ಡೆತ್ ವೇ ಆಗುತ್ತಿದೆ ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ – ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ, ಅಧಿಕಾರಿಗಳಿಗೆ ಖಡಕ್ ಸೂಚನೆ
ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಡೆತ್ ವೇ ಆಗುತ್ತಿದೆ. ದಶಪಥ ರಸ್ತೆಯಲ್ಲಿ ಸಾವಿನ ಸಂಖ್ಯೆ ಸೆಂಚುರಿ ದಾಟಿ, ಮತ್ತಷ್ಟು ಹೆಚ್ಚಾದ ಮೇಲೆ ಕ್ರಮ ಕೈಗೊಳ್ಳುವ ಕಾರ್ಯ ಭರದಿಂದ ಸಾಗುತ್ತಿದೆ. ಬೆಂಗಳೂರು-ಮೈಸೂರು ಎಕ್ಸಪ್ರೆಸ್ ವೇನಲ್ಲಿ ಅಪಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಎಡಿಜಿಪಿ ಅಲೋಕ್ ಕುಮಾರ್ ಅವರು ಬೆಂಗಳೂರು ದಕ್ಷಿಣ ತಾಲೂಕಿನ ಬಾಬಾಸಾಹೇಬರ ಪಾಳ್ಯ ಬಳಿ ಹೈವೇಯನ್ನು ಪರಿಶೀಲಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು – ಮೈಸೂರು ಎಕ್ಸ್‌ಪ್ರೆಸ್ ವೇ ಅವೈಜ್ಞಾನಿಕ ಕಾಮಗಾರಿ ಪತ್ತೆಗೆ ತಾಂತ್ರಿಕ ತಂಡ ರಚನೆ!
ಎಡಿಜಿಪಿ ಅಲೋಕ್ ಕುಮಾರ್ ಅವರಿಗೆ ಎನ್‌ಹೆಚ್ಎಐ ಪಿಡಬ್ಲ್ಯೂ, ಆರ್‌ಟಿಒ, ಆರೋಗ್ಯ ಅಧಿಕಾರಿಗಳು, ಐಜಿಪಿ ರವಿಕಾಂತೇಗೌಡ ಹಾಗೂ ಎಸ್‌ಪಿ ಕಾರ್ತಿಕ್ ರೆಡ್ಡಿ ಸಾಥ್ ನೀಡಿದ್ದಾರೆ. ಪರಿಶೀಲನೆ ಬಳಿಕ ಅಧಿಕಾರಿಗಳ ಜೊತೆ ರಾಮನಗರದಲ್ಲಿ ಅಲೋಕ್ ಕುಮಾರ್ ಸಭೆ ನಡೆಸಿದ್ದಾರೆ. ಇದೇ ವೇಳೆ ಅಲೋಕ್ ಕುಮಾರ್ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಹೆದ್ದಾರಿಯಲ್ಲಿ ಪೊಲೀಸರು ಇದ್ದಾರೆ ಎಂದರೆ ಚಾಲಕರಿಗೆ ಭಯ ಇರುತ್ತದೆ. ಇದರಿಂದ ಕೊಂಚ ಅಪಘಾತ ತಪ್ಪುತ್ತದೆ. ಹೀಗಾಗಿ ನಮ್ಮ ಸಿಬ್ಬಂದಿ ಪೊಲೀಸ್ ಸಮವಸ್ತ್ರದಲ್ಲಿಯೇ ಗಸ್ತು ತಿರುಗಬೇಕು ಎಂದು ಸೂಚನೆ ನೀಡಿದ್ದಾರೆ. ಇದೇ ವೇಳೆ ಎಡಿಜಿಪಿ ಅಲೋಕ್ ಕುಮಾರ್, ಹೆದ್ದಾರಿ ಗಸ್ತಿಗೆ ಇರುವ ವಾಹನಗಳನ್ನು ಪರಿಶೀಲನೆ ಮಾಡಿದರು. ಅಪಘಾತ ತಡೆಗೆ ಹೆದ್ದಾರಿ ವ್ಯಾಪ್ತಿಯ ಪೊಲೀಸ್ ಠಾಣೆಗಳ ಸಿಬ್ಬಂದಿ ಕೈಗೊಂಡಿರುವ ಕ್ರಮಗಳನ್ನು ವಿಚಾರಿಸಿದರು. ಅಪಘಾತದ ಮಾಹಿತಿ ಪುಸ್ತಕವನ್ನು ಪರಿಶೀಲಿಸಿದರು. ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ, ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ತಿಕ್ ರೆಡ್ಡಿ, ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ರಾಹುಲ್ ಈ ಸಂದರ್ಭದಲ್ಲಿ ಜೊತೆಗಿದ್ದರು.
ಇತ್ತೀಚೆಗೆ ಹೆದ್ದಾರಿಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಿತ್ತು. ಐದು ತಿಂಗಳಲ್ಲಿ 105 ಜನ ಸಾವನ್ನಪ್ಪಿದ್ದು, 250 ಅಪಘಾತ ಪ್ರಕರಣ ದಾಖಲಾಗಿವೆ.