ಎಟಿಎಂ ಸರ್ಕಾರಕ್ಕೆ ಮರ್ಯಾದೆ, ವಚನಬದ್ಧತೆ ಇದ್ದರೆ 10 ಕೆಜಿ ಅಕ್ಕಿಯ ಸಂಪೂರ್ಣ ಹಣ ನೀಡಲಿ – ಬಿಜೆಪಿ ಕಿಡಿ
ಬೆಂಗಳೂರು: ರಾಜ್ಯ ಸರ್ಕಾರದ ಗ್ಯಾರಂಟಿಯಾದ ಅಕ್ಕಿ ಭಾಗ್ಯಕ್ಕೆ ರಾಜ್ಯ ಸರ್ಕಾರ ತಾತ್ಕಾಲಿಕ ಪರಿಹಾರ ಕಂಡುಕೊಂಡಿದೆ. ಪ್ರತಿ ಬಿಪಿಎಲ್ ಕಾರ್ಡುದಾರರಿಗೂ ತಲಾ 10 ಕೆಜಿ ಅಕ್ಕಿ ನೀಡುವುದಾಗಿ ರಾಜ್ಯ ಸರ್ಕಾರ ಗ್ಯಾರಂಟಿ ನೀಡಿತ್ತು. ಆದರೆ, ಸದ್ಯಕ್ಕೆ ಅಕ್ಕಿ ನೀಡಲು ಸಾಧ್ಯವಾಗದ ಕಾರಣ 5 ಕೆಜಿ ಅಕ್ಕಿಯ ಜತೆಗೆ ಹಣ ನೀಡಲು ಸರ್ಕಾರ ತೀರ್ಮಾನ ಮಾಡಿದೆ. ಸರ್ಕಾರದ ಈ ನಿರ್ಧಾರವನ್ನು ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
ಇದನ್ನೂ ಓದಿ: ಅನ್ನಭಾಗ್ಯ ಯೋಜನೆ ಫಲಾನುಭವಿಗಳಿಗೆ ಬಂಪರ್! – 5 ಕೆಜಿ ಅಕ್ಕಿ ಜೊತೆಗೆ ಮತ್ತೆ 5 ಕೆಜಿಗೆ ಹಣ ನೀಡಲು ನಿರ್ಧಾರ
ಈ ಬಗ್ಗೆ ರಾಜ್ಯ ಬಿಜೆಪಿ ಟ್ವೀಟ್ ಮಾಡಿದೆ. ಸಿಎಂ ಸಿದ್ದರಾಮಯ್ಯನವರೇ.. ಕೊನೆಗೂ 5 ಕೆಜಿ ಅಕ್ಕಿ ಕೇಂದ್ರ ಸರ್ಕಾರ ಕೊಡುತ್ತಿದೆ ಎಂದು ಒಪ್ಪಿಕೊಂಡಿರುವುದಕ್ಕೆ ಧನ್ಯವಾದಗಳು. ನಿಮ್ಮ ಎಟಿಎಂ ಸರ್ಕಾರಕ್ಕೆ ಮರ್ಯಾದೆ, ವಚನಬದ್ಧತೆ ಇರುವುದೇ ಆದರೆ, ನೀವು ಕೊಡಬೇಕಿರುವುದು ಕೇವಲ 5 ಕೆಜಿಯ ಅಕ್ಕಿಯ ಹಣವನ್ನಲ್ಲ, 10 ಕೆಜಿ ಅಕ್ಕಿಯ ಹಣವನ್ನು ಎಂದು ಬಿಜೆಪಿ ಟೀಕೆ ಮಾಡಿದೆ.
10 ಕೆಜಿ ಅಕ್ಕಿಯನ್ನು ರಾಜ್ಯ ಸರ್ಕಾರ ಪೂರೈಸಲಿದೆ ಎಂದು ಎದೆ ಬಡಿದುಕೊಂಡಂತೆ, 10 ಕೆಜಿಯ ಸಂಪೂರ್ಣ ಹಣವನ್ನು ಜನರ ಖಾತೆಗಳಿಗೆ ವರ್ಗಾಯಿಸಿ. ಕೊಟ್ಟ ಮಾತು ತಪ್ಪಿ ನಡೆದರೆ ಮೆಚ್ಚಲಾರರು ಕನ್ನಡಿಗರು ಎಂದು ಕಾಂಗ್ರೆಸ್ ಗೆ ಬಿಜೆಪಿ ಲೇವಡಿ ಮಾಡಿದೆ.
ಇನ್ನು ಅಕ್ಕಿ ಬದಲು ಹಣ ನೀಡುವ ಸರ್ಕಾರದ ನಿರ್ಧಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಂಡನೆ ವ್ಯಕ್ತಪಡಿಸಿದ್ದಾರೆ. ಸರ್ಕಾರ ವಚನ ಭ್ರಷ್ಟ ಸರ್ಕಾರವಾಗಿದೆ. ಅಕ್ಕಿ ಕೊಡದೆ ಪರದಾಡುವ ಪರಿಸ್ಥಿತಿ ಉಂಟಾಗಿದೆ. ಹಣ ಏನು ತಿನ್ನೋಕೆ ಆಗುತ್ತಾ ಅಂತಾ ಈ ಹಿಂದೆ ಸಿದ್ದರಾಮಯ್ಯ ಹೇಳಿದ್ರು. ನಿಮಗೆ ಶಕ್ತಿ ಇದ್ರೆ 10 ಅಕ್ಕಿ ಕೊಡಬೇಕು. ಹಣ ಹಾಕುವ ಡೋಂಗಿ ರಾಜಕಾರಣ ಸರಿಯಲ್ಲ. ಇದನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಸರ್ಕಾರ ನುಡಿದಂತೆ ನಡೆಯಬೇಕು. ಇಲ್ಲವಾದಲ್ಲಿ ಸದನದ ಒಳಗೆ ಹಾಗೂ ಹೊರಗೆ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಬಿಜೆಪಿ ವಕ್ತಾರ ರವಿಕುಮಾರ್ ಸಿಎಂ ಸಿದ್ಧರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ರಾಜ್ಯದ ಪ್ರತಿ ಬಿಪಿಎಲ್ ಕುಟುಂಬದವರಿಗೆ 10 ಕೆಜಿ ಅಕ್ಕಿ ಕೊಡುತ್ತೇವೆ ಎಂದು ಹೇಳಿದ್ದೀರಿ. ಹೇಳಿದ ಮಾತಿನಂತೆ 10 ಕೆಜಿ ಅಕ್ಕಿ ಕೊಡಿ. ಇಲ್ಲದಿದ್ದರೆ, ಖುರ್ಚಿ ಖಾಲಿ ಮಾಡಿ ಅಷ್ಟೇ. ಅನ್ನಭಾಗ್ಯ 10 ಕೆಜಿ ಕೊಡ್ತೀವಿ ಅಂತಾ ಹೇಳಿದ್ದೀರಲ್ಲ. ಎಲ್ಲಿ ಹೋಯ್ತು ನಿಮ್ಮ ಅನ್ನಭಾಗ್ಯ ಎಂದು ಪ್ರಶ್ನಿಸಿದ್ದಾರೆ.