ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಅಪಘಾತಗಳಿಗೆ ಕುಡುಕರೇ ಕಾರಣ –‘ಕುಡುಕ ಮುಕ್ತ ಹೈವೇ’ಗೆ ಅಲೋಕ್ ಕುಮಾರ್ ಸೂಚನೆ
ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇನಲ್ಲಿ ಅಪಘಾತಗಳ ಸಂಖ್ಯೆ ಶತಕ ದಾಟಿ ಮುನ್ನುಗ್ಗುತ್ತಿದ್ದಂತೆ ಪೊಲೀಸ್ ಇಲಾಖೆ ಹೈ ಅಲರ್ಟ್ ಆಗಿದೆ. ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್ ಹೈವೇ ವೀಕ್ಷಣೆ ಮಾಡಿ ಪೊಲೀಸರಿಗೆ ಕೆಲವೊಂದು ಸೂಚನೆ ಕೂಡಾ ನೀಡಿದ್ದರು. ಆದರೀಗ ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಎನ್‌ಹೆಚ್ ಎಐ ಅಧಿಕಾರಿಗಳು ಹೊಸ ಕಂಪ್ಲೇಂಟ್ ನೀಡಿದ್ದಾರೆ. ಅದು ಏನಪ್ಪಾ ಅಂದರೆ, ರಸ್ತೆ ಅಪಘಾತಕ್ಕೆ ಕುಡುಕರೇ ಕಾರಣ ಎಂದು ದೂರು ನೀಡಿದ್ದಾರೆ. ಎಡಿಜಿಪಿ ಅಲೋಕ್ ಕುಮಾರ್ ಮದ್ದೂರು ತಾಲೂಕಿನ ನಿಡಘಟ್ಟ ಬಳಿ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ವೇ ವೀಕ್ಷಣೆ ಮಾಡಲು ಬಂದ ಸಂರ್ಭದಲ್ಲಿ ಕುಡುಕರಿಂದಲೇ ಅಪಘಾತಗಳು ಹೆಚ್ಚುತ್ತಿವೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಹೆದ್ದಾರಿಗಳಲ್ಲಿ ಎರ್ರಾಬಿರ್ರಿ ವಾಹನ ಚಲಾಯಿಸಿದರೆ ಹುಷಾರ್ – ಶರವೇಗದ ಸಂಚಾರಕ್ಕೆ ಬ್ರೇಕ್ ಹಾಕಲು ಡ್ರೋನ್ ಕಣ್ಗಾವಲು!
ಅಧಿಕಾರಿಗಳ ಸಬೂಬಿನ ಉತ್ತರಕ್ಕೆ ಬೇಸರ ವ್ಯಕ್ತಪಡಿಸಿದ ಅಲೋಕ್ ಕುಮಾರ್, ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಕುಡುಕ ಮುಕ್ತ ಹೈವೆಯನ್ನಾಗಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಲೋಕಲ್ ಬಾರ್ ಆಗಿದೆ. ಭಾನುವಾರ ಬಂದರೆ ಕಾರಿನಲ್ಲಿ ಮ್ಯೂಸಿಕ್ ಆನ್ ಮಾಡಿ ಕುಡಿಯುತ್ತಾರೆ. ಏನಾದರು ಕೇಳಲು ಹೋದರೆ ಆವಾಜ್ ಹಾಕುತ್ತಾರೆ. ಎಕ್ಸ್‌ಪ್ರೆಸ್ ಹೈವೇನಲ್ಲಿ ಕುಡುಕರಿಂದಲೇ ಅಪಘಾತ ಹೆಚ್ಚುತ್ತಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಹೈವೇ ವೀಕ್ಷಣೆ ಬಳಿಕ ಮಾತನಾಡಿದ ಅಲೋಕ್ ಕುಮಾರ್, ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ಹೈವೇ ಪರಿಶೀಲನೆ ಮಾಡಿದ್ದೇವೆ. ಎಕ್ಸ್‌ಪ್ರೆಸ್ ಹೈವೇ ಸಂಬಂಧ ಜನರು ತಮ್ಮ ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಕೆಲವು ಕಡೆ ಸರ್ವಿಸ್ ರಸ್ತೆಗಳಲ್ಲಿ ಫುಟ್ಪಾತ್ ಮಾಡಿಲ್ಲ ಎಂದು ದೂರು ನೀಡಿದ್ದಾರೆ. ಹಲವೆಡೆ ಅಂಡರ್ಪಾಸ್ ನಿರ್ಮಿಸದಿದ್ದರಿಂದ ಮಳೆ ನೀರು ನುಗ್ಗುತ್ತಿದೆ. ಇದರಿಂದಾಗಿ ಎಕ್ಸ್‌ಪ್ರೆಸ್ ಹೈವೇಯಲ್ಲಿ ಅಪಘಾತ ಸಂಭವಿಸುತ್ತಿದೆ ಎಂದರು. ಜನರು ಪ್ರತಿ ದಿನ ಸಾಯುತ್ತಾ ಇದ್ದಾರೆ. ಪ್ರಯಾಣದ ವೇಳೆ ವಾಹನ ಸವಾರರು ಕೂಡ ಎಚ್ಚರಿಕೆ ವಹಿಸಬೇಕು ಎಂದರು.
ಹೆದ್ದಾರಿಯಲ್ಲಿ ಆಗುತ್ತಿರುವ ಅಪರಾಧಗಳನ್ನು ತಡೆಯಲು ಹೈವೇ ಪೆಟ್ರೋಲ್ ಹಾಕಿದ್ದೇವೆ ಎಂದು ಹೇಳಿದ ಅಲೋಕ್ ಕುಮಾರ್, ಮಂಡ್ಯ ಜಿಲ್ಲೆಯ ವ್ಯಾಪ್ತಿಯಲ್ಲಿ 4 ಹೈವೇ ಪೆಟ್ರೋಲ್ ಹಾಕಿದ್ದೇವೆ. ಹೈವೇ ಪೆಟ್ರೋಲ್ ಸಿಬ್ಬಂದಿ ಪರಿಣಾಮಕಾರಿಯಾಗಿ ಕೆಲಸ ಮಾಡಬೇಕು. ಕೆಟ್ಟು ನಿಂತ ಗಾಡಿಗಳ ಕಡೆ ಹೆಚ್ಚು ಗಮನ ಕೊಡಬೇಕು. ಬಹಳಷ್ಟು ಜನ ಸುಮ್ಮನೆ ಜೀವ ಕಳೆದು ಕೊಳ್ಳುತ್ತಾ ಇದ್ದಾರೆ. ಅಪಘಾತ ತಡೆಯಲು ಹೇಗೆ ಕ್ರಮ ತೆಗೆದುಕೊಳ್ಳಬೇಕೆಂದು ಗಮನ ಕೊಡುತ್ತಿದ್ದೇವೆ. ಟೋಲ್ ಬಳಿ ವಾಹನಗಳ ತಪಾಸಣೆ ಮಾಡುತ್ತೇವೆ. ವೇಗದ ಚಾಲನೆ ಮಾಡಿದವರಿಗೆ ದಂಡ ಹಾಕುವ ಜೊತೆಗೆ ಲೈಸೆನ್ಸ್ ರದ್ದು ಮಾಡುತ್ತೇವೆ. ಸದ್ಯ ಹೈವೇಯಲ್ಲಿ ದ್ವಿಚಕ್ರ ವಾಹನಗಳು ಓಡಾಡುತ್ತಿವೆ. ಇವುಗಳ ರದ್ದಿಗೆ ಗೆಜೆಟ್ ನೋಟಿಫಿಕೇಶನ್ ಮಾಡಿಸುತ್ತಿದ್ದಾರೆ ಎಂದರು.