ಕೊರೋನಾ ಎಫೆಕ್ಟ್ – ರಾಜ್ಯದಲ್ಲಿ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಅಪೌಷ್ಟಿಕತೆ!
ಬೆಂಗಳೂರು: ಕೊರೋನಾವೆಂಬ ಮಹಾಮಾರಿ ಜಗತ್ತನ್ನೇ ಅಲ್ಲೋಲ ಕಲ್ಲೋಲವಾಗಿಸಿದೆ. ಕಣ್ಣಿಗೆ ಕಾಣದ ಸೋಂಕು ತ್ವರಿತವಾಗಿ ಹರಡಿ ಎಲ್ಲರೂ ಹೈರಾಣಾದರು. ಕರ್ಫ್ಯೂ, ಲಾಕ್ಡೌನ್ ಹೇರಿದ್ದರೂ ವೈರಸ್ ಎಲ್ಲಾ ಕಡೆ ಹರಡಿತು. ಕೋಟ್ಯಾಂತರ ಮಂದಿ ಮೃತಪಟ್ಟರು. ಅದೆಷ್ಟೋ ಮಂದಿ ಕೂದಲೆಳೆ ಅಂತರದಲ್ಲಿ ಜೀವ ಉಳಿಸಿಕೊಂಡರು. ಕೋವಿಡ್ ಸೋಂಕು ತಗುಲಿದ ಅದೆಷ್ಟೋ ಮಂದಿಯಲ್ಲಿ ಆರೋಗ್ಯ ಸಮಸ್ಯೆಯಿನ್ನೂ ಕಡಿಮೆಯಾಗಿಲ್ಲ. ಇದೀಗ ಕೊರೋನಾ ಬಳಿಕ ಲಕ್ಷ ಲಕ್ಷ ಶಾಲಾ ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂಬ ಶಾಕಿಂಗ್ ವಿಚಾರವೊಂದನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಹಿರಂಗಪಡಿಸಿದೆ.
ಇದನ್ನೂ ಓದಿ: ನಮೀಬಿಯಾದ ಮತ್ತೊಂದು ಚೀತಾ ಕಾಡಿಗೆ ರಿಲೀಸ್ – ಕುನೋ ಅರಣ್ಯದಲ್ಲಿ ಚೀತಾಗಳ ಸಂಖ್ಯೆ 10 ಕ್ಕೆ ಏರಿಕೆ
ರಾಜ್ಯದಲ್ಲಿ ಕೊರೋನಾ ತಗ್ಗಿದ್ರೂ ಅದರ ಪರಿಣಾಮ ನಿಜಕ್ಕೂ ಎಂಥವರೂ ಬೆಚ್ಚಿಬೀಳಿಸುವಂತಿದೆ. ರಾಜ್ಯದಲ್ಲಿ ಬರೊಬ್ಬರಿ 2 ಲಕ್ಷಕ್ಕೂ ಅಧಿಕ ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿರುವುದು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. 5 ವರ್ಷಕ್ಕಿಂತ ಕೆಳಗಿನ ಮಕ್ಕಳು ಅಪೌಷ್ಟಿಕತೆಗೆ ಬಲಿಯಾಗುತ್ತಿದ್ದಾರೆ. ಮಕ್ಕಳ್ಳಲ್ಲಿ ಹೆಚ್ಚಿದ ಅಪೌಷ್ಠಿಕತೆ ಪರಿಣಾಮ ಮಕ್ಕಳಲ್ಲಿ ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂಬ ಆತಂಕಕಾರಿ ಅಂಶ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ವರದಿಯಲ್ಲಿ ಗೊತ್ತಾಗಿದೆ.
ರಾಜ್ಯದಲ್ಲಿ 8,711 ಮಕ್ಕಳಲ್ಲಿ ತೀವ್ರ ಅಪೌಷ್ಟಿಕತೆ ಕಂಡು ಬಂದಿದೆ. 2,23,221 ಮಕ್ಕಳು ಸಾಧಾರಣ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಅಷ್ಟೇ ಅಲ್ಲದೇ, ಅಪೌಷ್ಠಿಕತೆಯ ಕಾರಣಕ್ಕೆ ಮಕ್ಕಳಲ್ಲಿ ಕಡಿಮೆ ತೂಕ, ರಕ್ತಹೀನತೆ ಸಮಸ್ಯೆಗಳು ಮಕ್ಕಳಲ್ಲಿ ಕಂಡು ಬರುತ್ತಿವೆ. ಇದರಿಂದಾಗಿ ಸಾಕಷ್ಟು ಮಕ್ಕಳ ಸಾವನ್ನಪ್ಪುತ್ತಿದ್ದಾರೆ ಎಂದು ವರದಿ ತಿಳಿಸಿದೆ. ಕೊರೋನಾ ಎಫೆಕ್ಟ್ನಿಂದ ಲಕ್ಷಾಂತರ ಮಕ್ಕಳಲ್ಲಿ ಅಪೌಷ್ಟಿಕತೆ ಸಮಸ್ಯೆ ಸೃಷ್ಟಿಯಾಗಿರುವುದು ಪೋಷಕರಲ್ಲಿ ಆತಂಕ ಹುಟ್ಟಿಸಿದೆ.