ರಾಜ್ಯದ ಹಲವೆಡೆ ಭಾರಿ ಮಳೆ – ಶಾಲಾ ಕಾಲೇಜುಗಳಲ್ಲಿ ರಜೆ ಘೋಷಣೆ
ಮಂಗಳೂರು: ಕಳೆದೆರಡು ದಿನಗಳಿಂದ ರಾಜ್ಯದಲ್ಲಿ ಮಳೆ ಚುರುಕುಗೊಂಡಿದ್ದು, ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರು ಹಿನ್ನೆಲೆ ಮಂಗಳವಾರ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ಮಂಗಳೂರು, ಉಳ್ಳಾಲ, ಮುಲ್ಕಿ, ಬಂಟ್ವಾಳ ಹಾಗೂ ಮೂಡಬಿದಿರೆ ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಆದೇಶ ಹೊರಡಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಐದು ತಾಲೂಕಿನಲ್ಲಿ ಮಾತ್ರ ಸದ್ಯಕ್ಕೆ ರಜೆ ನೀಡಲಾಗಿದ್ದು, ಉಳಿದ ತಾಲೂಕುಗಳಲ್ಲಿ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವ ಅಧಿಕಾರವನ್ನು ತಹಶೀಲ್ದಾರ್ ಗಳಿಗೆ ನೀಡಲಾಗಿದೆ.
ಇನ್ನು ಮಂಗಳೂರಿನ ಪಂಪ್ ವೆಲ್ ಫ್ಲೈಓವರ್ ನ ಅಂಡರ್ ಪಾಸ್ ಸಹಿತ ಸುತ್ತಮುತ್ತಲಿನ ಜಾಗಗಳಲ್ಲೆಲ್ಲಾ ಸೋಮವಾರ (ಜು.3) ನೀರು ತುಂಬಿ ವಾಹನ ಸವಾರರು ಪರದಾಡಬೇಕಾಯಿತು. ಕೆಲ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿತ್ತು. ನಿಂತ ನೀರಿನಲ್ಲಿ ಯುವಕನೊಬ್ಬ ಈಜಾಡುತ್ತಿರುವ ದೃಶ್ಯ ಎಲ್ಲೆಡೆ ವೈರಲ್ ಆಗುತ್ತಿದೆ.
ಇದನ್ನೂ ಓದಿ: ನಮ್ಮ ಮೆಟ್ರೋದಲ್ಲೂ ಮದ್ಯದ ಬಾಟಲಿ ಸಾಗಾಟಕ್ಕೆ ಅನುಮತಿ? – ಅಧಿಕಾರಿಗಳು ಹೇಳಿದ್ದೇನು?
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಣೆ ಮಾಡಿದೆ. ಕರಾವಳಿ ಕರ್ನಾಟಕದಲ್ಲಿ ಮಂಗಳವಾರದಿಂದ (ಜುಲೈ 04) ಶನಿವಾರದ ನಡುವೆ(ಜುಲೈ 07) ಅತಿ ಹೆಚ್ಚು (115.6 ಮಿ.ಮೀ ನಿಂದ 204.4 ಮಿ.ಮೀ) ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಹವಾಮಾನ ಇಲಾಖೆ ಸೂಚಿಸಿದೆ. ಜುಲೈ 3 ರಿಂದ ಜುಲೈ 7 ರವರೆಗೆ ಕರ್ನಾಟಕ ಕರಾವಳಿಯಲ್ಲಿ 40-45 ಕಿಲೋಮೀಟರ್ ಮತ್ತು 55 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಒಂದು ರೀತಿಯಲ್ಲಿ ಚಂಡಮಾರುತದ ವಾತಾವರಣವಿದೆ ಎಂದು ಐಎಂಡಿ ಹೇಳಿದೆ.