೊಳೆದ ಮಧ್ಯಪ್ರದೇಶದ ಮುಖ್ಯಮಂತ್ರಿ..!
ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಾಗರಿಕ ಸಮಾಜವೇ ತಲೆ ತಗ್ಗಿಸುವಂಥ ಹೀನ ಕೃತ್ಯವೊಂದು ನಡೆದಿತ್ತು. ಯುವಕನ ಮುಖದ ಮೇಲೆಯೇ ಬಿಜೆಪಿ ಬೆಂಬಲಿಗನೊಬ್ಬ ಮೂತ್ರ ವಿಸರ್ಜನೆ ಮಾಡಿದ್ದಾನೆ. ಪ್ರವೇಶ್ ಶುಕ್ಲಾ ಎಂಬಾತ ಇಂಥಾ ನೀಚ ಕೃತ್ಯ ಎಸಗಿದ್ದು, ಈತ ಬಿಜೆಪಿ ಶಾಸಕನ ಬೆಂಬಲಿಗ ಹಾಗೂ ಕಾರ್ಯಕರ್ತ ಎನ್ನಲಾಗಿದೆ.. ಶೋಷಣೆಗೆ ಒಳಗಾದ ಯುವಕ ಆದಿವಾಸಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದು, ರಸ್ತೆ ಪಕ್ಕ ಮಲಗಿದ್ದಾಗ ಈತನ ಮೇಲೆ ಮೂತ್ರ ವಿಸರ್ಜನೆ ಮಾಡಲಾಗಿದೆ. ಮೂತ್ರ ವಿಸರ್ಜನೆಯ ವಿಡಿಯೋ ಕೂಡಾ ವೈರಲ್ ಆಗಿತ್ತು. ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು, ಮೂತ್ರ ವಿಸರ್ಜನೆಗೊಳಗಾಗಿದ್ದ ಬುಡಕಟ್ಟು ವ್ಯಕ್ತಿ ದಶ್ಮತ್ ರಾವತ್ ಅವರ ಪಾದಗಳನ್ನು ತೊಳೆದಿದ್ದಾರೆ.
ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ʼಪವಾರ್ʼ ಬಣಗಳ ಶಕ್ತಿ ಪ್ರದರ್ಶನ – ಮಗನ ಮುಂದೆ ಸೈಡ್ ಲೈನ್ ಆದ್ರಾ ಎನ್‌ಸಿಪಿ ವರಿಷ್ಠ?
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ದಶ್ಮತ್ ರಾವತ್ ಅವರ ಪಾದಗಳನ್ನು ತೊಳೆದಿದ್ದಾರೆ. ಮುಖ್ಯಮಂತ್ರಿ ನೆಲದ ಮೇಲೆ ಸ್ಟೂಲ್ ಮೇಲೆ ಕುಳಿತಿದ್ದರೆ, ಬುಡಕಟ್ಟು ವ್ಯಕ್ತಿ ತನ್ನ ಎರಡೂ ಕಾಲುಗಳನ್ನು ಮತ್ತೊಂದು ಸ್ಟೂಲ್ ಮೇಲೆ ಇರಿಸಲಾದ ವಾಷಿಂಗ್ ಬೌಲ್ ಮೇಲೆ ಇರಿಸಿ ಕುರ್ಚಿಯ ಮೇಲೆ ಕುಳಿತಿದ್ದಾರೆ. ಈ ಸಂಬಂಧದ ವಿಡಿಯೋವನ್ನು ಸುದ್ದಿಸಂಸ್ಥೆ ಎಎನ್ಐ ಶೇರ್ ಮಾಡಿದೆ. ಈ ಮಧ್ಯೆ, ಮಧ್ಯಪ್ರದೇಶ ಸಿಎಂ ಬುಡಕಟ್ಟು ವ್ಯಕ್ತಿಯ ಎರಡೂ ಪಾದಗಳನ್ನು ತೊಳೆದ ನಂತರ ಅವರಿಗೆ ಶಾಲು ಹಾಕಿ ಸನ್ಮಾನ ಮಾಡಿದ್ದಲ್ಲದೆ, ಹಾರವನ್ನೂ ಹಾಕಿದ್ದಾರೆ. ಇನ್ನು, ಪಾದಗಳನ್ನು ತೊಳೆಯುವ ಮೊದಲು ಸಿಎಂ ಮುಂದೆ ಚಪ್ಪಲಿ ತೆಗೆಯಲು ದಶ್ಮತ್ ರಾವತ್ ಹಿಂಜರಿದಿದ್ದಾರೆ. ಆದರೆ, ಸಿಎಂ ಅವರೇ ಹಾಗೆ ಮಾಡಲು ಒತ್ತಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲದೆ, ಜೀವನೋಪಾಯಕ್ಕಾಗಿ ಏನು ಮಾಡುತ್ತೀರಿ ಎಂದು ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಪ್ರಶ್ನಿಸಿದ್ದು, ನಂತರ “ಆ ವಿಡಿಯೋ ನೋಡಿ ನನಗೆ ನೋವಾಯಿತು, ನಾನು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ, ಜನರು ನನಗೆ ದೇವರಂತೆ” ಎಂದೂ ಹೇಳಿದರು.
ಪ್ರವೇಶ್ ಶುಕ್ಲಾ ವಿರುದ್ಧ ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಈ ಮೂಲಕ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರ ಆಡಳಿತ ಪಕ್ಷದ ಕಿಡಿಗೇಡಿಗಳನ್ನು ಸಹ ಬಿಡುವುದಿಲ್ಲ ಎಂಬ ಬಲವಾದ ಸಂದೇಶವನ್ನು ರವಾನಿಸಿದೆ. ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಕುಬ್ರಿ ಗ್ರಾಮದಲ್ಲಿ ಮೂತ್ರ ವಿಸರ್ಜನೆಯ ಘಟನೆ ನಡೆದಿದೆ.
ಇನ್ನು ಘಟನೆಯನ್ನ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಬಿಜೆಪಿ ಆಡಳಿತದಲ್ಲಿ ಆದಿವಾಸಿಗಳು ಮತ್ತು ದಲಿತರ ಮೇಲಿನ ದೌರ್ಜನ್ಯಗಳು ಹೆಚ್ಚುತ್ತಿವೆ.. ಬಿಜೆಪಿ ದ್ವೇಷದ ನಿಜವಾದ ಮುಖ ಬಯಲಾಗಿದೆ ಎಂದು ವಾಗ್ದಾಳಿ ನಡೆಸಿದ್ದರು..