ಗೃಹಜ್ಯೋತಿ ಯೋಜನೆಗೆ ಭರ್ಜರಿ ರೆಸ್ಪಾನ್ಸ್ – ಒಂದು ಕೋಟಿಗೂ ಅಧಿಕ ಗ್ರಾಹಕರಿಂದ ನೋಂದಣಿ!
ಬೆಂಗಳೂರು: ರಾಜ್ಯ ಕಾಂಗ್ರೆಸ್ ಚುನಾವಣೆ ಸಂದರ್ಭದಲ್ಲಿ ಐದು ಗ್ಯಾರಂಟಿಗಳನ್ನು ಘೋಷಿಸಿತ್ತು. ಈ ಪೈಕಿ ಗೃಹಜ್ಯೋತಿ ಕೂಡ ಒಂದು. ಈ ಯೋಜನೆಯಡಿ ಪ್ರತಿ ಮನೆಗಳಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವ ಭರವಸೆ ನೀಡಿತ್ತು. ಈ ಯೋಜನೆಗೆ ಸಂಬಂಧಪಟ್ಟ ನೋಂದಣಿ ಕಾರ್ಯಕ್ಕೆ ಸರ್ಕಾರ ಜೂನ್ 18ರಂದು ಅಧಿಕೃತವಾಗಿ ಚಾಲನೆ ನೀಡಲಾಗಿದ್ದು, ಇದೀಗ ಜುಲೈ 5ರವರೆಗೆ ಒಟ್ಟು ಒಂದು ಕೋಟಿಗೂ ಅಧಿಕ ಸಂಖ್ಯೆಯಲ್ಲಿ ಜನರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಚಂದ್ರಯಾನ-3 ಉಡಾವಣೆಗೆ ಸಕಲ ಸಿದ್ದತೆ – ಬಾಹ್ಯಾಕಾಶಕ್ಕೆ ಹಾರಲಿದೆ ಮಾರ್ಕ್-III
ಕಾಂಗ್ರೆಸ್ ಸರಕಾರದ ಮಹತ್ವಾಕಾಂಕ್ಷೆಯ ಗೃಹಜ್ಯೋತಿ ಯೋಜನೆಯ ನೋಂದಣಿಯನ್ನು ಜೂನ್ 18 ರಿಂದ ಆರಂಭಿಸಲಾಗಿತು. ಆರಂಭದಲ್ಲಿ ಸರ್ವರ್ ಸಮಸ್ಯೆಯಿಂದ ನೋಂದಣಿ ಸಮಸ್ಯೆಯಾಗಿತ್ತು. ಆ ಬಳಿಕ ಸರ್ಕಾರ ಎಚ್ಚೆತ್ತುಕೊಂಡು ತಾಂತ್ರಿಕ ದೋಷ ಸರಿಪಡಿಸಿ ಸುಲಭ ನೋಂದಣಿಗೆ ಅವಕಾಶ ಮಾಡಿಕೊಟ್ಟಿತು. ನೋಂದಣಿ ಆರಂಭವಾದ ಕೇವಲ 18 ದಿನಗಳಲ್ಲಿಯೇ ಬರೋಬ್ಬರಿ 1,00,20,163 ಅರ್ಜಿ ಸಲ್ಲಿಕೆಯಾಗಿವೆ.
ಜುಲೈ 5ರ ವರೆಗೆ 1 ಕೋಟಿ 20 ಸಾವಿರದ 163 ಮಂದಿಯಿಂದ ನೊಂದಣಿ ಮಾಡಿಸಿಕೊಂಡಿದ್ದು ಬೆಸ್ಕಾಂ ವಿಭಾಗದಲ್ಲೇ ಅತಿಹೆಚ್ಚು ಜನರು ನೊಂದಾಯಿಸಿಕೊಂಡಿದ್ದಾರೆ. ರಾಜ್ಯದಲ್ಲಿ ವಿದ್ಯುತ್ ಮಾರಾಟಕ್ಕೆ ಸಂಬಂಧಪಟ್ಟಂತೆ ಒಟ್ಟು 6 ಸಂಸ್ಥೆಗಳಿದ್ದು ಅವುಗಳ ಪ್ರದೇಶದಲ್ಲಿ ಒಟ್ಟು ಎಷ್ಟು ಜನರು ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ನೋಂದಾಯಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವ ವಿದ್ಯುತ್ ಕಂಪನಿಯಲ್ಲಿ ಎಷ್ಟು ಅರ್ಜಿ ಸಲ್ಲಿಕೆ?
- ಬೆಸ್ಕಾಂ – 41,16,547
- ಮೆಸ್ಕಾಂ – 11,56,458
- ಹೆಸ್ಕಾಂ -21,09,456
- ಜೆಸ್ಕಾಂ – 10,54,358
- ಸಿಇಎಸ್‌ಇ -15,54,045
- ಎಚ್‌ಆರ್‌ಇಸಿಎಸ್ – 50,425
ಈಗಾಗಲೇ ಉಚಿತ ವಿದ್ಯುತ್ ಸೌಲಭ್ಯವು ಜುಲೈ 1 ರಿಂದಲೇ ಆರಂಭವಾಗಿದೆ. ಜುಲೈ 25ರೊಳಗೆ ಅರ್ಜಿ ಸಲ್ಲಿಸುವವರಿಗೆ ಆಗಸ್ಟ್ ಬಿಲ್‌ನಲ್ಲಿ ಉಚಿತ ವಿದ್ಯುತ್ ಶುಲ್ಕ ಮನ್ನಾವಾಗಲಿದೆ. ಆ ಬಳಿಕ ಅರ್ಜಿ ಸಲ್ಲಿಸುವವರು ಮುಂದಿನ ತಿಂಗಳು (ಸೆಪ್ಟೆಂಬರ್) ಉಚಿತ ವಿದ್ಯುತ್ ಸೌಲಭ್ಯ ಪಡೆದುಕೊಳ್ಳಲಿದ್ದಾರೆ.