ಕೇರಳದಲ್ಲಿ ಮತ್ತೊಂದು ವಿವಾದದ ಕಿಡಿ ಹೊತ್ತಿಸಿದ ‘ನೆರ್ಚಪೆಟ್ಟಿʼ ಚಿತ್ರ! – ಸಿನಿಮಾ ಪೋಸ್ಟರ್ ಹರಿದು ಹಾಕಿ ಆಕ್ರೋಶ
ವಿವಾದಕ್ಕೂ ಚಿತ್ರರಂಗಕ್ಕೂ ಬಿಟ್ಟಿರಲಾರದ ನಂಟು. ಯಾವುದೇ ಚಿತ್ರರಂಗ ಇರಲಿ ಒಂದಲ್ಲ ಒಂದು ಕಾಂಟ್ರವರ್ಸಿ ಸದ್ದು ಮಾಡುತ್ತಲೇ ಇರುತ್ತದೆ. ಇದೀಗ ಮಲೆಯಾಳಂ ಚಿತ್ರರಂಗದಲ್ಲಿ ಹೊಸ ಚಿತ್ರವೊಂದು ಚರ್ಚೆಗೆ ಗ್ರಾಸವಾಗಿದೆ. ಈ ವರ್ಷದ ಆರಂಬದಲ್ಲಿ ʼದಿ ಕೇರಳ ಸ್ಟೋರಿʼ ಸಾಕಷ್ಟು ವಿವಾದಗಳನ್ನು ಸೃಷ್ಟಿಸಿತ್ತು. ಕೇರಳದಲ್ಲಿ ನಡೆದಿದೆ ಎನ್ನಲಾದ ಮತಾಂತರದ ವಿಷಯವನ್ನಿಟ್ಟುಕೊಂಡು ತಯಾರಾದ ಈ ಚಿತ್ರ ಬಿಡುಗಡೆ ಮಾಡದಂತೆ ರಾಜಕೀಯ ನಾಯಕರು ಸಾಕಷ್ಟು ಪ್ರಯತ್ನಪಟ್ಟಿದ್ದರು. ಎಲ್ಲಾ ಅಡೆ ತಡೆ ಮೀರಿ ಬಿಡುಗಡೆಗೊಂಡ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಉತ್ತಮ ಗಳಿಕೆ ಕಂಡಿತ್ತು, ಇದೀಗ ‘ನೆರ್ಚಪೆಟ್ಟಿ’ ಎನ್ನುವ ಮಲೆಯಾಳಂ ಚಿತ್ರ ವಿವಾದಕ್ಕೀಡಾಗಿದೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಗುಡ್ ಬೈ ಹೇಳ್ತಾರಾ ಸಮಂತಾ? – ನಿರ್ಮಾಪಕರಿಗೆ ಅಡ್ವಾನ್ಸ್ ಹಣ ವಾಪಸ್ ಮಾಡಿದ್ಯಾಕೆ?
ಕ್ರೈಸ್ತ ಸನ್ಯಾಸಿಯ ಪ್ರೇಮಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಕ್ರೈಸ್ತ ಸನ್ಯಾಸಿಯ ಪ್ರೇಮಕಥಾ ಹಂದರ ಹೊಂದಿರುವ ನೆರ್ಚಪೆಟ್ಟಿ ಸಿನಿಮಾ ರಿಲೀಸ್ ಮಾಡದಂತೆ ಹಲವರು ಪ್ರತಿಭಟನೆ ನಡೆಸಿದ್ದಾರೆ. ಕೇರಳದಾದ್ಯಂತ ಅಂಟಿಸಿರುವ ಸಿನಿಮಾ ಪೋಸ್ಟರ್ ಅನ್ನು ಹರಿದು ಹಾಕುತ್ತಿದ್ದಾರೆ. ಕ್ರೈಸ್ತ ಸನ್ಯಾಸಿಯರ ಭಾವನೆಗೆ ಧಕ್ಕೆ ಆಗುವಂತಹ ಹಲವಾರು ಸನ್ನಿವೇಶಗಳು ಈ ಚಿತ್ರದಲ್ಲಿ ಇವೆ. ಅಂತಹ ದೃಶ್ಯಗಳು ಸನ್ಯಾಸಿಯರ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಬು ಜಾನ್ ಕೊಕ್ಕವಯಲ್ ಈ ಸಿನಿಮಾವನ್ನು ನಿರ್ದೇಶನ ಮಾಡಿದ್ದು, ಕ್ರೈಸ್ತ ಸನ್ಯಾಸಿಯಾಗಿ ನೈರಾ ನಿಹಾರ್ ಕಾಣಿಸಿಕೊಂಡಿದ್ದಾರೆ. ಅತುಲ್ ಸುರೇಶ್ ಸಿನಿಮಾದ ನಾಯಕ. ಒಂದು ಕಡೆ ಚಿತ್ರತಂಡ ಸಿನಿಮಾವನ್ನು ಎಲ್ಲರಿಗೂ ತೋರಿಸಲು ಮುಂದಾಗಿದ್ದರೆ, ಮತ್ತೊಂದು ಕಡೆ ಸಿನಿಮಾ ಪ್ರದರ್ಶನ ಮಾಡದಂತೆ ತಡೆಯುವ ಪ್ರಯತ್ನಗಳು ನಡೆದಿವೆ. ಈ ಹಿಂದೆಯೂ ಸಿನಿಮಾದ ಬಗ್ಗೆ ಅಪಸ್ವರ ಕೇಳಿ ಬಂದಿತ್ತು. ಚಿತ್ರೀಕರಣ ನಡೆಯುತ್ತಿದ್ದ ಸ್ಥಳಕ್ಕೆ ಬಂದು ಗಲಾಟೆಯನ್ನೂ ಮಾಡಲಾಗಿತ್ತು. ಪೊಲೀಸರ ಸರ್ಪಗಾವಲಿನಲ್ಲಿ ಶೂಟಿಂಗ್ ಮಾಡಲಾಗಿತ್ತು. ಇದೀಗ ನೆರ್ಚಪಟ್ಟಿ ಸಿನಿಮಾ ಜುಲೈ 2ನೇ ವಾರದಂದು ತೆರೆಗೆ ಬರಲು ಸಿದ್ಧವಾಗಿದ್ದು, ಅದನ್ನು ತಡೆಯುವಂತೆ ಪ್ರಯತ್ನವನ್ನು ಮಾಡಲಾಗುತ್ತಿದೆ.