ಮತ್ತೊಂದು ರಿಯಲ್ ಕಥೆ ತೆರೆಗೆ ಬರಲು ಸಿದ್ಧ – ʼದಿ ಕೇರಳ ಸ್ಟೋರಿʼ ಚಿತ್ರತಂಡದಿಂದ ಹೊಸ ಸಿನಿಮಾ ಅನೌನ್ಸ್!
ʼದಿ ಕೇರಳ ಸ್ಟೋರಿʼ ಸಿನಿಮಾ ಟ್ರೈಲರ್ ಬಿಡುಗಡೆಯಿಂದ ಸಿನಿಮಾ ಪ್ರದರ್ಶನದವರೆಗೂ ವಿವಾದಗಳಿಂದಲೇ ಸುದ್ದಿಯಾಗಿದೆ. ಈ ಚಿತ್ರ ಪ್ರದರ್ಶನ ಬ್ಯಾನ್ ಮಾಡಬೇಕೆಂದು ಸಾಕಷ್ಟು ಸಂಘಟನೆಗಳು ಒತ್ತಾಯಿಸಿವೆ. ಆದರೂ ಕೂಡ ಈ ಚಿತ್ರ ಇನ್ನೂ ಕೆಲವು ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ದಿ ಕೇರಳ ಸ್ಟೋರಿ ನಿರ್ದೇಶಕ ಸುದೀಪ್ರೋ ಸೇನ್ ಇದೀಗ ಮತ್ತೊಂದು ಸಿನಿಮಾ ಘೋಷಣೆ ಮಾಡಿದ್ದಾರೆ.
ದಿ ಕೇರಳ ಸ್ಟೋರಿ ಸಿನಿಮಾ ನಿರ್ದೇಶಕ ಸುದೀಪ್ತೋ ಸೇನ್ ಹಾಗೂ ಬಂಡವಾಳ ಹೂಡಿದ್ದ ವಿಪುಲ್ ಅಮೃತ್ಲಾಲ್ ಶಾ ಅವರು ಮತ್ತೊಂದು ಹೊಸ ಚಿತ್ರಕ್ಕಾಗಿ ಒಂದಾಗಿದ್ದಾರೆ. ಇಬ್ಬರ ಕಾಂಬಿನೇಷನ್ನಲ್ಲಿ ಮೂಡಿಬರಲಿರುವ ಹೊಸ ಚಿತ್ರಕ್ಕೆ ‘ಬಸ್ತರ್’ಎಂದು ಹೆಸರು ಇಡಲಾಗಿದೆ. ಟೈಟಲ್ ಪೋಸ್ಟರ್ ಅನಾವರಣ ಮಾಡಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ‘ಮಗಳು ಚೆನ್ನಾಗಿ ಹಾಡಿದ್ದಾಳೆ ತುಂಬಾ ಹೆಮ್ಮೆ ಆಗ್ತಿದೆ ಸಾನ್ವಿ’ – ಮುದ್ದಿನ ಪುತ್ರಿಯನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್
ಈಗಾಗಲೇ ಬಸ್ತರ್ ಸಿನಿಮಾದ ಕೆಲಸಗಳು ಸದ್ದಿಲ್ಲದೇ ಶುರುವಾಗಿವೆ ಎಂದು ಹೇಳಲಾಗಿದ್ದು, ಏಪ್ರಿಲ್ 5, 2024ರಂದು ಸಿನಿಮಾ ರಿಲೀಸ್ ಆಗಲಿದೆ ಎಂದು ಹೇಳಿದೆ ಚಿತ್ರತಂಡ. ಇದು ಕೂಡ ನೈಜ ಘಟನೆಯನ್ನು ಆಧರಿಸಿದ ಸಿನಿಮಾವಾಗಿದ್ದು, ಯಾವ ಘಟನೆ ಎನ್ನುವುದನ್ನು ಚಿತ್ರತಂಡ ಹೇಳಿಕೊಂಡಿಲ್ಲ. ಹಾಗಾಗಿ ನಿರ್ದೇಶಕರು ಯಾವ ರೀತಿಯ ಕಥೆಯನ್ನು ಆಯ್ಕೆ ಮಾಡಿಕೊಂಡಿರಬೇಕು ಎನ್ನುವ ಕುತೂಹಲ ಮೂಡಿದೆ.
ಕಡಿಮೆ ಬಜೆಟ್ ನಲ್ಲಿ ತಯಾರಾದ ದಿ ಕಾಶ್ಮೀರ ಫೈಲ್ಸ್ ಸಿನಿಮಾ ಕಡಿಮೆ ಅವಧಿಯಲ್ಲಿ ನೂರಾರು ಕೋಟಿ ಕಲೆಕ್ಷನ್ ಮಾಡಿತು. ವಿವಾದ, ಬೈಕಾಟ್, ಬ್ಯಾನ್ ನಡುವೆಯೂ ಹಲವು ರಾಜ್ಯಗಳಲ್ಲಿ ಇದು ತುಂಬಿದ ಪ್ರದರ್ಶನ ಕಂಡಿತು. ಕೆಲ ರಾಜ್ಯಗಳು ಚಿತ್ರಕ್ಕೆ ತೆರಿಗೆ ವಿನಾಯತಿ ಘೋಷಣೆ ಮಾಡಿದ್ದರಿಂದ ಹೆಚ್ಚಿನ ಮೊತ್ತ ನಿರ್ಮಾಪಕರಿಗೆ ಹರಿದು ಬಂದಿತ್ತು. ಈಗ ಹೊಸದಾಗಿ ತಯಾರಿಸಲು ಹೊರಟಿರುವ ಬಸ್ತರ್ ಸಿನಿಮಾ ಕೂಡ ಮತ್ತೊಂದು ಕಾರಳ ಮುಖವನ್ನು ಬಿಚ್ಚಿಡಲಿದೆ ಎಂದು ಹೇಳಲಾಗುತ್ತಿದೆ. ಸುಳ್ಳಿನ ಹಿಂದಿರುವ ಸತ್ಯವನ್ನು ಈ ಸಿನಿಮಾ ಮೂಲಕ ಹೇಳುವುದಾಗಿ ಪೋಸ್ಟರ್ ನಲ್ಲಿಯೇ ಚಿತ್ರತಂಡ ತಿಳಿಸಿದೆ. ಹಾಗಾಗಿ ಯಾವ ಕಥೆಯನ್ನು ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಪ್ರಶ್ನೆ ಮೂಡಿದೆ.